ರಾಜ್ಯ

News Wrap 14-02-26 | 1000 ದಿನ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ: BJP-Congress ವಾಗ್ವಾದ; ಅಮೆರಿಕದಲ್ಲಿ ಕನ್ನಡಿಗ MS ವಿದ್ಯಾರ್ಥಿ ನಾಪತ್ತೆ; ಚುನಾವಣಾ ಅಕ್ರಮ ಆರೋಪ: 'ಸುಪ್ರೀಂ'ನಲ್ಲಿ ಯತ್ನಾಳ್ ಗೆ ಜಯ!

1000 ದಿನ ಪೂರೈಸಿದ್ದಕ್ಕೆ ಸಾಧನಾ ಸಮಾವೇಶ: BJP-Congress ವಾಗ್ವಾದ

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 1 ಸಾವಿರ ದಿನಗಳು ಕಳೆದಿವೆ. ಹೀಗಾಗಿ ಹಾವೇರಿಯಲ್ಲಿ ಇಂದು ಕಾಂಗ್ರೆಸ್​ ಭೂ ಗ್ಯಾರಂಟಿ ಸಮರ್ಪಣಾ ಹೆಸರಿನಲ್ಲಿ ಸಾಧನಾ ಸಮಾವೇಶ ನಡೆಯಿತು. ಇನ್ನು ಸಮಾವೇಶದಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನ ಸಿಎಂ ಸಿದ್ದರಾಮಯ್ಯ ವಿತರಿಸಿದರು. ಗ್ಯಾರಂಟಿಗಳನ್ನ ಯಾರು ವಿರೋಧ ಮಾಡಿದ್ದರೋ ಇಂದು ಅವರೇ ನಮ್ಮ ಗ್ಯಾರಂಟಿಗಳನ್ನ ಅನುಸರಿಸುತ್ತಿದ್ದಾರೆ. ಜನಸೇವೆಯ‌ ಸಾರ್ಥಕ ಆಡಳಿತವನ್ನು ರಾಜ್ಯ ಸರ್ಕಾರ‌ ನೀಡಿದೆ. 2 ವರ್ಷ 9 ತಿಂಗಳಲ್ಲಿ ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದೇವೆ. ಈಗಾಗಲೇ 243 ಭರವಸೆಗಳನ್ನು ಈಡೇರಿಸಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲಾ ಭರವಸೆ ಈಡೇರಿಸುತ್ತೇವೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಸಿದ್ದರಾಮಯ್ಯ ಹೇಳಿದರು. ಕಾಂಗ್ರೆಸ್ ಸರ್ಕಾರದ ಸಾಧನಾ ಸಮಾವೇಶಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಸಾವಿರ ದಿನದಲ್ಲಿ ತನ್ನ ಸಾಧನೆ ಶೂನ್ಯ ಎಂಬುದನ್ನು ಮರೆತು ಬಿಟ್ಟಿದೆ ಎಂಬುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದರು.

