ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ ತಿಂಗಳಲ್ಲಿ ತಮ್ಮ 17ನೇ ರಾಜ್ಯ ಬಜೆಟ್ ಮಂಡಿಸಲು ಸಿದ್ಧರಾಗುತ್ತಿರುವ ಈ ಸಂದರ್ಭದಲ್ಲಿ, ದ್ವಂದ್ವ ಪರಿಸ್ಥಿತಿ ಎದುರಿಸುತ್ತಿದ್ದಾರೆಯೇ ಎಂಬ ಸಂದೇಹ ಉಂಟಾಗಿದೆ.
ಕೇಂದ್ರ ಸರ್ಕಾರವು ಹೊಸ ವಿಕಸಿತ ಭಾರತ–ಉದ್ಯೋಗ ಮತ್ತು ಜೀವನೋಪಾಯ ಗ್ಯಾರಂಟಿ ಮಿಷನ್ (Gramin) ಯೋಜನೆಗೆ ದೇಶವ್ಯಾಪಿಯಾಗಿ 95,692 ಕೋಟಿ ರೂಪಾಯಿ ಅನುದಾನ ನೀಡಿರುವುದರ ಜೊತೆಗೆ, ಯುಪಿಎ ಸರ್ಕಾರ ಕಾಲದ ಮನ್ರೇಗಾ (ಸುಮಾರು 30,000 ಕೋಟಿ ರೂ) ಯೋಜನೆಗೂ ಹಣ ಮೀಸಲಿಟ್ಟಿರುವ ಹಿನ್ನೆಲೆಯಲ್ಲಿ, ಹೊಸ VB-G RAM G ಯೋಜನೆಯನ್ನು ತಿರಸ್ಕರಿಸುವ ಪಕ್ಷದ ನಿಲುವಿಗೆ ಬದ್ಧರಾದರೆ ವರ್ಷಕ್ಕೆ ಸುಮಾರು 4,800 ಕೋಟಿ ರೂಪಾಯಿ ಕೇಂದ್ರ ಅನುದಾನವನ್ನು ತಿರಸ್ಕರಿಸುವ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.
ಸಿದ್ದು ಸರ್ಕಾರಕ್ಕೆ ಏನು ಸವಾಲು?
2026–27ರ ಬಜೆಟ್ ಸಿದ್ಧಪಡಿಸುತ್ತಿರುವ ಸಿದ್ದರಾಮಯ್ಯ ಸರ್ಕಾರವು ಹಣಕಾಸಿನ ಶಿಸ್ತು ಮತ್ತು ರಾಜಕೀಯ ನಿಲುವಿನ ನಡುವೆ ಸಮತೋಲನ ಸಾಧಿಸುವ ಸವಾಲನ್ನು ಎದುರಿಸುತ್ತಿದೆ.
ಒಂದೆಡೆ, ಇನ್ನು ಆರು ತಿಂಗಳಲ್ಲಿ ಹಂತ ಹಂತವಾಗಿ ಸ್ಥಗಿತಗೊಳ್ಳಲಿರುವ ಮನ್ರೇಗಾ ಯೋಜನೆಗೆ ಹಣ ಒದಗಿಸಬೇಕಾಗಿದೆ. ಮತ್ತೊಂದೆಡೆ, ಸಂಸತ್ತಿನಲ್ಲಿ ವಿಧೇಯಕ ಅಂಗೀಕಾರವಾದ ಬಳಿಕ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತಿರುವ ವಿಬಿ-ಜಿ ರಾಮ್ ಜಿ ಯೋಜನೆಗೆ ಅನುದಾನ ನೀಡಬೇಕೇ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಈ ಯೋಜನೆಯನ್ನು ರದ್ದುಪಡಿಸುವಂತೆ ದೇಶವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದು, ಇದನ್ನು “ಕಪ್ಪು ಕಾನೂನು” ಹಾಗೂ “ಬಡವರ ವಿರೋಧಿ ಕ್ರಮ” ಎಂದು ಕರೆಯುತ್ತಿದೆ.
ಇದರ ಜತೆ, ರಾಜ್ಯ ವಿಧಾನಮಂಡಲ ಹೊಸ ಯೋಜನೆಯನ್ನು ತಿರಸ್ಕರಿಸಿ, ಮನ್ರೇಗಾ ಯೋಜನೆಯನ್ನು ಮುಂದುವರಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿದೆ.
2026–27ನೇ ವರ್ಷವು ಪರಿವರ್ತನಾ ಅವಧಿಯಾಗಿದ್ದು, ಈ ಅವಧಿಯಲ್ಲಿ ಮನ್ರೇಗಾ ಯೋಜನೆಯ ಬಾಕಿ ಬಿಲ್ಲುಗಳನ್ನು ಪಾವತಿಸಿ, ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸಿದ ನಂತರ ಅನುದಾನವನ್ನು ಸ್ಥಗಿತಗೊಳಿಸಲಾಗುತ್ತದೆ.
