ಬೆಂಗಳೂರು: ತಮ್ಮ ಅಧಿಕೃತ ಕಚೇರಿಯೊಳಗೆ ಸಮವಸ್ತ್ರದಲ್ಲಿದ್ದಾಗ ಅಶ್ಲೀಲ ಕೃತ್ಯಗಳಲ್ಲಿ ತೊಡಗಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳು ವೈರಲ್ ಆದ ನಂತರ, ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಪೊಲೀಸ್ ಮಹಾನಿರ್ದೇಶಕ(ನಾಗರಿಕ ಹಕ್ಕುಗಳ ಜಾರಿ) ಕೆ. ರಾಮಚಂದ್ರ ರಾವ್ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದೆ.
ಪಾರದರ್ಶಕ ತನಿಖೆ ನಡೆಸಬೇಕು, ಸೇವೆಯಿಂದ ಅಮಾನತುಗೊಳಿಸಬೇಕು ಮತ್ತು ಶೂನ್ಯ ಸಹಿಷ್ಣುತೆ ನೀತಿಯಡಿಯಲ್ಲಿ ಐಜಿಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಯೋಗ ಒತ್ತಾಯಿಸಿದೆ.
ಸೋಮವಾರ ರಾತ್ರಿ ಕರ್ನಾಟಕ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರಗಳಲ್ಲಿ, ರಾವ್ ತಮ್ಮ ಕಚೇರಿಯೊಳಗೆ ಸಮವಸ್ತ್ರದಲ್ಲಿದ್ದಾಗ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತೋರಿಸುವ ದೃಶ್ಯಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಆಯೋಗ ತಿಳಿಸಿದೆ.
"ರಾಜ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾದ ಐಪಿಎಸ್ ಅಧಿಕಾರಿಯೊಬ್ಬರು ಸಮವಸ್ತ್ರದಲ್ಲಿದ್ದಾಗ ತಮ್ಮ ಕಚೇರಿಯೊಳಗೆ ಅಶ್ಲೀಲ ವರ್ತನೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಸಮಾನವಾದ ರೀತಿಯಲ್ಲಿ ವರ್ತಿಸುತ್ತಿರುವ ದೃಶ್ಯಗಳನ್ನು ರಾಜ್ಯ ಮಹಿಳಾ ಆಯೋಗವು ಗಂಭೀರವಾಗಿ ಪರಿಗಣಿಸಿದೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮಹಿಳಾ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕಾದ ಹಿರಿಯ ಪೊಲೀಸ್ ಅಧಿಕಾರಿಯ ಇಂತಹ ವರ್ತನೆ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಮತ್ತು ರಾಜ್ಯದ ಮಹಿಳೆಯರಲ್ಲಿ ನೆಗಟಿವ್ ಭಾವನೆಯನ್ನು ಉಂಟುಮಾಡುತ್ತದೆ ಎಂದು ಆಯೋಗ ಹೇಳಿದೆ.
ಈ ಘಟನೆಯು ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ, 2013 ರ ನಿಬಂಧನೆಗಳಿಗೆ ಒಳಪಡುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ತಕ್ಷಣವೇ ಪಾರದರ್ಶಕ ತನಿಖೆಗೆ ಆದೇಶಿಸಬೇಕು, ಅಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ತೆಗೆದುಕೊಂಡ ಕ್ರಮದ ಕುರಿತು ಏಳು ದಿನಗಳಲ್ಲಿ ವರದಿಯನ್ನು ಸಲ್ಲಿಸಬೇಕು ಎಂದು ಮಹಿಳಾ ಆಯೋಗ ವಿನಂತಿಸಿದೆ.