ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ರಾಜ್ಯ ಸರ್ಕಾರ ಜನವರಿ 22ರಿಂದ ವಿಶೇಷ ಅಧಿವೇಶನ ಕರೆದಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಜನವರಿ 22ರಿಂದ 31ರವರೆಗೆ ವಿಶೇಷ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್, ಜನವರಿ 22ರಂದು ಉಭಯ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ ಎಂದರು. ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದ್ದು, ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ. ಅಲ್ಲದೆ ಈ ವಿಶೇಷ ಅಧಿವೇಶನದಲ್ಲಿ ವಿಬಿಜಿ ರಾಮ್‌ಜಿ ಕಾಯ್ದೆಯನ್ನು ಹಿಂಪಡೆದು ಮನರೇಗಾ ಕಾಯ್ದೆಯನ್ನೇ ಮರು ಸ್ಥಾಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಅಂಗೀಕರಿಸುವ ಸಾಧ್ಯತೆ ಇದೆ.
ಶಿಡ್ಲಘಟ್ಟದಲ್ಲಿ ಹಾಕಿದ್ದ ಅಕ್ರಮ ಬ್ಯಾನರ್ ತೆರವುಗೊಳಿಸಿದ ಪುರಸಭೆ ಅಧಿಕಾರಿ ಅಮೃತಾ ಗೌಡಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದರು. ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾದ ಬ್ಯಾನರ್ ತೆರವುಗೊಳಿಸಿದ್ದಕ್ಕೆ ಅಮೃತಾಗೌಡಗೆ ಕರೆ ಮಾಡಿ ಕೆಟ್ಟ ಪದಗಳಿಂದ ನಿಂದಿಸಿದ್ದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇನ್ನು ಈ ಘಟನೆ ಕುರಿತಂತೆ ಪುರಸಭೆ ಸಿಬ್ಬಂದಿ ಹಾಗೂ ಅಮೃತ ಗೌಡ ಪ್ರತಿಭಟನೆ ನಡೆಸಿದ್ದರು. ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ರಾಜೀವ್ ಗೌಡ ಬಹಿರಂಗವಾಗಿ ಕ್ಷಣೆಯಾಚಿಸಿದ್ದಾರೆ. ನನ್ನ ಮಾತಿನಿಂದ ಅಧಿಕಾರಿಗೆ ನೋವಾಗಿದ್ದರೆ ನಾನು ಕ್ಷಣೆಯಾಚಿಸುತ್ತೇನೆ ಎಂದರು. ಇನ್ನು ಕಾಂಗ್ರೆಸ್ ಮುಖಂಡನ ಮಾತುಗಳಿಂದ ನೊಂದ ಅಮೃತ ಗೌಡ ಅವರು ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಪೊಲೀಸ್ ಠಾಣೆಗೆ ತೆರಳಿ ರಾಜೀವ್ ಗೌಡ ವಿರುದ್ಧ ದೂರು ದಾಖಲಿಸಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದು ತೀವ್ರ ಚರ್ಚೆ ಗ್ರಾಸವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು. ನಾನು ಕೆಪಿಸಿಸಿ ಅಧ್ಯಕ್ಷ, ರಾಹುಲ್ ಗಾಂಧಿ ಲೋಕಸಭೆ ವಿಪಕ್ಷದ ನಾಯಕ. ಶಿಷ್ಟಾಚಾರದ ಪ್ರಕಾರ ಅವರನ್ನು ನಾನು ಸ್ವಾಗತಿಸಿ, ಭೇಟಿ ಮಾಡಿದ ವಿಚಾರವನ್ನು ಸಾರ್ವಜನಿಕವಾಗಿ ಚರ್ಚೆ ಮಾಡಲು ಸಾಧ್ಯವೇ? ನೀವು ಮನಬಂದಂತೆ ಗೊಂದಲ ಸೃಷ್ಟಿಸಿಕೊಳ್ಳುತ್ತಿದ್ದೀರಿ. ನಾವು ಯಾವ ಸಂದೇಶವನ್ನು ಕೊಟ್ಟಿಲ್ಲ. ನಮಗೂ ಯಾವ ಸಂದೇಶವನ್ನೂ ಕೊಟ್ಟಿಲ್ಲ. ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಇದನ್ನೇ ಮುಂದುವರಿಸಿಕೊಂಡು ಹೋಗಿ ಎಂದು ನಮ್ಮ ನಾಯಕರು ಹೇಳಿದರು ಎಂದು ಸ್ಪಷ್ಟಪಡಿಸಿದರು.
ಬೀದರ್‌ನಲ್ಲಿ ಗಾಳಿಪಟ ಹಾರಿಸುವ ಮಾಂಜಾ ದಾರಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಮೃತ ವ್ಯಕ್ತಿಯನ್ನು ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ 48 ವರ್ಷದ ಸಜೀವ್ ಕುಮಾರ್ ಹೊಸಮನಿ ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಅವರ ಕುತ್ತಿಗೆಗೆ ಮಾಂಜಾ ದಾರ ಸಿಲುಕಿ ಕತ್ತು ಸೀಳಿದ್ದು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ. ಜಿಲ್ಲೆಯ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಈ ದುರ್ಘಟನೆ ನಡೆದಿದ್ದು, ಹುಮನಾಬಾದ್ ಪಟ್ಟಣದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಗಳನ್ನು ಸಂಕ್ರಾಂತಿ ಹಬ್ಬದ ಪ್ರಯುಕ್ತ ಕರೆತರಲು ಸಜೀವ್ ಕುಮಾರ್ ಬೈಕ್ ಮೇಲೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ.
ಸುಳ್ಳು ಮಾಹಿತಿ ಹರಡಿದ ಮತ್ತು ಸಾರ್ವಜನಿಕ ಅಶಾಂತಿ ಮತ್ತು ದ್ವೇಷವನ್ನು ಪ್ರಚೋದಿಸುವ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ವಿರುದ್ಧ ಬಿಜೆಪಿ ನಿಯೋಗವು ಕರ್ನಾಟಕ ಡಿಜಿಪಿ ಎಂಎ ಸಲೀಂ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ರಾಜ್ಯ ಸಚಿವ ವಿ. ಸೋಮಣ್ಣ ಅವರ ವಿರುದ್ಧ ಲಕ್ಷ್ಮಣ್ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಿದ್ದಾರೆ. ಅವರ ಹೇಳಿಕೆಗಳು ಸಾರ್ವಜನಿಕ ಶಾಂತಿಯನ್ನು ಕದಡುವ ಮತ್ತು ಸರ್ಕಾರದ ವಿರುದ್ಧ ಅಪನಂಬಿಕೆ ಉಂಟುಮಾಡುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ವಾದಿಸಲಾಗಿದೆ.