ರಾಜ್ಯದಲ್ಲಿ ಮತ್ತೆ ಅಧಿಕಾರ ಹಂಚಿಕೆಯ ಸುದ್ದಿ ಮುನ್ನೆಲೆಗೆ ಬಂದಿದೆ. 5 ವರ್ಷವೂ ನಮ್ಮ ತಂದೆ ಸಿದ್ದರಾಮಯ್ಯನವರೇ ಸಿಎಂ ಆಗಿರುತ್ತಾರೆ. ಇದು ಈಗ ಸೆಟಡ್ಲ್ ವಿಚಾರ. ಹೈ ಕಮಾಂಡ್ ಈ ಬಗ್ಗೆ ನಮ್ಮ ತಂದೆಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ. ಯಾರೋ ಕೆಲವರು ನಾಯಕತ್ವ ಬದಲಾವಣೆಯ ಬಗ್ಗೆ ಪ್ರಯತ್ನ ಮಾಡಿದ್ದರು. ಆ ಪ್ರಯತ್ನಕ್ಕೆ ಹೈ ಕಮಾಂಡ್ ಸೊಪ್ಪು ಹಾಕಿಲ್ಲ. ಅಲ್ಲಿಗೆ ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿ ಅಧಿಕಾರ ನಡೆಸುತ್ತಾರೆ ಎಂದು ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಯತೀಂದ್ರ ಅವರೇ ಈಗ ನಮ್ಮ ಹೈಕಮಾಂಡ್. ಅವರು ಹೇಳಿದ ಮೇಲೆ ಮುಗಿಯಿತು ಎಂದು ತಿರುಗೇಟು ನೀಡಿದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವರದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಯತೀಂದ್ರರ ಈ ಹೇಳಿಕೆಯನ್ನು ಗೌರವದಿಂದ ಸ್ವೀಕರಿಸುತ್ತೇನೆ. ಅವರೇ ನಮ್ಮ ಹೈಕಮಾಂಡ್ ಅಂತ ಒಪ್ಪಿಕೊಳ್ಳೋಣ. ಯತೀಂದ್ರ ಅಥವಾ ಶಿವಗಂಗಾ ಹೇಳಿಕೆ ಬಗ್ಗೆ ಹೆಚ್ಚಿಗೆ ಮಾತನಾಡುವುದಿಲ್ಲ. ಈ ಬಗ್ಗೆ ಏನು ಪ್ರತಿಕ್ರಿಯಿಸಬೇಕೋ ಅದನ್ನು ದೆಹಲಿಯಲ್ಲಿ ಪ್ರತಿಕ್ರಿಯಿಸುತ್ತೇನೆ ಎಂದರು.
ರಾಜ್ಯದಲ್ಲಿ ಸರಣಿ ಬಸ್ ಬೆಂಕಿ ಅವಘಡ ಮುಂದುವರಿದಿದೆ. ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ 40 ಪ್ರಯಾಣಿಕರಿದ್ದ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಬಸ್ ಗೆ ಬೆಂಕಿ ಹೊತ್ತಿಕೊಂಡು ಸಂಪೂರ್ಣ ಕರಕಲಾಗಿ ಸುಟ್ಟು ಹೋಗಿದೆ. ಅದೃಷ್ಟವಶಾತ್ ಬಸ್ ನಲ್ಲಿದ್ದ ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಸಂಜನಾ ಟ್ರಾವೆಲ್ಸ್ ಗೆ ಸೇರಿದ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೆಂಕಿ ಹತ್ತಿಕೊಂಡು ಸಂಪೂರ್ಣ ಬಸ್ ಸುಟ್ಟು ಕರಕಲಾಗಿದೆ. ತುಮಕೂರು-ಬೆಂಗಳೂರು ಹೆದ್ದಾರಿಯಲ್ಲಿ ಇಂದು ಈ ಘಟನೆ ನಡೆದಿದೆ.
