ಹುಬ್ಬಳ್ಳಿ: ಕಳಸಾ-ಬಂಡೂರಿ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದ ಅನುಮತಿ ವಿಳಂಬವಾಗುತ್ತಿರುವುದರಿಂದ ಕಾಮಗಾರಿ ಕಾರ್ಯ ಆರಂಭಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಹುಬ್ಬಳ್ಳಿ ಸಮೀಪದ ಶಿರಗುಪ್ಪಿ ಗ್ರಾಮದಲ್ಲಿ ರೂ.350 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಅಣ್ಣಿಗೇರಿಗೆ ಯುಜಿಡಿ ಮಾಡುವ ಕುರಿತು ಬಜೆಟ್ ನಲ್ಲಿ ಚರ್ಚಿಸಲಾಗುವುದು. ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಲು ಶ್ರಮಿಸಲಾಗುವುದು ಎಂದು ಹೇಳಿದರು.
ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಲಾಗಿದೆ. ಅಲ್ಲದೇ ವಿವಿಧ ಕಾಮಗಾರಿಗಳ ಉದ್ಘಾಟನೆ ಮಾಡಲಾಗಿದೆ. ಶಾಸಕ ಎನ್.ಎಚ್.ಕೋನರಡ್ಡಿ ನಿಷ್ಠಾವಂತ ಕೆಲಸಗಾರ, ಪ್ರಾಮಾಣಿಕ ಶಾಸಕರಾಗಿದ್ದಾರೆ. ರೂ.200 ಕೋಟಿ ವೆಚ್ಚದಲ್ಲಿ ಬೆಣ್ಣೆಹಳ್ಳ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಯೋಜನೆ ಪ್ರಾರಂಭಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಅವರ ಒತ್ತಾಸೆ ಕಾರಣ.
ಈ ಹಿಂದೆ ರೂ.1610 ಕೋಟಿ ಅಂದಾಜು ವೆಚ್ಚದ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ವಿಳಂಬ ಮಾಡಿದ ನಂತರ ರೂ.200 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುತ್ತಿದೆ. ಈ ಹಳ್ಳದ ಪ್ರವಾಹದಿಂದ ಸುಮಾರು 37 ಹಳ್ಳಿಗಳು ಹಾಗೂ 20 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿತ್ತು. ಜೊತೆಗೆ ರೂ.150 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ ಎಂದು ಸುಳ್ಳು ಹರಡಲಾಗುತ್ತಿದೆ. ಆದರೆ ಹಲವಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. 2018 ರಲ್ಲಿ ಸುಪ್ರೀಂ ಕೋರ್ಟ್ ಕಳಸಾ ಬಂಡೂರಿ ಯೋಜನೆಗೆ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಕಳಸಾ ಬಂಡೂರಿ ಯೋಜನೆಗೆ ಟೆಂಡರ್ ಕರೆದು ಏಜೆನ್ಸಿಗೆ ಒಪ್ಪಿಸಲಾಗಿದೆ. ಕೇಂದ್ರ ಸರ್ಕಾರ ಅನುಮತಿ ಕೊಟ್ಟರೆ ನಾಳೆನೇ ಕಾಮಗಾರಿ ಆರಂಭಿಸಲಾಗುವುದು. ಕೇಂದ್ರ ಸರ್ಕಾರದಿಂದ ಅನುಮತಿ ದೊರೆಯಬೇಕಿದೆ. ಕೇಂದ್ರ ವನ್ಯಜೀವಿ ಮಂಡಳಿಯು ಬೇಗನೆ ಅನುಮತಿ ನೀಡಬೇಕು ಎನ್ನುವುದು ನಮ್ಮ ಒತ್ತಾಯ ಎಂದು ಹೇಳಿದರು.