ಈ ಹಿಂದಿನಂತೆ ನ. 3, 4 ಮತ್ತು 5ರಂದೇ ಹಂಪಿ ಉತ್ಸವ ನಡೆಯಲಿದೆ: ಸಿದ್ದರಾಮಯ್ಯ

ವಿಜಯನಗರ ಸಾಮ್ರಾಜ್ಯದ ವೈಭವ, ಇತಿಹಾಸವನ್ನು ಜನರಿಗೆ ತಿಳಿಸುವ ಅಗತ್ಯ ಇದೆ. ಈ ಹಿಂದಿನಂತೆ ನವೆಂಬರ್‌ 3, 4 ಮತ್ತು 5ರಂದೇ ಉತ್ಸವವನ್ನು ನಡೆಸುವುದು ಸೂಕ್ತ. ಹೀಗಾಗಿ ನವೆಂಬರ್‌ನಲ್ಲೇ ಮುಂದಿನ ಹಂಪಿ ಉತ್ಸವ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದರು. ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಆಯೋಜಿಸಿದ್ದ ಐತಿಹಾಸಿಕ ಹಂಪಿ ಉತ್ಸವ - 2026 ಅನ್ನು ಉದ್ಘಾಟಿಸಿ ಮಾತನಾಡಿದ ಸಿಎಂ, ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಾಡು ಸಂಪತ್ಭರಿತವಾಗಿತ್ತು. ನಮ್ಮ ಸರ್ಕಾರ ಕೂಡ ಸಾಹಿತ್ಯ, ಸಂಸ್ಕೃತಿ, ಕಲೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ವಿಜಯನಗರ ಕಾಲದಲ್ಲಿ ಸಂಪ್ಭರಿತವಾದ ಹಂಪಿಯ ಹಿರಿಮೆಯನ್ನು ಹಂಪಿ ಉತ್ಸವದಿಂದ ತಿಳಿಯಬಹುದಾಗಿದೆ ಎಂದರು. ಇನ್ನು ಹಂಪಿ ಉತ್ಸವ ಉದ್ಘಾಟನಾ ವೇಳೆ ಸಮಾರಂಭದ ವೇದಿಕೆ ಬಳಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಆದರೆ ಯಾರಿಗೂ ಹಾನಿಯಾಗಿಲ್ಲ.

ಹಸಿ ಕಸ, ಒಣ ಕಸ ವಿಂಗಡಿಸಿ ಕೊಡುವಂತೆ ಹೇಳಿದ್ದಕ್ಕೆ @GBA ಪೌರಕಾರ್ಮಿಕನ ಮೇಲೆ ಹಲ್ಲೆ: ಇಬ್ಬರ ಬಂಧನ

ಹಸಿ ಕಸ, ಒಣ ಕಸ ವಿಂಗಡಿಸಿ ಕೊಡುವಂತೆ ಹೇಳಿದ್ದಕ್ಕೆ ಪೌರಕಾರ್ಮಿಕನ ಮೇಲೆ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆಯೊಂದು ದಾವಣಗೆರೆಯ ಮೆಹಬೂಬ್ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಕಸದೊಂದಿಗೆ ಮಗುವಿನ ಡೈಪರ್ ಕೂಡ ತಂದಿದ್ದಾರೆ. ಈ ವೇಳೆ ಪೌರ ಕಾರ್ಮಿಕರು ಮಗುವಿನ ಡೈಪರ್ ಅನ್ನು ಪ್ರತ್ಯೇಕವಾಗಿ ಕೊಡಿ ಎಂದು ತಿಳಿಸಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಪೌರಕಾರ್ಮಿಕರ ನಡುವೆ ಮಾತಿನ ಚಕಮಕಿ ನಡೆದು, ವಿಕೋಪಕ್ಕೆ ತಿರುಗಿದೆ. ಪೌರ ಕಾರ್ಮಿಕರ ಮೇಲೆ ಅಜ್ಜು ಮತ್ತು ನೂರ್ ಎಂಬುವರು ಹಲ್ಲೆ ನಡೆಸಿದ್ದರು. ನಂತರ ಪೌರ ಕಾರ್ಮಿಕರು ಕಸ ಸಾಗಿಸುವ ಆಟೋಗಳನ್ನು ಅಜಾದ್ ನಗರ ಪೊಲೀಸ್ ಠಾಣೆ ಮುಂಭಾಗ ತಂದು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದು ಆರೋಪಿಗಳ ಬಂಧನಕ್ಕೆ ಆಗ್ರಹಿಸಿದರು. ನಂತರ ಪಿಐ ವಸಂತ್ ನೇತೃತ್ವದ ತಂಡ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ.