ಬಿಹಾರದ ಪ್ರವಾಸಿ ತಾಣವಾದ ರಾಜಗೀರ್‌ನ ದಿಗಂಬರ ಜೈನ ಧರ್ಮಶಾಲೆಯ ಕೊಠಡಿಯೊಂದರಲ್ಲಿ ಬೆಂಗಳೂರಿನ ನಾಲ್ವರು ಪ್ರವಾಸಿಗರು ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತ ಪ್ರವಾಸಿಗರು ಬೆಂಗಳೂರು ಮೂಲದವರಾಗಿದ್ದು, ಅವರು ರಾಜಗೀರ್ ಗೆ ಬರುವ ಮುನ್ನ ನೇಪಾಳಕ್ಕೆ ಭೇಟಿ ನೀಡಿರುವುದಾಗಿ ಹೇಳಿದ್ದರು. ಒಬ್ಬರು ಜಿಆರ್ ನಾಗ ಪ್ರಸಾದ್ ಎಂಬುವವರು ತಮ್ಮ ಆಧಾರ್ ಕಾರ್ಡ್ ನೀಡಿದ್ದು, ಅದರಲ್ಲಿ ಬೆಂಗಳೂರಿನ ವಿಳಾಸ ಇತ್ತು ಎಂದು ಅತಿಥಿ ಗೃಹದ ಉಸ್ತುವಾರಿ ಮುಕೇಶ್ ಜೈನ್ ಅವರು ತಿಳಿಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವೇ ಸಾವಿಗೆ ಕಾರಣ ಗೊತ್ತಾಗಲಿದೆ.
ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮತ್ತೆ ಆಡಳಿತರೂಢ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಆರೋಪ ಪ್ರತ್ಯಾರೋಪಗಳು ಆರಂಭವಾಗಿದ್ದು, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಮೆಟ್ರೋ ಪ್ರಯಾಣ ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಯಾವುದೇ ಪಾತ್ರವಿಲ್ಲ. ಇದು ಕೇಂದ್ರ ಸರ್ಕಾರದ ಕಾಯ್ದೆಯಡಿ ರಚನೆಯಾದ ಸಮಿತಿಯ ತೀರ್ಮಾನವಾಗಿದ್ದು, ಅದನ್ನು ಜಾರಿಗೊಳಿಸುವುದು ಕಾನೂನಿನ ಅನಿವಾರ್ಯತೆಯಾಗಿದೆ ಎಂದು ಸಿಎಂ ತಿಳಿಸಿದ್ದಾರೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ರಚಿಸುವ ಸ್ವತಂತ್ರ 'ದರ ನಿಗದಿ ಸಮಿತಿ' ಮಾತ್ರ ದರಗಳನ್ನು ನಿರ್ಧರಿಸುತ್ತದೆ. ಈ ಶಿಫಾರಸುಗಳನ್ನು ತಿರಸ್ಕರಿಸುವ ಅಥವಾ ಬದಲಾಯಿಸುವ ಕಾನೂನುಬದ್ಧ ಅಧಿಕಾರ ರಾಜ್ಯ ಸರ್ಕಾರಕ್ಕಾಗಲಿ ಅಥವಾ ಬಿಎಂಆರ್‌ಸಿಎಲ್‌ಗಾಗಲಿ ಇರುವುದಿಲ್ಲ. ಆದ್ದರಿಂದ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವನ್ನು ದೂಷಿಸುವುದು ವಾಸ್ತವಿಕವಾಗಿ ತಪ್ಪು ಮತ್ತು ಉದ್ದೇಶಪೂರ್ವಕವಾಗಿ ದಾರಿತಪ್ಪಿಸಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಅನ್ನು ಬೀದರ್ ವರೆಗೆ ವಿಸ್ತರಿಸಬೇಕು ಎಂದು ದೇವೇಗೌಡ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದ್ದಾರೆ. ಇನ್ನು ಬೆಂಗಳೂರು, ಮಂಡ್ಯ, ಮೈಸೂರು ರೈಲು ಮಾರ್ಗದ ವಿವಿಧ ಬೇಡಿಕೆಗಳ ಬಗ್ಗೆ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೇಂದ್ರದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಮಾತುಕತೆ ನಡೆಸಿದ್ದು, ಬೆಂಗಳೂರು ನಗರದಿಂದ ಮೈಸೂರು ನಡುವೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸಾರ್ವಜನಿಕರ ರೈಲ್ವೆ ಬೇಡಿಕೆಗಳ ಬಗ್ಗೆ ಮನವಿಗಳನ್ನು ಸಲ್ಲಿಸಿದರು. ಬೆಂಗಳೂರು- ಮುಂಬೈ ನಡುವೆ ಹೊಸ ರೈಲು, ರಾಮನಗರದಲ್ಲಿ ಒಡೆಯರ್ ಎಕ್ಸ್ ಪ್ರೆಸ್ ನಿಲುಗಡೆಗೆ ಕೇಂದ್ರ, ಮಂಡ್ಯ, ಮದ್ದೂರಿನಲ್ಲಿ ಮುರುಡೇಶ್ವರ ರೈಲು ನಿಲುಗಡೆಗೆ ಕುಮಾರಸ್ವಾಮಿ ಮನವಿ ಸಲ್ಲಿಸಿದ್ದಾರೆ.