ಕೇಂದ್ರದ ಅನುದಾನ ಪಡೆಯಲು ರಾಜ್ಯಗಳು ವಿಬಿ-ಜಿ ರಾಮ್ ಜಿ ಯೋಜನೆ ಜಾರಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸಿ, ಪ್ರತಿ ವರ್ಷ ಜನವರಿ 31ರೊಳಗೆ ವಾರ್ಷಿಕ ಕಾರ್ಯಯೋಜನೆ ಮತ್ತು ಕಾರ್ಮಿಕ ಬಜೆಟ್ ನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಬೇಕಾಗುತ್ತದೆ.
ಕರ್ನಾಟಕವು ಮನ್ರೇಗಾಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸುವುದರ ಜೊತೆಗೆ ವಿಬಿ-ಜಿ-ರಾಮ್-ಜಿ ಯೋಜನೆಗೂ ಹಣ ಮೀಸಲಿಡಬೇಕಾದ ಪರಿಸ್ಥಿತಿಯಿದೆ. ಬರಪೀಡಿತ ರಾಜ್ಯವಾಗಿರುವ ಕರ್ನಾಟಕದಲ್ಲಿ, ಗ್ರಾಮೀಣ ಉದ್ಯೋಗ ಯೋಜನೆ ಇಲ್ಲದಿದ್ದರೆ 6,000ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣಕ್ಕೆ ತೊಂದರೆ ಉಂಟಾಗುವುದಷ್ಟೇ ಅಲ್ಲ, ವಲಸೆ ಹೆಚ್ಚುವ ಅಪಾಯವೂ ಇದೆ.
ಹಣಕಾಸು ತಜ್ಞರು, ಮಹತ್ವದ ಕೇಂದ್ರ ಅನುದಾನವನ್ನು ಕಳೆದುಕೊಳ್ಳುವ ಬದಲು VB-G RAM G ಯೋಜನೆಯನ್ನು ವಿರೋಧದ ನಡುವೆಯೇ ಜಾರಿಗೆ ತರುವಂತೆ ಕರ್ನಾಟಕಕ್ಕೆ ಸಲಹೆ ನೀಡಿರುವುದಾಗಿ ವರದಿಯಾಗಿದೆ.
ಕರ್ನಾಟಕ ಎಷ್ಟು ಅನುದಾನ ಕಳೆದುಕೊಳ್ಳಲಿದೆ?
ಒಂದು ಅಂದಾಜಿನ ಪ್ರಕಾರ, ಪ್ರಸ್ತುತ ಮನ್ರೇಗಾ ದಿನಗೂಲಿ ದರ 370 ರೂ ಆಗಿದ್ದು, ಸಾಮಗ್ರಿ ವೆಚ್ಚವನ್ನು 40% ಸೇರಿಸಿದರೆ ಪ್ರತಿ ವ್ಯಕ್ತಿ-ದಿನದ ಒಟ್ಟು ವೆಚ್ಚ 616 ರೂ ಆಗುತ್ತದೆ.
ರಾಜ್ಯದ ವಾರ್ಷಿಕ ಗುರಿ 13 ಕೋಟಿ ವ್ಯಕ್ತಿ-ದಿನಗಳನ್ನು ಪರಿಗಣಿಸಿದರೆ, ಒಟ್ಟು ಮಾನದಂಡದ ಅನುದಾನ ವರ್ಷಕ್ಕೆ ಸುಮಾರು 8,000 ಕೋಟಿ ರೂ ಆಗುತ್ತದೆ. ಇದರಲ್ಲಿ ಕೇಂದ್ರದ 60% ಪಾಲು ಸುಮಾರು 4,800 ಕೋಟಿ ರೂ ಆಗುತ್ತದೆ.
ಹೊಸ ಕಾನೂನಿನಡಿ ಪ್ರಮುಖ ಬದಲಾವಣೆಯೆಂದರೆ, ಬೇಡಿಕೆ ಆಧಾರಿತ ಕಾರ್ಮಿಕ ಬಜೆಟ್ ವ್ಯವಸ್ಥೆಯಿಂದ ಕೇಂದ್ರ ಸರ್ಕಾರ ನಿಗದಿಪಡಿಸುವ ಮಾನದಂಡದ ಅನುದಾನ (Normative Allocation) ಪದ್ಧತಿಗೆ ಬದಲಾವಣೆ ಮಾಡಲಾಗಿದೆ.
ಕಾನೂನಿನ ಕಲಂ 4(5) ಪ್ರಕಾರ, ನಿಗದಿತ ಮಾನದಂಡಗಳ ಆಧಾರದ ಮೇಲೆ ರಾಜ್ಯವಾರು ಅನುದಾನವನ್ನು ನಿಗದಿಪಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ನೀಡಲಾಗಿದೆ. ಕಲಂ 4(6) ಪ್ರಕಾರ, ಈ ನಿಗದಿತ ಮಿತಿಯನ್ನು ಮೀರಿದ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ.
