ಬೆಂಗಳೂರು: ಅಕ್ರಮ ವಲಸಿಗರ ಶೆಡ್ಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದ ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಅವರನ್ನ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ತಡರಾತ್ರಿ ಪುನೀತ್ ಕೆರೆಹಳ್ಳಿ ಅವರನ್ನು ಅವರ ಮನೆ ಬಳಿ ವಶಕ್ಕೆ ಪಡೆದ ಬನ್ನೇರುಘಟ್ಟ ಪೊಲೀಸರು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಹಾಗೂ ಸಹಚರರು ಸೇರಿ ಬೆಂಗಳೂರಿನಲ್ಲಿರುವ ಅಕ್ರಮ ವಲಸಿಗರ ಶೆಡ್ಗಳಿಗೆ ಹೋಗಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ ಶೆಡ್ ವಾಸಿಗಳ ಬಳಿ ರಾಷ್ಟ್ರೀಯತೆ ಬಗ್ಗೆ ಪ್ರಶ್ನೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಹಂಚಿಕೊಂಡು ಸರ್ಕಾರಕ್ಕೆ ನಾನಾ ಪ್ರಶ್ನೆಗಳನ್ನು ಕೇಳಿದ್ದರು.
ಈ ಬೆಳವಣಿಗೆ ನಡುವಲ್ಲೇ ಪುನೀತ್ ವಿರುದ್ಧ ದೂರು ದಾಖಲಾಗಿದ್ದು, ದೂರು ಹಿನ್ನೆಲೆಯಲ್ಲಿ ಪೊಲೀಸರು ಪುನೀತ್ ಕೆರೆಹಳ್ಳಿಯವರನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದುಬಂದಿದೆ.
ಏತನ್ಮಧ್ಯೆ ಪುನೀತ್ ಕೆರೆಹಳ್ಳಿ ಬಂಧನಕ್ಕೆ ಅವರ ಬೆಂಬಲಿಗರು ತೀವ್ರವಾಗಿ ಕಿಡಿಕಾರಿದ್ದಾರೆ. ಎಡಪಂಥೀಯರ ಒತ್ತಡಕ್ಕೆ ಮಣಿದು ಸರ್ಕಾರ ಪುನೀತ್ ಕೆರೆಹಳ್ಳಿ ಅವರನ್ನ ವಶಕ್ಕೆ ಪಡೆದಿದೆ. ಪೊಲೀಸರ ಕ್ರಮವನ್ನ ನಾವು ಖಂಡಿಸುತ್ತೇವೆ ಎಂದು ವಿಡಿಯೋ ಮಾಡಿ ಕಿಡಿಕಾರಿದ್ದಾರೆ.
ನಿನ್ನೆಯಷ್ಟೇ ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ‘ದ್ವೇಷದ ಮಾತಿನ ವಿರುದ್ದ ಜನಾಂದೋಲನ ಮನವಿ ಸಲ್ಲಿಸಿತ್ತು.
ಇಮೇಲ್ ಮೂಲಕ ಮನವಿ ಸಲ್ಲಿಸಲಾಗಿತ್ತು. ʼಪುನೀತ್ ಕೆರೆಹಳ್ಳಿ ಎಂಬ ಕೊಲೆ ಆರೋಪಿ ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳಿಗೆ ಬೇಡಿಕೆ ಇಟ್ಟು, ಬೆದರಿಕೆ ಹಾಗೂ ಭೀತಿಯನ್ನುಂಟು ಮಾಡುತ್ತಿದ್ದಾನೆಂದು ಗಂಭೀರ ಆರೋಪಗಳನ್ನು ಮಾಡಲಾಗಿತ್ತು.
ʼಸ್ವತಃ ಆತನೇ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊಗಳಲ್ಲಿ, “ಬಾಂಗ್ಲಾದೇಶಿಗಳು” ಎಂದು ಮುಸ್ಲಿಂ ವಲಸೆ ಕಾರ್ಮಿಕರನ್ನು ಗುರುತಿಸಿ, ರಾತ್ರಿ ಸಮಯದಲ್ಲಿ ಘೋಷಣೆ ಕೂಗಿ, ಧರ್ಮಾಧಾರಿತ ದ್ವೇಷ ಮತ್ತು ಸಮಾಜದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡಿರುವುದು ದಾಖಲಾಗಿದೆ. ಈತನ ಈ ವರ್ತನೆಯಿಂದ ಕಾರ್ಮಿಕರ ಗೌರವ, ಗೌಪ್ಯತೆ ಮತ್ತು ಜೀವಸುರಕ್ಷೆಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆʼ ಎಂದು ದೂರಿನಲ್ಲಿ ತಿಳಿಸಿತ್ತು.