ಬೆಂಗಳೂರು: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬೆಂಗಳೂರು ವಿಭಾಗವು ಘಟಕವು 2025ರಲ್ಲಿ ಕರ್ನಾಟಕದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 490 ಕೆ.ಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ. ಇದರ ಮೌಲ್ಯ 270 ಕೋಟಿ ರೂ. ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಮಾದಕ ವಸ್ತು ನಿಗ್ರಹ ದಳದ ಅಧಿಕಾರಿಗಳು ಒಂದು ವರ್ಷದ ಅವಧಿಯಲ್ಲಿ 7 ವಿದೇಶಿ ಪ್ರಜೆಗಳು ಸೇರಿ 81 ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಜಪ್ತಿಯಾದ ವಸ್ತುಗಳಲ್ಲಿ ಹೈಡ್ರೋಪೋನಿಕ್ ಗಾಂಜಾ (244 ಕೆಜಿ), ಗಾಂಜಾ (63 ಕೆಜಿ), ಕೊಕೇನ್ (2 ಕೆಜಿ), ಮೆಥಾಂಫೆಟಮೈನ್ (10.5 ಕೆಜಿ), ಸೈಲೋಸಿಬಿನ್ (6 ಕೆಜಿ), ಖಾಟ್ ಎಲೆಗಳು (162.5 ಕೆಜಿ), 808 ಎಲ್‌ಎಸ್‌ಡಿ ಬ್ಲಾಟ್‌ಗಳು, ಎಂಡಿಎಂಎ 53 ಯೂನಿಟ್ ಮತ್ತು ಇತರ ನಿಷೇಧಿತ ವಸ್ತುಗಳು ಸೇರಿವೆ. ಇದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 270 ಕೋಟಿ ರೂ. ಆಗಿದ್ದು, ಒಟ್ಟು 30 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದೆ.
ನಿರಂತರ ಕಣ್ಗಾವಲು ಮೂಲಕ ಸಂಪೂರ್ಣ ಮಾದಕವಸ್ತು ಜಾಲಗಳನ್ನು ಕಿತ್ತುಹಾಕಲು ಐದು ಪ್ರಕರಣಗಳು ಕಾರಣವಾಗಿದೆ. ಇದರ ಪರಿಣಾಮವಾಗಿ ಪ್ರಮುಖ ಕಳ್ಳಸಾಗಣೆದಾರರು, ಪೂರೈಕೆದಾರರು, ಸ್ವೀಕರಿಸುವವರು ಮತ್ತು ಕಿಂಗ್‌ಪಿನ್‌ಗಳನ್ನು ಬಂಧಿಸಲಾಗಿದೆ. ಈ ಜಾಲಗಳಲ್ಲಿ ಎರಡು ಬ್ಯಾಂಕಾಕ್‌ನಿಂದ ಹೈಡ್ರೋಪೋನಿಕ್ ಗಾಂಜಾದ ಅಂತರರಾಷ್ಟ್ರೀಯ ಸಾಗಣೆಯನ್ನೂ ಒಳಗೊಂಡಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳ್ಳಸಾಗಣೆದಾರರನ್ನು ತಡೆಹಿಡಿಯಲಾಗಿದ್ದು, ನಂತರ ಪೂರೈಕೆದಾರರು, ಸ್ವೀಕರಿಸುವವರು ಮತ್ತು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.
ಇತರ ಎರಡು ಪ್ರಕರಣಗಳಲ್ಲಿ, ದೆಹಲಿಯಿಂದ ಕಾರ್ಯನಿರ್ವಹಿಸುತ್ತಿರುವ ಮೆಥಾಂಫೆಟಮೈನ್ ಕಾರ್ಟೆಲ್ ಅನ್ನು ಪತ್ತೆಹಚ್ಚಲಾಗಿದೆ, ಕಳ್ಳಸಾಗಣೆದಾರರು ಬಸ್, ವಿಮಾನ ಮತ್ತು ರೈಲಿನಲ್ಲಿ ಪ್ರಯಾಣಿಸುತ್ತಿದ್ದರು, ಇದು ರಾಷ್ಟ್ರ ರಾಜಧಾನಿಯಲ್ಲಿ ಡ್ರಗ್ಸ್ ಪೂರೈಕೆದಾರರ ಮತ್ತಷ್ಟು ಬಂಧನಗಳಿಗೆ ಕಾರಣವಾಯಿತು ಎಂದು ತಿಳಿಸಿದೆ.