ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಕಾರ್ಯವ್ಯಾಪ್ತಿಯನ್ನು ನಿರ್ಬಂಧಿಸುವ ಕುರಿತು ವಾರ್ತಾ ಇಲಾಖೆಗೆ ಸರ್ಕಾರ ಪತ್ರ ಬರೆದಿದೆ. ಪತ್ರದಲ್ಲಿ, ಮಾಧ್ಯಮಗಳು ರಾಜಕೀಯ ನಾಯಕರ ಪ್ರತಿಕ್ರಿಯೆಗಳನ್ನು (News byte) ಪೋರ್ಟಿಕೋ ಅಥವಾ ಕೆಂಗಲ್ ಗೇಟ್ ಬಳಿಯ ನಿಗದಿತ ಸ್ಥಳದಲ್ಲಿ ಮಾತ್ರ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಸಚಿವರು ಅಥವಾ ಶಾಸಕರನ್ನು ವಿಧಾನಸೌಧದ ಇತರ ಯಾವುದೇ ಸ್ಥಳದಲ್ಲಿ ಹಿಂಬಾಲಿಸಿ ಪ್ರತಿಕ್ರಿಯೆ ತೆಗೆದುಕೊಳ್ಳಬಾರದು ಎಂದು ನಿಯಮ ಜಾರಿಗೊಳಿಸಲಾಗಿದೆ. ಸರ್ಕಾರದ ಈ ನಡೆ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಖಂಡಿಸಿದ್ದಾರೆ.
38 ತಿಂಗಳ ವೇತನ ಬಾಕಿ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಮುಷ್ಕರ ಕೈಗೊಂಡಿದ್ದು, ಫೆ.19 ರ ಸಂಜೆ ಬಳಿಕ ಬಿಎಂಟಿಸಿ ಕೆಎಸ್‌ಆರ್‌ಟಿಸಿ ಸಂಚಾರದಲ್ಲಿ ವ್ಯತ್ಯಯ ಆಗುವ ಸಾಧ್ಯತೆ ಇದೆ. ಸಾರಿಗೆ ನೌಕರರು ನಾಳೆ 'ಬೆಂಗಳೂರು ಚಲೋ' ಕೈಗೊಳ್ಳಲಿದ್ದಾರೆ. ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ 4 ನಿಗಮದ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ನಾಳೆ ಸಂಜೆ 4 ಗಂಟೆವರೆಗೆ ಸರ್ಕಾರಕ್ಕೆ ಡೆಡ್‌ಲೈನ್ ನೀಡಲಾಗಿದೆ. ಬೇಡಿಕೆ ಸಂಬಂಧ ನಿರ್ಣಯ ಕೈಗೊಳ್ಳದಿದ್ದರೆ ಸಾರಿಗೆ ಬಂದ್ ಆಗಲಿದೆ. ಮುಷ್ಕರದ ಸೂಚನೆ ಹಿನ್ನೆಲೆ ಸಾರಿಗೆ ನೌಕರರಿಗೆ ಕೆಎಸ್‌ಆರ್‌ಟಿಸಿ ಶಿಸ್ತು ಕ್ರಮದ ಎಚ್ಚರಿಕೆ ನೀಡಿದೆ.
ಬೆಂಗಳೂರಲ್ಲಿ ಮತ್ತೊಮ್ಮೆ ಕಸ ಸಂಗ್ರಹಣೆ ಸಮಸ್ಯೆ ತಲೆ ಎತ್ತಿದೆ. ಮಿಟ್ಟಗಾನಹಳ್ಳಿ ಮತ್ತು ಬೆಳ್ಳಳ್ಳಿ ಪ್ರದೇಶಗಳ ಬಳಿ ನೂರಾರು ಕಸ ತುಂಬಿದ ಲಾರಿಗಳು ರಸ್ತೆಯಲ್ಲೇ ನಿಲ್ಲುತ್ತಿವೆ. ಸುಮಾರು 250ಕ್ಕೂ ಹೆಚ್ಚು ಲಾರಿಗಳು ಕಸ ತುಂಬಿ ನಿಂತಿವೆ ಎಂದು ವರದಿಗಳಿವೆ. ಇದರಿಂದ ನಗರದ ಅನೇಕ ಭಾಗಗಳಲ್ಲಿ ಕಸ ಸಂಗ್ರಹಣೆ ನಿಂತುಹೋಗಿದ್ದು, ರಸ್ತೆಗಳಲ್ಲಿ ಕಸ ಗುಂಡಿಗಳು ಹೆಚ್ಚಾಗುವ ಭಯ ಉಂಟಾಗಿದೆ. ಅಸಮರ್ಪಕ ಕಸ ವಿಲೇವಾರಿ ಈ ಸಮಸ್ಯೆಗೆ ಕಾರಣ ಎಂದು ಸ್ಥಳೀಯ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಗ್ರಾಮಸ್ಥರು ಗ್ರಾಮ ಅಭಿವೃದ್ಧಿ ನಿಧಿಗಳು 2 ವರ್ಷಗಳಿಂದ ಬಿಡುಗಡೆಯಾಗದೇ ಇರುವುದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ಬಿಬಿಎಂಪಿ ಕಸ ಲಾರಿಗಳನ್ನು ಸೈಟ್‌ಗೆ ಬಿಡದಂತೆ ಅಡ್ಡಿಪಡಿಸಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿಗೆ ಅಡ್ಡಿ ಉಂಟು ಮಾಡಲಾಗುತ್ತಿರುವ ವಿಚಾರವಾಗಿ ಬಿಜೆಪಿ ಶಾಸಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಿಗದಿತ ಪ್ರದೇಶದಲ್ಲಿ ಕಸ ಸುರಿಯಲು ಅಡ್ಡಿ ಉಂಟು ಮಾಡಿದ್ದಲ್ಲಿ ಆ ಶಾಸಕರ ಮನೆ ಅಥವಾ ಬಿಜೆಪಿ ಕಚೇರಿ ಮುಂದೆ ಕಸ ಹಾಕಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಲ್ಲಿ ಪಕ್ಷದ ಕಚೇರಿಗಳನ್ನು ಸ್ಥಾಪಿಸಲು ಕಾಂಗ್ರೆಸ್ 31 ಸರ್ಕಾರಿ ಜಾಗಗಳನ್ನು ಅಕ್ರಮವಾಗಿ ಪಡೆದುಕೊಂಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಈ ಕುರಿತು ಮಾತನಾಡಿರುವ ವಿಧಾನಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸರ್ಕಾರ ಪಡೆದುಕೊಂಡ ಜಾಗಗಳನ್ನು ಸಂಬಂಧಿಸಿದ ಇಲಾಖೆಗೆ ಹಿಂತಿರುಗಿಸಬೇಕು ಎಂದು ಆಗ್ರಹಿಸಿದರು. ಜನರಿಗಿಲ್ಲದ ಜಾಗ, ಅತ್ಯಂತ ಕಡಿಮೆ ದರದಲ್ಲಿ ಕಾಂಗ್ರೆಸ್ ಭವನಕ್ಕೆ ಹೇಗೆ ಲಭ್ಯ? ಕಾಂಗ್ರೆಸ್ ಸರ್ಕಾರ ಜನಹಿತವನ್ನು ಮರೆತು, ಕೇವಲ ಸ್ವಪಕ್ಷದ ಹಿತಾಸಕ್ತಿಗಷ್ಟೇ ಸೀಮಿತವಾಗಿರುವುದು ಅತ್ಯಂತ ದುರ್ದೈವದ ಸಂಗತಿ. ಪ್ರತಿ ವಾರ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ತಪ್ಪದೇ ಚರ್ಚೆಗೆ ಬರುವ ವಿಷಯವೇನೆಂದರೆ, ಅದು ಕೇವಲ “ಕಾಂಗ್ರೆಸ್ ಭವನಕ್ಕೆ ಜಾಗ ನೀಡುವುದು”. ರ್ಕಾರದ ಬೊಕ್ಕಸದಿಂದ ಅಥವಾ ಸಾರ್ವಜನಿಕ ಆಸ್ತಿಯಿಂದ ನಿರ್ಮಾಣವಾಗುವ ಈ ಭವನಗಳಿಂದ ಜನಸಾಮಾನ್ಯರಿಗೆ ಸಿಗುವ ಲಾಭವೇನು ಎಂಬುದಕ್ಕೆ ಸರ್ಕಾರ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಗುತ್ತಿಗೆದಾರರಿಗೆ ಬಾಕಿ ಉಳಿದಿರುವ ಹಣ ಸುಮಾರು 37 ಸಾವಿರ ಕೋಟಿ ರೂ.ಗಳ ವರೆಗೆ ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಮಾರ್ಚ್ 5 ರಂದು ಬೆಂಗಳೂರಿನಲ್ಲಿ ಬೃಹತ್ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ಆರ್.ಮಂಜುನಾಥ್ ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಬಾಕಿ ಪಾವತಿ ಆಗದಿದ್ದರೆ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಿ ಹೋರಾಟ ನಡೆಸಲಾಗುವುದು. ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ಮುಖ್ಯಮಂತ್ರಿಯವರಿಗೆ, ಸಚಿವರನ್ನು ಹಾಗೂ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರನ್ನು ಹಲವಾರು ಸಾರಿ ಬೇಟಿ ಮಾಡಿ ಚರ್ಚಿಸಿದರೂ ಸಹ ಏನೂ ಪ್ರಯೋಜನವಾಗಿರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.