ಬೆಂಗಳೂರು: ಭೂಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ರಾಜ್ಯ ಸರ್ಕಾರಕ್ಕೆ ನಿರಾಳವನ್ನು ನೀಡಿದ್ದು, ತೀರ್ಪನ್ನು ಸರ್ಕಾರ ಸ್ವಾಗತಿಸಿದೆ.
ಈ ತೀರ್ಪು ಸಾರ್ವಜನಿಕ ಹಣ ರಕ್ಷಣೆ ಮತ್ತು ಜನರ ಕಲ್ಯಾಣ ಹಾಗೂ ಅಭಿವೃದ್ಧಿಗೆ ಅದರ ಸಮರ್ಪಕ ಬಳಕೆಗೆ ಮಹತ್ವದ ಮೈಲುಗಲ್ಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸುಪ್ರೀಂ ಕೋರ್ಟ್ ನೀಡಿರುವ ಈ ತೀರ್ಪು ರಾಜ್ಯದ ಆರ್ಥಿಕ ಸ್ಥಿತಿಗತಿಗಳ ಮೇಲೆ ವ್ಯಾಪಕ ಪರಿಣಾಮ ಬೀರುವಂತದ್ದಾಗಿದ್ದು, ಕರ್ನಾಟಕ ಸರ್ಕಾರದ ಯಶಸ್ವಿ ಕಾನೂನು ಸವಾಲಿನ ಫಲವಾಗಿ ಪಣದಲ್ಲಿದ್ದ ಹತ್ತು ಸಾವಿರ ಕೋಟಿ ರು.ಗಳ ಸಾರ್ವಜನಿಕ ಹಣ ಉಳಿಸಲು ಅತ್ಯಮೂಲ್ಯವಾದ ಅವಕಾಶ ನೀಡಿದೆ ಎಂದು ಕಂದಾಯ ಇಲಾಖೆ ತಿಳಿಸಿದೆ.
ಸುಪ್ರೀಂ ಕೋರ್ಟ್ ಭೂಸ್ವಾಧೀನಕ್ಕೆ ಸಂಬಂಧಿಸಿದ 530 ಮೇಲ್ಮನವಿಗಳನ್ನು ಅನುಮೋದಿಸಿದ ಮಹತ್ವದ ತೀರ್ಪು ನೀಡಿದೆ.
ಈ ಮೇಲ್ಮನವಿಗಳು ಪ್ರಮುಖ ನೀರಾವರಿ ಯೋಜನೆಗಳು ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ್ದವು.
ಭೂಸ್ವಾಧೀನ ಅಧಿಕಾರಿಗಳು ವಿವಿಧ ಸಾರ್ವಜನಿಕ ಯೋಜನೆಗಳಿಗಾಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ, ಭೂಮಾಲೀಕರು ನೀಡಿದ ಪರಿಹಾರ ಮೊತ್ತಕ್ಕಿಂತ ಹೆಚ್ಚುವರಿ ಪರಿಹಾರಕ್ಕಾಗಿ ನಾಗರಿಕ ನ್ಯಾಯಾಲಯಗಳನ್ನು (ರೆಫರೆನ್ಸ್ ಕೋರ್ಟ್‌ಗಳು) ಸಂಪರ್ಕಿಸಿದ್ದರು. ಬಹುತೇಕ ಪ್ರಕರಣಗಳಲ್ಲಿ, ಕೋರ್ಟ್‌ಗಳು ಮಾರುಕಟ್ಟೆ ಮೌಲ್ಯ ಮತ್ತು ಮಾರ್ಗಸೂಚಿ ಮೌಲ್ಯವನ್ನು ಪರಿಗಣಿಸದೇ ಅತಿಯಾದ ಪರಿಹಾರ ಹೆಚ್ಚಳಕ್ಕೆ ಆದೇಶ ನೀಡಿದ್ದವು.
ಈ ಹೆಚ್ಚುವರಿ ಪರಿಹಾರಗಳನ್ನು ಪ್ರಶಅನಿಸಿ 2013ರ ಭೂಸ್ವಾಧೀನ ಕಾಯ್ದೆಯ ಸೆಕ್ಷನ್ 74 ಅಡಿಯಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಮೇಲ್ಮನವಿಗಳನ್ನು ಸಲ್ಲಿಸಿತ್ತು. ಆದರೆ 120 ದಿನಕ್ಕಿಂತ ಹೆಚ್ಚಿನ ವಿಳಂಬವನ್ನು ಕ್ಷಮಿಸಲಾಗದು ಎಂಬ ಕಾರಣ ನೀಡಿ, ಹೆಚ್ಚಿನ ಮೇಲ್ಮನವಿಗಳನ್ನು ಹೈಕೋರ್ಟ್ ತಿರಸ್ಕರಿಸಿತ್ತು.
ರಾಜ್ಯ ಖಜಾನೆಗೆ ಗಂಭೀರ ಹಣಕಾಸು ಪರಿಣಾಮ ಉಂಟಾಗುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ, ಕರ್ನಾಟಕ ನೀರಾವರಿ ನಿಗಮ ಮತ್ತು ಇತರರು ಸುಪ್ರೀಂ ಕೋರ್ಟ್ ಮೆಟ್ಟೇರಿದ್ದರು. ಇದೀಗ ಸುಪ್ರೀಂ ಕೋರ್ಟ್ ಮೇಲ್ಮನವಿಗಳನ್ನು ಅಂಗೀಕರಿಸಿ ರಾಜ್ಯ ಸರ್ಕಾರಕ್ಕೆ ರಿಲೀಫ್ ನೀಡಿದೆ.
ವಿಳಂಬವಾಗಿ ಮೇಲ್ಮನವಿಗಳನ್ನು ಸಲ್ಲಿಸಿರುವ ರೀತಿಯ ಬಗ್ಗೆ ಸುಪ್ರೀಂ ಕೋರ್ಟ್ ಗಂಭೀರ ಆತಂಕ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಮೇಲ್ಮನವಿಗಳನ್ನು ಸಮಯಕ್ಕೆ ಸರಿಯಾಗಿ ಸಲ್ಲಿಸಲು ಪರಿಣಾಮಕಾರಿ ನಿರ್ವಹಣೆ, ಮೇಲ್ವಿಚಾರಣೆ ಮತ್ತು ಜವಾಬ್ದಾರಿ ವ್ಯವಸ್ಥೆಗಳನ್ನು ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕರಣಗಳು ಮತ್ತು ನ್ಯಾಯಾಲಯದ ದಾಖಲೆ ಸಲ್ಲಿಕೆಯಲ್ಲಿ ವಿಳಂಬ ತಡೆಯಲು ಬಲಿಷ್ಠ ಸಂಸ್ಥಾತ್ಮಕ ವ್ಯವಸ್ಥೆ ಮತ್ತು ವಿಶೇಷ ಸಾಫ್ಟ್‌ವೇರ್ ವ್ಯವಸ್ಥೆಗಳನ್ನು ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.