ಬೆಂಗಳೂರು: ಹೆಣ್ಣುಮಕ್ಕಳಿಗೆ ಋತುಚಕ್ರದ ನೈರ್ಮಲ್ಯದ ಸಮಸ್ಯೆಯನ್ನು ಪರಿಹರಿಸಿ ಸುಸ್ಥಿರತೆ ಕಾಪಾಡಲು, ಆರೋಗ್ಯ ಇಲಾಖೆಯು, ಮಹಿಳೆಯರಿಗೆ ವಿಶೇಷವಾಗಿ 9ರಿಂದ 12 ನೇ ತರಗತಿಯ ವಿದ್ಯಾರ್ಥಿಗಳು ಮುಟ್ಟಿನ ಕಪ್‌ಗಳನ್ನು(Menstrual cup) ಬಳಸುವಂತೆ ಉತ್ತೇಜಿಸುತ್ತಿದೆ.
ಮುಂದಿನ ಎರಡು ತಿಂಗಳಲ್ಲಿ, ಆರೋಗ್ಯ ಇಲಾಖೆ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್‌ಗಳನ್ನು ಪೂರೈಸಲು ಪ್ರಾರಂಭಿಸುತ್ತದೆ. ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಆರಾಮದಾಯಕವಾಗಿಸಲು ಕಪ್ ಬಳಸುವುದು ಅಭ್ಯಾಸವಾಗಲು ಆರು ತಿಂಗಳಿಗೆ ಬೇಕಾಗುವಷ್ಟು ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಕಪ್‌ಗಳನ್ನು ವಿತರಿಸುತ್ತಾರೆ.
ಮಕ್ಕಳು ತಿಳಿದಿರುವಂತೆ ಮತ್ತು ಬಳಕೆಯ ಬಗ್ಗೆ ಆರಾಮದಾಯಕವಾಗುವಂತೆ ಶಿಕ್ಷಕರು ಮತ್ತು ತಾಯಂದಿರಿಗೆ ಮುಟ್ಟಿನ ಕಪ್‌ಗಳನ್ನು ಬಳಸುವ ಬಗ್ಗೆ ತರಬೇತಿ ನೀಡಲು ಆರೋಗ್ಯ ಇಲಾಖೆ ಎನ್‌ಜಿಒಗಳೊಂದಿಗೆ ಕೆಲಸ ಮಾಡುತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳನ್ನು ದಹಿಸುವ ಮತ್ತು ವೆಂಡಿಂಗ್ ಯಂತ್ರಗಳ ಸಮಸ್ಯೆಯನ್ನು ಕಪ್ ಗಳ ಬಳಕೆಯಿಂದ ಮುಕ್ತಿ ಮಾಡಬಹುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
9 ರಿಂದ 12 ನೇ ತರಗತಿಯಲ್ಲಿ ಓದುತ್ತಿರುವ ಹೆಣ್ಣುಮಕ್ಕಳಿಗೆ ಮುಟ್ಟಿನ ಕಪ್ ಪೂರೈಸಲು ಆದೇಶ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತಾ ಹೇಳಿದ್ದಾರೆ. ಈ ಮಧ್ಯೆ, ಮುಟ್ಟಿನ ಕಪ್‌ಗಳನ್ನು ಖರೀದಿಸಿ ಮಕ್ಕಳಿಗೆ ಪೂರೈಸಲು ಎಲ್ಲಾ ವಿಭಾಗಗಳಿಗೆ ಹಣವನ್ನು ಒದಗಿಸಲಾಗಿದೆ.
ಆರೋಗ್ಯ ಇಲಾಖೆಯು ಮುಟ್ಟಿನ ಕಪ್‌ಗಳು ಮತ್ತು ಸ್ಯಾನಿಟರಿ ಪ್ಯಾಡ್‌ಗಳ ಖರೀದಿಗೆ 71 ಕೋಟಿ ರೂಪಾಯಿ ನಿಗದಿಪಡಿಸಿದೆ, ಸರಬರಾಜಿಗೆ ಮಧ್ಯವರ್ತಿಗಳು ಇರುವುದಿಲ್ಲ ಎಂದರು.
ಸ್ತ್ರೀರೋಗ ತಜ್ಞೆ ಡಾ. ಮೀನಾಕ್ಷಿ ಭರತ್, ಮಕ್ಕಳೇ ತಾಯಂದಿರಿಗೆ ನೈರ್ಮಲ್ಯ ಬಗ್ಗೆ ಹೇಳಿಕೊಡಬೇಕು. ತಾಯಂದಿರು ಈ ನಿಟ್ಟಿನಲ್ಲಿ ಸರಿಯಾಗಿ ತಿಳಿದುಕೊಂಡರೆ ಮಕ್ಕಳು ಆರೋಗ್ಯವಾಗಿರುತ್ತಾರೆ. ಈ ಮಧ್ಯೆ, ಅಂಗನವಾಡಿಗಳು ಮತ್ತು ಶಿಕ್ಷಕಿಯರಿಗೆ ಮುಟ್ಟಿನ ಕಪ್‌ಗಳ ಬಳಕೆಯ ಬಗ್ಗೆ ತರಬೇತಿ ನೀಡಲು ಸಹ ಪ್ರಯತ್ನಗಳು ನಡೆಯುತ್ತಿವೆ. ಈ ವಿಧಾನವನ್ನು ಮೊದಲೇ ಪ್ರಯತ್ನಿಸಲಾಗಿತ್ತು, ಸ್ವಲ್ಪ ಯಶಸ್ಸನ್ನು ಕಂಡಿತ್ತು. ಇದರ ಬಗ್ಗೆ ಸಾಕಷ್ಟು ಜಾಗೃತಿ ಅಗತ್ಯವಿದೆ, ಇಲ್ಲಿಯವರೆಗೆ ಶೇಕಡಾ 50ರಷ್ಟು ಸಾಧಿಸಲಾಗಿದೆ ಎಂದು ಹೇಳಿದರು.