ರಾಜ್ಯ ಅಧಿಕಾರಿಗಳ ಪ್ರಕಾರ, ಮನ್ರೇಗಾ ಯೋಜನೆಯಲ್ಲಿಯೂ ಗ್ರಾಮ ಪಂಚಾಯಿತಿ ಮಟ್ಟ ಸೇರಿದಂತೆ ವಿವಿಧ ಇಲಾಖೆಗಳ ತಾಂತ್ರಿಕ ಸಾಮರ್ಥ್ಯ ಸೀಮಿತವಾಗಿರುವ ಕಾರಣ, ರಾಜ್ಯಗಳು ಕಾರ್ಮಿಕ ಬಜೆಟ್ ಮಿತಿಯನ್ನು ಸಾಮಾನ್ಯವಾಗಿ ಮೀರಿದ ಸಂದರ್ಭಗಳು ಕಡಿಮೆ.
ಮನ್ರೇಗಾ ಅಡಿಯಲ್ಲಿ ನಿಧಿಗಳ ದುರುಪಯೋಗ, ಮೇಲ್ವಿಚಾರಣೆಯಲ್ಲಿ ಕೊರತೆ ಮತ್ತು ನಿರ್ಮಿಸಲಾದ ಆಸ್ತಿಗಳ ಕಡಿಮೆ ಗುಣಮಟ್ಟ ಕುರಿತು ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. 2024–25ರಲ್ಲಿ ದೇಶವ್ಯಾಪಿಯಾಗಿ ₹193.67 ಕೋಟಿ ರೂಪಾಯಿ ದುರ್ಬಳಕೆಯ ಆರೋಪಗಳು ಕೇಳಿಬಂದಿದ್ದವು.
ಇದೇ ವೇಳೆ, ಕೇವಲ 7.61% ಮಾತ್ರ ಯೋಜನೆಯಡಿ ನಿಗದಿತ ಕೆಲಸದ ದಿನಗಳನ್ನು ಪೂರ್ಣಗೊಳಿಸಿದ್ದವು. ಪೂರ್ಣ 100 ದಿನಗಳ ಉದ್ಯೋಗವನ್ನು ಪೂರ್ಣಗೊಳಿಸಿದ್ದವು.
ಹಳೆಯ ಯೋಜನೆಯನ್ನು ಸಮರ್ಥಿಸಿಕೊಂಡ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಕಳೆದ ಮೂರು ವರ್ಷಗಳಲ್ಲಿ 21,411 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳ ಮೂಲಕ ಕರ್ನಾಟಕವು ಮನ್ರೇಗಾ ಯೋಜನೆಯ ಪ್ರಮುಖ ಲಾಭಾರ್ಥಿಯಾಗಿದ್ದು, 16 ಲಕ್ಷ ಆಸ್ತಿಗಳನ್ನು ನಿರ್ಮಿಸಿರುವುದರ ಜೊತೆಗೆ 80.2 ಲಕ್ಷ ಮನೆಗಳಿಗೆ ಉದ್ಯೋಗ ಒದಗಿಸಲಾಗಿದೆ ಎಂದು ಹೇಳಿದರು.
ಮುಖ್ಯಮಂತ್ರಿಯ ಅಂತಿಮ ನಿರ್ಧಾರಕ್ಕಾಗಿ ಹಿರಿಯ ಸರ್ಕಾರಿ ಅಧಿಕಾರಿಗಳು ನಿರೀಕ್ಷೆಯಲ್ಲಿದ್ದಾರೆ. ಐದು ಗ್ಯಾರಂಟಿ ಯೋಜನೆಗಳ ಪರಿಣಾಮವಾಗಿ ರಾಜ್ಯ ಖಜಾನೆ ಈಗಾಗಲೇ ಒತ್ತಡದಲ್ಲಿರುವುದರಿಂದ, ಪ್ರತ್ಯೇಕವಾಗಿ ರಾಜ್ಯ ನಿಧಿಯಿಂದ ಗ್ರಾಮೀಣ ಉದ್ಯೋಗ ಯೋಜನೆ ನಡೆಸಲು ಹೆಚ್ಚಿನ ಅವಕಾಶವಿಲ್ಲ ಎಂಬ ಕಾರಣದಿಂದ, ಕೇಂದ್ರದ ನೆರವನ್ನು ರಾಜ್ಯ ತ್ಯಜಿಸುವ ಸಾಧ್ಯತೆ ಕಡಿಮೆ ಎಂಬುದನ್ನು ಅಧಿಕಾರಿಗಳು ಗೌಪ್ಯವಾಗಿ ಒಪ್ಪಿಕೊಳ್ಳುತ್ತಿದ್ದಾರೆ.
ಮಾರ್ಚ್‌ನಲ್ಲಿ ಮಂಡನೆಯಾಗುವ ಬಜೆಟ್ ಮೂಲಕ ರಾಜ್ಯ ಸರ್ಕಾರವು ಗ್ರಾಮೀಣ ಉದ್ಯೋಗ ನೀತಿಯಲ್ಲಿ ಹಣಕಾಸು ವ್ಯವಹಾರಿಕತೆಯನ್ನು ಆಯ್ಕೆ ಮಾಡುತ್ತದೆಯೇ ಅಥವಾ ರಾಜಕೀಯ ವಿರೋಧದ ನಿಲುವನ್ನು ಮುಂದುವರಿಸುತ್ತದೆಯೇ ಎಂಬುದು ಸ್ಪಷ್ಟವಾಗಲಿದೆ.