ಬೆಂಗಳೂರು: ನಗರದಲ್ಲಿ ಪರಿಷ್ಕೃತ ದರವಿರಲಿ, ಹಳೆಯ ದರವಿರಲಿ, ಮೀಟರ್ ಹಾಕಿದರೆ ತಾನೆ ಅನ್ವಯವಾಗುವುದು, ಮೀಟರ್ ಹಾಕುವವರೇ ಕಾಣುತ್ತಿಲ್ಲ. ಆ್ಯಪ್ ಆಧಾರಿತ ಅಗ್ರಿಗೇಟರ್ ಕಂಪನಿಗಳ ಅಡಿಯಲ್ಲಿ ಸಂಚರಿಸುವ ಆಟೋಗಳಲ್ಲಿ ಕನಿಷ್ಠ ದರ ಇಲ್ಲವೇ ಇಲ್ಲ ಎನ್ನುತ್ತಿದ್ದಾರೆ.
ನಗರದಲ್ಲಿ ನೋಂದಣಿಯಾಗಿರುವ 3. 45 ಲಕ್ಷ ಆಟೋಗಳ ಪೈಕಿ ಕೇವಲ 41,000 ಆಟೋಗಳು ಮಾತ್ರ ಹೊಸ ದರಕ್ಕೆ ತಕ್ಕಂತೆ ಆಟೋ ಮೀಟರ್‌ಗಳನ್ನು ಮಾರ್ಪಾಟು ಮಾಡಿಕೊಂಡಿದ್ದಾರೆ. ಪರಿಷ್ಕೃತ ದರದ ಹೊಸ ಆಟೋ ಮೀಟರ್ ಅಳವಡಿಸಿಕೊಂಡಿದ್ದಾರೆ. ಆಗಸ್ಟ್ 2025 ರಿಂದ ಪರಿಷ್ಕೃತ ದರ ಜಾರಿಗೆ ಬಂದಿದೆ.
ಸಾರಿಗೆ ಇಲಾಖೆಯ ಮಾಹಿತಿ ಪ್ರಕಾರ, ನಗರದಲ್ಲಿ 3.45 ಲಕ್ಷ ಆಟೋಗಳಿವೆ. ಹೊಸ ದರಕ್ಕೆ ತಕ್ಕಂತೆ ಆಟೋ ಮೀಟರ್‌ಗಳನ್ನು ಮಾರ್ಪಾಟು ಮಾಡಿಕೊಳ್ಳಲು ಡಿಸೆಂಬರ್ 31, 2025 ಕೊನೆಯ ದಿನವಾಗಿತ್ತು. ಅದಕ್ಕೂ ಮುನ್ನಾ ಅಕ್ಟೋಬರ್ 31 ಗಡುವು ದಿನವಾಗಿತ್ತು.
ಹೊಸ ದರಕ್ಕೆ ತಕ್ಕಂತೆ ಆಟೋ ಮೀಟರ್‌ಗಳನ್ನು ಮಾರ್ಪಾಟು ಪ್ರಕ್ರಿಯೆಯಲ್ಲಿ ಆಡಳಿತಾತ್ಮಕ ಲೋಪವಾಗಿದೆ ಎಂದು ಆಟೋ ರಿಕ್ಷಾ ಚಾಲಕರ ಒಕ್ಕೂಟದ (ಎಆರ್‌ಡಿಯು) ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ಹೇಳಿದ್ದಾರೆ.
ಎಲ್ಲ ಸಂಘಗಳು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಸೂಕ್ತ ಸಮಾಲೋಚನೆ ನಡೆಸದೆ ಪರಿಷ್ಕೃತ ದರಗಳನ್ನು ಘೋಷಿಸಿದ್ದರಿಂದ ಕಡಿಮೆ ಆಟೋಗಳು ಹೊಸ ಮೀಟರ್ ಅಳವಡಿಸಿಕೊಂಡಿವೆ. ಮಂಗಳೂರು, ಉಡುಪಿ ಮತ್ತು ಶಿವಮೊಗ್ಗದಂತಹ ನಗರಗಳಲ್ಲಿ ಬೇಡಿಕೆಯಂತೆ ಮೀಟರ್ ಅಳವಡಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿಯೂ ಇದನ್ನು ಅಳವಡಿಸಿಕೊಳ್ಳಬಹುದಿತ್ತು ಎಂದರು.
ಆ್ಯಪ್ ಆಧಾರಿತ ಆಟೋಗಳು ಮೀಟರ್‌ನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಮೊಬೈಲ್ ಆ್ಯಪ್ ಗಳಲ್ಲಿ ದರಗಳನ್ನು ಪ್ರದರ್ಶಿಸುವುದು ಅಪರಾಧ. ಏಕೆಂದರೆ ಆಟೋಗಳು ಎಷ್ಟು ದೂರ ಸಂಚರಿಸಿವೆ ಎಂಬುದರ ಮೇಲೆ ಮೀಟರ್‌ಗಳು ಕಾರ್ಯನಿರ್ವಹಿಸುತ್ತವೆ. ಆದರೆ ಆ್ಯಪ್ ಆಧಾರಿತ ದರ ಅಂದಾಜಿನಲ್ಲಿ ದುರುಪಯೋಗ ಇರುತ್ತದೆ. ಇದರಲ್ಲಿ ಹೆಚ್ಚಿನ ದರ ತೋರಿಸುವುದರಿಂದ ಚಾಲಕರು ಹೊಸ ಮೀಟರ್ ಅಳವಡಿಕೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಅವರು ತಿಳಿಸಿದರು.
ಪರ್ಮಿಟ್ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ರೂ 5,000 ದಂಡದ ನಿಯಮದ ಹೊರತಾಗಿಯೂ ಅದನ್ನು ಕಟ್ಟುನಿಟ್ಟಾಗಿ ಅನುಸರಿಸದ ಕಾರಣ ಆಟೋಗಳು ಇನ್ನೂ ಹೊಸ ಮೀಟರ್ ಅಳವಡಿಸಿಕೊಳ್ಳದಿರಲು ಕಾರಣವಾಗಿರಬಹುದು. ಕಡ್ಡಾಯವಾಗಿ ತ್ರೈಮಾಸಿಕ ಆರ್‌ಟಿಎ ಸಭೆಗಳೂ ನಡೆಯುತ್ತಿಲ್ಲ. ಮೀಟರ್ ಬಳಕೆಯನ್ನು ಕಡ್ಡಾಯಗೊಳಿಸದ ಹೊರತು, ಮರುಮಾಪನಾಂಕವು ಸುಧಾರಿಸುವುದಿಲ್ಲ ಎಂದು ರುದ್ರಮೂರ್ತಿ ಹೇಳಿದರು.
ಈ ಮಧ್ಯೆ ನಾಲ್ಕು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದರೂ ಮತ್ತು ನ್ಯಾಯವ್ಯಾಪ್ತಿಯ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದರೂ, ಗಡುವು ವಿಸ್ತರಣೆಗೆ ಮೊದಲು ಸುಮಾರು 10,000 ಮೀಟರ್‌ಗಳನ್ನು ಮಾತ್ರ ಮರುಮಾಪನ ಮಾಡಲಾಗಿದೆ ಎಂದು ಕಾನೂನು ಮಾಪನಶಾಸ್ತ್ರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಸ್ತುತ, ಮರುಮಾಪನ ಮಾಡಲಾದ ಒಟ್ಟು ಮೀಟರ್‌ಗಳ ಸಂಖ್ಯೆ 41,340 ಆಗಿದೆ.