ಮೂರನೇ ಹಂತದ ಕೃಷ್ಣಾ ಮೇಲ್ದಂಡೆ ಯೋಜನೆ ಕೇಂದ್ರ ಸರ್ಕಾರದಿಂದ ನಿಂತು ಹೋಗಿದೆ. ಕೇಂದ್ರ ಸರ್ಕಾರ ಕೂಡಲೇ ಗೆಜೆಟ್ ನೋಟಿಫಿಕೇಶನ್ ಮಾಡಬೇಕು. ಮೇಕೆದಾಟು ಯೋಜನೆಗೆ ಸಹ ಕೇಂದ್ರ ಸರ್ಕಾರ ಅನುಮತಿ ನೀಡಬೇಕು. ಈಗಾಗಲೇ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ ಆಗಿದೆ. 65 ಟಿಎಂಸಿ ಕುಡಿಯುವ ನೀರಿನ ಯೋಜನೆ ಇದಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ರೂ.5300 ಕೋಟಿ ಕೊಡುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಯಾವುದೇ ಹಣ ಇದುವರೆಗೂ ನೀಡಿಲ್ಲ. ರಾಷ್ಟ್ರೀಯ ಯೋಜನೆಯಾಗಿ ಮಾಡುತ್ತೇವೆ ಎಂದು ಬಣ್ಣಿಸಿದ್ದರು.
2005 ರಲ್ಲಿ ಮನ್ರೇಗಾ ಯೋಜನೆ ಜಾರಿ ಮಾಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ಕಳೆದ ಡಿಸೆಂಬರ್ ನಲ್ಲಿ ಈ ಯೋಜನೆಯನ್ನು ರದ್ದು ಮಾಡಿದೆ. ಈ ಮೂಲಕ ಯುವಕರಿಗೆ, ಮಹಿಳೆಯರಿಗೆ, ಕೆಲಸವಿಲ್ಲದವರಿಗೆ ಕೆಲಸ ಕೊಡುವ ಯೋಜನೆಯನ್ನು ಕೈ ಬಿಡಲಾಗಿದೆ. ನಾವು ನಂಬಿಕೆ ಇಟ್ಟಿಕೊಂಡಿದ್ದು ಮನುಷ್ಯ ಧರ್ಮ, ಮಾನವೀಯತೆ ಧರ್ಮ. ಬಸವಣ್ಣನವರು ಇವನಾರವ ಇವನಾರವ ಎಂದೆನಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆನಿಸಯ್ಯಾ... ಎಂದು ಹೇಳಿದ್ದಾರೆ. ಸುಮಾರು 1.16 ಲಕ್ಷ ಕೋಟಿ ಹಣವನ್ನು ಗ್ಯಾರಂಟಿ ಯೋಜನೆಗೆ ವ್ಯಯಿಸಲಾಗಿದೆ. ಪ್ರತಿ ಕುಟಂಬಕ್ಕೆ 4-5 ಸಾವಿರ ಪ್ರತಿ ತಿಂಗಳು ನೀಡಲಾಗುತ್ತಿದೆ. ವರ್ಷಕ್ಕೆ 50 ಸಾವಿರ ಹಣ ನೇರವಾಗಿ ಮುಟ್ಟಲಿದೆ. ಸುಮಾರು 25 ಸಾವಿರ ಕೋಟಿ ನೀರಾವರಿಗೆ ಖರ್ಚು ಮಾಡಲಾಗಿದೆ. 4.5 ಲಕ್ಷ ಕೋಟಿಗೂ ಹೆಚ್ಚು ಹಣ ಕೇಂದ್ರಕ್ಕೆ ಕೊಡುತ್ತಿದ್ದೇವೆ. ಆದರೆ ಕೇಂದ್ರದಿಂದ 60 ಸಾವಿರ ಕೋಟಿ ಮಾತ್ರ ರಾಜ್ಯಕ್ಕೆ ಮರಳುತ್ತಿದೆ.
ಮನ್ರೇಗಾ ಯೋಜನೆಯನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಹೋರಾಟ ಮಾಡುತ್ತೇವೆ. ಮನ್ರೇಗಾ ಅಡಿ ಕೆಲಸ ಮಾಡುತ್ತಿದ್ದವರಲ್ಲಿ ಶೇ. 53 ಮಹಿಳೆಯರು, ಶೇ.17 ರಷ್ಟು ಪರಿಶಿಷ್ಟ ಜಾತಿ ಹಾಗೂ ಶೇ. 11ರಷ್ಟು ಪರಿಶಿಷ್ಟ ಪಂಗಡ ವರ್ಗದವರಿದ್ದಾರೆ. ಇವರೆಲ್ಲರೂ ವಿಬಿ ಜಿ ರಾಮ್ ಜಿ ಇಂದ ಕೆಲಸ ಕಳೆದುಕೊಳ್ಳಲಿದ್ದಾರೆಂದು ತಿಳಿಸಿದರು.