ಅಮೆರಿಕದಲ್ಲಿ ಕರ್ನಾಟಕ ಮೂಲದ MS ವಿದ್ಯಾರ್ಥಿ ಸಾಕೇತ್ ನಾಪತ್ತೆ

ಕೆನಡಾದಲ್ಲಿ ಕರ್ನಾಟಕ ಮೂಲದ ಚಂದನ್ ಕುಮಾರ್ ಎಂಬುವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ಬೆನ್ನಲ್ಲೇ ಇದೀಗ ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕ ಮೂಲದ 24 ವರ್ಷದ ವಿದ್ಯಾರ್ಥಿ ಸಾಕೇತ್ ನಾಪತ್ತೆಯಾಗಿದ್ದಾರೆ. ಸಾಕೇತ್ ಕ್ಯಾಲಿಫೋರ್ನಿಯಾದ ಬರ್ಕ್ಲಿ ವಿಶ್ವವಿದ್ಯಾಲಯದಲ್ಲಿ MS ಓದುತ್ತಿದ್ದರು. ಕಳೆದ ಎರಡು ದಿನಗಳಿಂದ ಸಾಕೇತ್ ನನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ಮತ್ತು ಸ್ನೇಹಿತರು ತಿಳಿಸಿದ್ದಾರೆ. ಸಾಕೇತ್ ಕೊನೆಯ ಬಾರಿಗೆ ಫೆಬ್ರವರಿ 12ರಂದು ಕಾಣಿಸಿಕೊಂಡಿದ್ದರು. ಇದೀಗ ಪಾರ್ಕ್ ಹಿಲ್ಸ್ ನೆರೆಹೊರೆಯ ಮನೆ ಬಾಗಿಲಿನಲ್ಲಿ ಸಾಕೇತ್ ನ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್‌ ಬ್ಯಾಗ್ ಪತ್ತೆಯಾಗಿದೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಸಾಕೇತ್ ಕಣ್ಮರೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ.

ಚುನಾವಣಾ ಅಕ್ರಮ ಆರೋಪ: SupremeCourt ನಲ್ಲಿ Yatnal ಗೆ ಜಯ

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ವಿಜಯಪುರ ನಗರ ಕ್ಷೇತ್ರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್ ಗೆ ಸುಪ್ರೀಂ ಕೋರ್ಟ್‌ನಲ್ಲೂ ಭಾರಿ ಮುಖಭಂಗವಾಗಿದೆ. ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿಯುವ ಮೂಲಕ ಯತ್ನಾಳ್ ಅವರ ಶಾಸಕ ಸ್ಥಾನದ ಮೇಲಿದ್ದ ತೂಗುಗತ್ತಿ ದೂರವಾಗಿದೆ. ಕಳೆದ ಚುನಾವಣೆಯಲ್ಲಿ ಯತ್ನಾಳ್ ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಹಮೀದ್ ಮುಶ್ರೀಫ್ ಹೈಕೋರ್ಟ್ ಮೊರೆ ಹೋಗಿದ್ದರು. 2025ರ ಜುಲೈ 18ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಹಮೀದ್ ಮುಶ್ರೀಫ್ ಅವರ ಅರ್ಜಿಯನ್ನು ವಜಾ ಮಾಡಿತ್ತು. ಅಷ್ಟೇ ಅಲ್ಲದೆ, ಅರ್ಜಿದಾರರಿಗೆ ದಂಡವನ್ನೂ ವಿಧಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬ್ರಹ್ಮಪುತ್ರ ನದಿ ಕೆಳಗೆ ದೇಶದ ಮೊದಲ ರಸ್ತೆ-ರೈಲು ಸುರಂಗಕ್ಕೆ ಕೇಂದ್ರ ಸಂಪುಟ ಅನುಮೋದನೆ

ಹಂಪಿ ಉತ್ಸವ: ಸ್ವಂತ ಖರ್ಚಿನಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡಿಸಿದ ಸಚಿವ ಜಮೀರ್!

ಬಳ್ಳಾರಿ- ಹೊಸಪೇಟೆ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಅಕ್ರಮ ಚುನಾವಣೆ ಆರೋಪ: ಸುಪ್ರೀಂ ಕೋರ್ಟ್ ನಲ್ಲಿ ಯತ್ನಾಳ್‌ಗೆ ಜಯ, ಅಬ್ದುಲ್ ಹಮೀದ್‌ಗೆ ಮುಖಭಂಗ

T20 ವಿಶ್ವಕಪ್ 2026: ಭಾರತ - ಪಾಕ್ ಪಂದ್ಯ, ಹ್ಯಾಂಡ್ ಶೇಕ್ ಇರುತ್ತಾ- ಸೂರ್ಯ ಕುಮಾರ್ ಯಾದವ್ ಮಹತ್ವದ ಹೇಳಿಕೆ!

SCROLL FOR NEXT