ಬೆಂಗಳೂರು: 2026-27ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಶೂ-ಸಾಕ್ಸ್ ವಿತರಣೆಯಲ್ಲಿ ವಿಳಂಬವಾಗುವುದನ್ನು ತಪ್ಪಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಶಾಲೆಗಳಿಂದ ಮಾಹಿತಿ ಸಂಗ್ರಹಿಸುತ್ತಿದೆ.
ಈ ಕುರಿತು ಇಲಾಖೆ ಅಧಿಕೃತ ಸುತ್ತೋಲೆ ಹೊರಡಿಸಿದ್ದು, 1ರಿಂದ 10ನೇ ತರಗತಿವರೆಗೆ ಓದುತ್ತಿರುವ ವಿದ್ಯಾರ್ಥಿಗಳ ಡೇಟಾವನ್ನು ಸಲ್ಲಿಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ (ಡಿಡಿಪಿಐ) ನಿರ್ದೇಶನ ನೀಡಿದೆ.
ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತಿ ವರ್ಷದಂತೆ ತಲಾ ಒಂದು ಜತೆ ಶೂ, ಎರಡು ಜತೆ ಸಾಕ್ಸ್ ವಿತರಿಸಲಿದೆ. ಆದರೆ ಈ ಬಾರಿ ಶೂ ಬದಲಿಗೆ ಚಪ್ಪಲಿ ವಿತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಶೂ-ಸಾಕ್ಸ್ ಬದಲಿಗೆ ಚಪ್ಪಲಿಗಳನ್ನು ಆದ್ಯತೆ ನೀಡುವ ಜಿಲ್ಲೆಗಳ ಪ್ರತ್ಯೇಕ ಮಾಹಿತಿ ಸಲ್ಲಿಸುವಂತೆ ಇಲಾಖೆಯು ಡಿಡಿಪಿಐಗಳಿಗೆ ಸೂಚಿಸಿದೆ.
ಶಾಲೆ ಇರುವ ಸ್ಥಳದ ಹವಾಮಾನ ಮತ್ತು ಭೌಗೋಳಿಕ ಪರಿಸ್ಥಿತಿಗಳನ್ನು ಪರಿಗಣಿಸಿ ಶೂ ಮತ್ತು ಚಪ್ಪಲಿ ಆಯ್ಕೆ ಮಾಡಲು ಶಾಲೆಗಳಿಗೆ ನಿಬಂಧನೆ ಇರುವುದರಿಂದ, ಇಲಾಖೆಯು 2026-27ಕ್ಕೆ ಹೊರಡಿಸಿದ ಸುತ್ತೋಲೆಯಲ್ಲಿ ಅದೇ ರೀತಿ ಪುನರುಚ್ಚರಿಸಿದೆ.
ಸ್ಥಳೀಯ ಮಟ್ಟದಲ್ಲಿ ಶೂ-ಸಾಕ್ಸ್‌ಗಳ ಖರೀದಿಯನ್ನು ಮಾಡಲಾಗುತ್ತದೆ. ಹಣ ಬಿಡುಗಡೆ ಮಾಡಲು ಡೇಟಾವನ್ನು ಸಂಗ್ರಹಿಸಲಾಗುತ್ತಿದೆ.
ಶೂ ಅಥವಾ ಚಪ್ಪಲಿ ಇವರೆಡರಲ್ಲಿ ಒಂದನ್ನು ಆಯ್ಕೆ ಮಾಡುವ ನಿರ್ಧಾರವನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳು ಮತ್ತು ಶಾಲಾ ಮುಖ್ಯಸ್ಥರಿಗೆ ಬಿಡಲಾಗಿದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.