ಉಡುಪಿ: 800 ವರ್ಷ ಹಳೆಯದಾದ ಶ್ರೀ ಕೃಷ್ಣ ಮಠಕ್ಕೆ ಪುರುಷರು ಶರ್ಟ್ ಧರಿಸದೆ ಪ್ರವೇಶಿಸುವುದು ಕಡ್ಡಾಯ ಎಂದು ಶ್ರೀ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಹೇಳಿದ್ದಾರೆ. ಇದಲ್ಲದೆ, ದೇವಾಲಯಕ್ಕೆ ಭೇಟಿ ನೀಡುವಾಗ ಕಟ್ಟುನಿಟ್ಟಾಗಿ ಪಾಲಿಸಬೇಕಾದ ವಸ್ತ್ರ ಸಂಹಿತೆಯ ಬಗ್ಗೆ ಭಕ್ತರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಶಿರೂರು ಪರ್ಯಾಯ ಮಹೋತ್ಸವದ ದಿನದಂದೇ ಅಂದರೆ ಜನವರಿ 18 ರಿಂದಲೇ ಈ ಹೊಸ ಡ್ರೆಸ್ ಕೋಡ್ ಜಾರಿಗೆ ಬಂದಿದೆ. ಅದರಂತೆ ಪುರುಷರು ಅಥವಾ ಸ್ತ್ರೀಯರು ಬರ್ಮುಡಾ ಅಥವಾ ಸ್ಕರ್ಟ್ ಧರಿಸಿಕೊಂಡು ಬರುವಂತಿಲ್ಲ ಎಂಬ ಹೊಸ ನಿಯಮ ತರಲಾಗಿದೆ.
ಉಡುಪಿಯ ಕೃಷ್ಣಮಠದಲ್ಲಿ ಹೊಸ ನಿಯಮ ಜಾರಿಗೆ ತರಲಾಗಿದೆ. ಇನ್ನು ಮುಂದೆ ಭಕ್ತರು, ದೇವಾಲಯದೊಳಗೆ ಪ್ರವೇಶ ಮಾಡುವಾಗ ವಸ್ತ್ರ ಸಂಹಿತೆ ಪಾಲಿಸಬೇಕು. ಪುರುಷರು ಅಂಗಿಯನ್ನು ಮತ್ತು ಬನಿಯನ್ ತೆಗೆದು ದೇವಸ್ಥಾನದೊಳಗೆ ಹೋಗಬೇಕು. ಈ ನಿಯಮವನ್ನು ಕೃಷ್ಣಮಠದ ಆಡಳಿತ ಮಂಡಳಿ ಜಾರಿಗೆ ತಂದಿದೆ. ಇದು ಭಕ್ತರ ಅನುಕೂಲಕ್ಕಾಗಿ ಮತ್ತು ದೇವಸ್ಥಾನದ ಪಾವಿತ್ರ್ಯತೆಯನ್ನು ಕಾಪಾಡಲು ಮಾಡಲಾಗಿದೆ ಎಂದು ಶಿರೂರು ಮಠದ ದಿವಾನರಾದ ಡಾ.ಉದಯಕುಮಾರ್ ಸರಳತ್ತಾಯ ಹೇಳಿದ್ದಾರೆ.
ಪುರುಷರು ಶರ್ಟ್ ತೆಗೆದ ನಂತರ ಶಾಲು ಧರಿಸಬಹುದು ಎಂದು ಅವರು ಹೇಳಿದರು. ದೇವಾಲಯದ ಒಳಗೆ ಬೆಳಿಗ್ಗೆಯಿಂದ ರಾತ್ರಿಯವರೆಗೆ ಹಲವಾರು ಪೂಜೆಗಳು ಮತ್ತು ಆಚರಣೆಗಳು ನಡೆಯುವುದರಿಂದ, ಮಧ್ಯಾಹ್ನದ ಪೂಜೆಗೆ ಮಾತ್ರ ಇದ್ದ ವಸ್ತ್ರ ಸಂಹಿತೆಯನ್ನು ಇಡೀ ದಿನ ವಿಸ್ತರಿಸಲಾಗಿದೆ. ದೇವಾಲಯದ ಪೂರ್ವ ಭಾಗದಲ್ಲಿರುವ ಮುಖ್ಯ ದ್ವಾರವಾದ 'ಮಹಾ ದ್ವಾರ'ದ ಮೂಲಕ ದೇವಾಲಯವನ್ನು ಪ್ರವೇಶಿಸುವ ಮೊದಲು ಭಕ್ತರು ವಸ್ತ್ರ ಸಂಹಿತೆಯನ್ನು ಅನುಸರಿಸುವುದು ಕಡ್ಡಾಯವಾಗಿದೆ.
ಶಿರೂರು ವೇದವರ್ಧನ ಶ್ರೀಗಳಿಂದ ಸರ್ವಜ್ಞ ಪೀಠಾರೋಹಣ, ಮೊದಲ ಮಹಾಪೂಜೆ: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನಿಗೆ ಪರ್ಯಾಯ ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಪ್ರಥಮ ಮಹಾಪೂಜೆ ನೆರವೇರಿಸಿದರು. ಈ ನಿಮಿತ್ತ ಶ್ರೀ ಕೃಷ್ಣನಿಗೆ ವಜ್ರಾಲಂಕಾರ ಮಾಡಿದರು.
ಶಿರೂರು ಮಠಾಧೀಶ ವೇದವರ್ಧನ ತೀರ್ಥ ಸ್ವಾಮೀಜಿ, ಭಾನುವಾರ ಬೆಳಗಿನ ಜಾವದ ಶುಭ ಮುಹೂರ್ತದಲ್ಲಿ ಸರ್ವಜ್ಞ ಪೀಠಾರೋಹಣ ಮಾಡುವ ಮೂಲಕ ಪ್ರಥಮ ಪರ್ಯಾಯ ಆರಂಭಿಸಿದ್ದಾರೆ. ಪರ್ಯಾಯ ಪೂಜಾಧಿಕಾರವನ್ನು ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಶ್ರೀಪಾದರು ಶಿರೂರು ಶ್ರೀಗಳಿಗೆ ಹಸ್ತಾಂತರಿಸಿದರು.