ಬೆಂಗಳೂರು: ಐಪಿಎಲ್ 2025 ರ ವಿಜಯೋತ್ಸವದ ಸಂದರ್ಭದಲ್ಲಿ ಉಂಟಾದ ಕಾಲ್ತುಳಿತದ ಪರಿಣಾಮವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಇದರಿಂದ ಈ ವರ್ಷದ ಐಪಿಎಲ್ ಪಂದ್ಯಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ ಎಂಬುದರ ಕುರಿತು ಇನ್ನೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಿಲ್ಲ.
ಆದರೆ, ಸ್ಟೇಡಿಯಂ ಒಳಗೆ ಮತ್ತು ಹೊರಗೆ ಜನ ನಿಯಂತ್ರಣ ಮಾಡಲು ಆರ್‌ಸಿಬಿ ಹಲವು ಮಾರ್ಗ ಹುಡುಕುತ್ತಿದೆ. ಇದರ ನಡುವೆ ಸ್ಟೇಡಿಯಂನಲ್ಲಿ ಜನಸಂದಣಿಯನ್ನು ನಿರ್ವಹಿಸಲು ಆರ್‌ಸಿಬಿ ಹೊಸ ಮಾರ್ಗವನ್ನು ಕಂಡುಕೊಂಡಿದೆ.
ಐಪಿಎಲ್ 2026 ಟೂರ್ನಿಗೂ ಮುನ್ನ ಆರ್‌ಸಿಬಿ ಜನಸಂದಣಿ ನಿರ್ವಹಣೆ ಮತ್ತು ಅಭಿಮಾನಿಗಳ ಸುರಕ್ಷತೆಯ ಕಡೆಗೆ ಒಂದು ಪ್ರಮುಖ ಹೆಜ್ಜೆ ಇಟ್ಟಿದ್ದು, ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಳಗೆ ಮತ್ತು ಹೊರಗೆ ಎಐ ಕ್ಯಾಮೆರಾಗಳನ್ನು ಅಳವಡಿಸುವಂತೆ ಆರ್‌ಸಿಬಿ ಫ್ರಾಂಚೈಸಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯನ್ನು ಕೋರಿದೆ.
ಐಪಿಎಲ್ ಪಂದ್ಯಗಳ ಸಮಯದಲ್ಲಿ ಜನಸಂದಣಿಯನ್ನು ನಿಯಂತ್ರಿಸುವುದು ಅತಿಮುಖ್ಯವಾಗಿರುವುದರಿಂದ ಈ ಹೊಸ ವಿಧಾನವು ಆರ್‌ಸಿಬಿ ಫ್ರಾಂಚೈಸಿಗೆ ಅತ್ಯಗತ್ಯವಾಗಿದೆ.
ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಒಳಗೆ ಹಾಗೂ ಹೊರಗೆ 300 ರಿಂದ 350 ಎಐ ಕ್ಯಾಮೆರಾ ಅಳವಡಿಕೆ ಅವಶ್ಯಕತೆ ಇದೆ. ಕ್ಯಾಮೆರಾಗಳನ್ನು ಅಳವಡಿಸಲು ಸುಮಾರು 4.5 ಕೋಟಿ ರೂಪಾಯಿ ವೆಚ್ಚವಾಗುವ ಸಾಧ್ಯತೆಯಿದೆ. ಇದರ ಸಂಪೂರ್ಣ ವೆಚ್ಚವನ್ನು ಆರ್ಸಿಬಿಯೇ ನೀಡುವುದಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಹೇಳಿದೆ.
ಈ ಕುರಿತು ಆರ್‌ಸಿಬಿ ಮ್ಯಾನೇಜ್ಮೆಂಟ್ ಅಧಿಕೃತವಾಗಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಘೋಷಿಸಿದೆ.
ಈ ಕ್ಯಾಮೆರಾಗಳನ್ನು ಅಳವಡಿಸುವುದರಿಂದ ಕ್ರೀಡಾಂಗಣದಲ್ಲಿ ಸೇರುವ ಜನರ ಪ್ರತಿಯೊಂದು ಚಲನವಲನದ ಮೇಲೂ ನಿಗಾ ಇಡಬಹುದು. ಸರದಿ ಸಾಲುಗಳ ನಿರ್ವಹಣೆ, ಜನರ ಆಗಮನ ಮತ್ತು ನಿರ್ಗಮನದ ದತ್ತಾಂಶಗಳ ಸಂಗ್ರಹ ಮಾಡಬಹುದು. ಜನರ ಸರದಿ ಸಾಲುಗಳ ನಿರ್ವಹಣೆ ಹಾಗೂ ಕ್ಷಣಕ್ಷಣದ ಮಾಹಿತಿಯನ್ನು ಪಡೆಯಲು ಸಾಧ್ಯವಾಗುವುದು. ಇದರಿಂದಾಗಿ ಯಾವುದೇ ರೀತಿಯ ಅವಘಡಗಳನ್ನು ತಪ್ಪಿಸಬಹುದು. ಪ್ರೇಕ್ಷಕರ ಸಂಪೂರ್ಣ ಸುರಕ್ಷತೆಗೆ ಅನುಕೂಲವಾಗಲಿದೆ’ ಎಂದು ಪ್ರಕಣೆಯಲ್ಲಿ ಉಲ್ಲೇಖಿಸಲಾಗಿದೆ.
‘ಎ.ಐ. ವಿಡಿಯೋ ವಿಶ್ಲೇಷಣಾ ಸಾಮರ್ಥ್ಯದಿಂದ ಹಿಂಸಾಚಾರ, ಅನಧಿಕೃತ ಪ್ರವೇಶ ಮತ್ತು ಒಳನುಸುಳುವಿಕೆಯಂತಹ ಘಟನೆಗಳನ್ನು ಶೀಘ್ರವಾಗಿ ಪತ್ತೆಹಚ್ಚಲು ಅನುವು ಮಾಡಿಕೊಡುತ್ತದೆ, ತ್ವರಿತ ಮತ್ತು ಪರಿಣಾಮಕಾರಿ ಕಾನೂನು ಕ್ರಮ ಜಾರಿ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ.
ಈ ತಂತ್ರಜ್ಞಾನ ವ್ಯವಸ್ಥೆಯನ್ನು ಮಾಡಲು ‘ಸ್ಟಾಕ್ ಕಂಪೆನಿ’ಯೊಂದಿಗೆ ಆರ್‌ಸಿಬಿ ಪಾಲುದಾರಿಕೆ ಹೊಂದಿದೆ. ಈ ಕಂಪೆನಿಯು ಬೇರೆ ಬೇರೆ ರಾಜ್ಯಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಕಾರ್ಯನಿರ್ವಹಿಸಿದೆ. ಸಂಚಾರ ಸುವ್ಯವಸ್ಥೆ ನಿವರ್ಹಣೆ, ಜೈಲುಗಳಲ್ಲಿ ತಂತ್ರಜ್ಞಾನ ವ್ಯವಸ್ಥೆಯನ್ನು ಮಾಡಿಕೊಟ್ಟಿದೆ.
ಜೂನ್ 4ರಂದು ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 11 ಜನರು ದುರ್ಮರಣಕ್ಕೀಡಾಗಿದ್ದರು. ಅದರಿಂದಾಗಿ ರಾಜ್ಯ ಸರ್ಕಾರ ನೇಮಕ ಮಾಡಿದ್ದ ಸಮಿತಿಯು ಕ್ರೀಡಾಂಗಣದಲ್ಲಿ ಕೆಲವು ಮಾರ್ಪಾಡುಗಳನ್ನು ಸೂಚಿಸಿತ್ತು. ಈ ಕಾಮಗಾರಿಗಳ ಪರಿಶೀಲನೆಗಾಗಿ ವಿವಿಧ ಇಲಾಖೆಗಳ ಅಧಿಕಾರಿಗಳು ಇರುವ ಕಾರ್ಯಪಡೆಯೊಂದನ್ನೂ ರಚಿಸಲಾಗಿದೆ.
ಮಾರ್ಚ್ 26ರಿಂದ ಐಪಿಎಲ್ ಆರಂಭವಾಗಲಿದೆ. ನಿಯಮದ ಪ್ರಕಾರ ಟೂರ್ನಿಗೆ ಕನಿಷ್ಠ ಒಂದು ತಿಂಗಳು ಮುನ್ನ ಪಂದ್ಯಗಳ ಆಯೋಜಕರಿಗೆ ಕ್ರೀಡಾಂಗಣವನ್ನು ವಹಿಸಿಕೊಡಬೇಕು. ಆ ಮೂಲಕ ಸಿದ್ಧತೆಗಳಿಗೆ ಅನುವು ಮಾಡಿಕೊಡಬೇಕು.