ಬೆಂಗಳೂರು: ಚಿಕ್ಕಮಗಳೂರಿನ ಎಸ್ಟೇಟ್‌ವೊಂದರಲ್ಲಿ ಕಾಡಾನೆ ದಾಳಿಯಲ್ಲಿ 42 ವರ್ಷದ ಕೃಷಿ ಕೆಲಸ ಮಾಡುತ್ತಿದ್ದ ಬೋರಮ್ಮ ಸಾವನ್ನಪ್ಪಿದ್ದರು. ಈ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಚಿಕ್ಕಮಗಳೂರು ಜಿಲ್ಲೆಯ ಹುಣಸೇಹಳ್ಳಿ ಬಳಿಯ ಎಸ್ಟೇಟ್‌ನಲ್ಲಿ ಏಳು ದಿನಗಳ ಅವಧಿಯಲ್ಲಿ ಇಬ್ಬರು ಕೂಲಿ ಕೆಲಸಗಾರರು ಮೃತಪಟ್ಟಿದ್ದರು. ಅರಣ್ಯದಂಚಿನ ಪ್ರದೇಶಗಳಲ್ಲಿ ಕಾಡು ಪ್ರಾಣಿಗಳ ಓಡಾಟದ ಬಗ್ಗೆ ಮಾಹಿತಿಯನ್ನು ಕಮಾಂಡ್ ಸೆಂಟರ್‌ಗೆ ತಲುಪಿದ ತಕ್ಷಣ ತೋಟಗಾರಿಕಾ ಬೆಳೆಗಾರರ ಸಂಘಗಳು, ಕಾರ್ಮಿಕ ಸಂಘಗಳು ಮತ್ತು ಸ್ಥಳೀಯ ನಾಯಕರೊಂದಿಗೆ ಹಂಚಿಕೊಳ್ಳುವಂತೆ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಮಾನವ-ವನ್ಯಜೀವಿ ಸಂಘರ್ಷ ವಲಯಗಳಲ್ಲಿರುವ ಗ್ರಾಮಗಳಲ್ಲಿ ಸ್ಥಳೀಯ ನಾಯಕರು ಮತ್ತು ಭೂಮಾಲೀಕರಿಗೆ ಮಾಹಿತಿಯ ತ್ವರಿತ ಪ್ರಸರಣಕ್ಕೆ ಅನುಕೂಲವಾಗುವಂತೆ ವಾಟ್ಸಾಪ್ ಗುಂಪುಗಳನ್ನು ರಚಿಸುವಂತೆ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮಾನವ ಜೀವ ಅಮೂಲ್ಯ ಎಂದು ಒತ್ತಿ ಹೇಳಿದ ಸಚಿವರು, ಪದೇ ಪದೇ ಸಂಭವಿಸುತ್ತಿರುವ ಸಾವುಗಳ ಬಗ್ಗೆ ದುಃಖ ವ್ಯಕ್ತಪಡಿಸಿದರು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ದಿನದ 24 ಗಂಟೆಗಳ ಕಾಲ ಕಟ್ಟೆಚ್ಚರ ವಹಿಸುವಂತೆ ಕೇಳಿಕೊಂಡರು. ವನ್ಯಜೀವಿ ಸೆರೆಹಿಡಿಯುವ ಕಾರ್ಯಾಚರಣೆಯ ಸಮಯದಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ಕಡ್ಡಾಯವಾಗಿ ಹೇರುವಂತೆ ನಿರ್ದೇಶಿಸಿದರು. ಅಲ್ಲದೆ ಥರ್ಮಲ್ ಡ್ರೋನ್‌ಗಳಂತಹ ಸುಧಾರಿತ ಉಪಕರಣಗಳನ್ನು ಬಳಸುವಂತೆ ಒತ್ತಾಯಿಸಿದರು.
ಚಿಕ್ಕಮಗಳೂರಿನ ಅರಣ್ಯ ಪ್ರದೇಶಗಳ ಹೊರಗೆ ಪ್ರಸ್ತುತ 35 ಆನೆಗಳು ಮೂರು ಗುಂಪುಗಳಾಗಿ ಓಡಾಡುತ್ತಿವೆ ಎಂದು ಮಾಹಿತಿ ಇದೆ. ಬೇಸಿಗೆಯಲ್ಲಿ ಆನೆಗಳು ಕಾಡುಗಳಿಂದ ಹೊರಗೆ ಹೋಗುವುದು ಸಾಮಾನ್ಯವಾದರೂ, ಅಧಿಕಾರಿಗಳು ಮತ್ತು ಸಿಬ್ಬಂದಿ ಮಾನವ-ವನ್ಯಜೀವಿ ಸಂಘರ್ಷಗಳು ಸಂಭವಿಸದಂತೆ ನೋಡಿಕೊಳ್ಳಬೇಕು. ವನ್ಯಜೀವಿ-ಮಾನವ ಸಂಘರ್ಷದಿಂದ ಉಂಟಾಗುವ ಸಾವಿನ ಸಂಖ್ಯೆ ಪ್ರತಿ ವರ್ಷ ಕಡಿಮೆಯಾಗಬೇಕೇ ಹೊರತು ಹೆಚ್ಚಾಗಬಾರದು ಎಂದು ಸಚಿವರು ಹೇಳಿದರು.