ಬೆಳಗಾವಿ: ಬೆಳಗಾವಿಯ ಸೌಂದತ್ತಿ ತಾಲೂಕಿನ ಮುರಗೋಡ ಗ್ರಾಮ ಶತಮಾನಗಳಷ್ಟು ಹಳೆಯದಾದ ವಿಶಿಷ್ಟವಾದ ಹಸಿರು ಗಾಜಿನ ಬಳೆ ತಯಾರಿಕೆಗೆ ಹೆಸರುವಾಸಿಯಾಗಿದೆ. ಈ ಗ್ರಾಮ ಈಗ ಉತ್ತರ ಪ್ರದೇಶದ ಫಿರೋಜಾಬಾದ್‌ನ ನಂತರ ದೇಶದ ಎರಡನೇ ಅತ್ಯಾಧುನಿಕ ಬಳೆ ತಯಾರಿಕಾ ಕೇಂದ್ರವಾಗಿ ಹೊರಹೊಮ್ಮುತ್ತಿದೆ. ದಕ್ಷಿಣ ಭಾರತದಲ್ಲಿ ಈ ರೀತಿಯ ಬಳೆ ತಯಾರಿಸುವುದರಲ್ಲಿ ಮೊದಲನೇಯದು.
ವಿವಿಧ ಆಧುನಿಕ ಮತ್ತು ಅಲಂಕಾರಿಕ ವಿನ್ಯಾಸಗಳ ತೀವ್ರ ಪೈಪೋಟಿಯ ಹೊರತಾಗಿಯೂ ಮುರಗೋಡಿನ ಸಾಂಪ್ರದಾಯಿಕ, ಮುರಿಯದ ಗಾಜಿನ ಬಳೆಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಪಾರಂಪರಿಕ ಕರಕುಶಲತೆಯನ್ನು ಉಳಿಸಿಕೊಳ್ಳುವ ಮತ್ತು ವಿಸ್ತರಿಸುವ ನಿಟ್ಟಿನಲ್ಲಿ ಸ್ಥಳೀಯ ಯುವಕರು ಮುರಗೋಡು ಬಳೆ ಉತ್ಪಾದನಾ ಪ್ರತಿಷ್ಠಾನವನ್ನು ಸ್ಥಾಪಿಸಿದ್ದು, ಆಧುನಿಕ ತಯಾರಿಕಾ ಯೋಜನೆಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ರಾಜ್ಯ ಸಚಿವ ಸಂಪುಟ 35 ವರ್ಷಗಳ ಗುತ್ತಿಗೆ ಒಪ್ಪಂದದಡಿ ಗ್ರಾಮದ ಹೊರವಲಯದಲ್ಲಿ ಐದು ಎಕರೆ ಪ್ರದೇಶಕ್ಕೆ ಅನುಮೋದನೆ ನೀಡಿದೆ.
ಹೊಸ ಯೋಜನೆಯಡಿ ಈಗ ಇರುವ ಮರದಿಂದ ಸುಡುವ ಗೂಡುಗಳನ್ನು ಸುಧಾರಿತ ಅನಿಲ-ಉರಿದ ತಂತ್ರಜ್ಞಾನದೊಂದಿಗೆ ಬದಲಾಯಿಸಲಾಗುತ್ತದೆ. ಇದರಿಂದ ಉತ್ಪಾದನಾ ವೇಗ ಮತ್ತು ಉತ್ಪನ್ನದ ಗುಣಮಟ್ಟ ಎರಡನ್ನೂ ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆ ಹೊಂದಲಾಗಿದೆ.
ಜಾಗತಿಕ ಮನ್ನಣೆಗೆ ಮುರಗೋಡು ಬಳೆ ತಯಾರಿಕೆ: ತಲೆಮಾರುಗಳಿಂದ ಮುರಗೋಡಿನಲ್ಲಿ ಕಾಜಗಾರ ಸಮಾಜದವರು ಹಾಗೂ ವಿವಿಧ ಧರ್ಮದ ಜನರು ಸೇರಿದಂತೆ ಕುಟುಂಬಗಳು ಬಳೆ ತಯಾರಿಕೆಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸದ್ಯ ಗ್ರಾಮದಲ್ಲಿ 30 ಘಟಕಗಳಲ್ಲಿ 1,500 ಕ್ಕೂ ಹೆಚ್ಚು ಕುಶಲಕರ್ಮಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮುರಗೋಡು ಬಳೆಗಳು ವಿಶೇಷ ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಉತ್ತರ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಾದ್ಯಂತ ಜಾತ್ರೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ಆಧುನಿಕ ತಂತ್ರಜ್ಞಾನದ ಬೆಂಬಲದೊಂದಿಗೆ ಈ ಸಾಂಪ್ರದಾಯಿಕ ಕಲೆ ಈಗ ಜಾಗತಿಕ ಮನ್ನಣೆ ಗಳಿಸಲಿದೆ ಎಂದು ಮುರಗೋಡ ಬಳೆ ಉತ್ಪಾದನಾ ಪ್ರತಿಷ್ಠಾನದ ಸದಸ್ಯರು ಹೇಳಿದರು.
ಈ ಮಧ್ಯೆ ಕಸಬ್ ಸಮುದಾಯದ ಕುಶಲಕರ್ಮಿಗಳು ಈ ಕರಕುಶಲತೆಯನ್ನು ತಿಳಿಸುವ ಮೂಲಕ ಮೂಲ ತಂತ್ರವನ್ನು ಸಂರಕ್ಷಿಸುತ್ತಿದ್ದಾರೆ. ತಲೆತಲಾಂತರಗಳಿಂದ ಅವರು ಜೇಡಿಮಣ್ಣಿನ ಗೂಡುಗಳಲ್ಲಿ ಬಿಸಿಯಾದ ಗಾಜಿನ ತಿರುಳನ್ನು ಕೇವಲ 10 ರಿಂದ 15 ಸೆಕೆಂಡುಗಳ ಕಾಲ ವೃತ್ತಾಕಾರವಾಗಿ ವೇಗದಿಂದ ತಿರುಗಿಸುವ ಮೂಲಕ ಬಳೆಗಳನ್ನು ತಯಾರಿಸುತ್ತಾರೆ. ಇದಕ್ಕೆ ನಿಖರತೆ ಮತ್ತು ಅನುಭವ ಬೇಕು. ಈಗ ಆಧುನಿಕ ಯಂತ್ರೋಪಕರಣಗಳನ್ನು ಪರಿಚಯಿಸಲಾಗಿದ್ದು, ಉದ್ಯಮವು ಹೊಸ ಸುವರ್ಣ ಯುಗ ಪ್ರವೇಶಿಸುವ ಭರವಸೆ ಹೆಚ್ಚಿದೆ.