ಸುದ್ದಿ ಮುಖ್ಯಾಂಶಗಳು online desk
ರಾಜ್ಯ

News headlines 21-01-2026 | ನಾಳೆಯಿಂದ ವಿಧಾನಸಭೆ ವಿಶೇಷ ಅಧಿವೇಶನ; ಭಾಷಣ ಮಾಡಲು ರಾಜ್ಯಪಾಲರ ನಕಾರ; ಯುಪಿಐ ಸ್ಕ್ಯಾನರ್-ಲಿಂಕ್ಡ್ ಟಿಕೆಟ್ ವ್ಯವಸ್ಥೆ ದುರುಪಯೋಗ: BMTC ನಿರ್ವಾಹಕರ ಅಮಾನತು

ನಾಳೆಯಿಂದ ವಿಧಾನಸಭೆ ವಿಶೇಷ ಅಧಿವೇಶನ; ಭಾಷಣ ಮಾಡಲು ರಾಜ್ಯಪಾಲರ ನಕಾರ

ತಮಿಳುನಾಡು ವಿಧಾನಸಭೆಯಲ್ಲಿ ಅಲ್ಲಿನ ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದರ ಬೆನ್ನಲ್ಲೇ ಇದೀಗ ಕರ್ನಾಟಕ ವಿಧಾನಸಭೆ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನಿರಾಕರಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸಿದ ಹಿನ್ನೆಲೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದೆ. ನಾಳೆಯಿಂದ ಜ.31ರವರೆಗೆ ವಿಧಾನಸಭೆ ಜಂಟಿ ಅಧಿವೇಶನ ನಡೆಯಲಿದ್ದು ರಾಜ್ಯಪಾಲರ ನಡೆ ಬಹಳ ಕುತೂಹಲ ಮೂಡಿಸಿದೆ. ಕೇಂದ್ರವು Mahatma Gandhi NREGA ಹೆಸರನ್ನು 'ರದ್ದುಗೊಳಿಸುವುದು' ಸೇರಿದಂತೆ ಹಲವಾರು ವಿಷಯಗಳ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ವಿರೋಧ ಪಕ್ಷ ಬಿಜೆಪಿ-ಜೆಡಿ (ಎಸ್) ಒಕ್ಕೂಟದ ನಡುವೆ ಅಧಿವೇಶನದಲ್ಲಿ ಘರ್ಷಣೆ ನಿರೀಕ್ಷಿಸಲಾಗಿದೆ.

ಮಹದೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತ ಚಿರತೆ ದಾಳಿಗೆ ಬಲಿ

ಹನೂರು ತಾಲ್ಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ದೇವಸ್ಥಾನಕ್ಕೆ ಪಾದಯಾತ್ರೆಯಲ್ಲಿ ತೆರಳುತ್ತಿದ್ದ ಭಕ್ತನೊಬ್ಬನ ಮೇಲೆ ಬುಧವಾರ ಬೆಳಗ್ಗೆ ಚಿರತೆಯೊಂದು ದಾಳಿ ಮಾಡಿ ಕೊಂದಿದೆ. 30 ವರ್ಷದ ಪ್ರವೀಣ್ 30 ವರ್ಷದ ಪ್ರವೀಣ್ ಮೃತ ದುರ್ದೈವಿಯಾಗಿದ್ದು, ಮಂಡ್ಯ ಜಿಲ್ಲೆಯ ಚೀರನಹಳ್ಳಿಯ ತನ್ನ ಗ್ರಾಮದವರ ಜೊತೆ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಲು ಬಂದಿದ್ದ ಪ್ರವೀಣ್, ಮಂಗಳವಾರ ರಾತ್ರಿ ತಾಳುಬೆಟ್ಟದಲ್ಲಿ ವಾಸ್ತವ್ಯ ಹೂಡಿ ಬುಧವಾರ ಮುಂಜಾನೆ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಕಾಲ್ನಡಿಗೆಯಲ್ಲಿ ತೆರಳುವಾಗ ವಡ್ಡಿನ ಬಳಿ ಇದ್ದಕ್ಕಿದ್ದಂತೆ ಪ್ರವೀಣ್ ಮೇಲೆ ದಾಳಿ ನಡೆಸಿದ ಚಿರತೆ, ಕಾಡಿನೊಳಗೆ ಎಳೆದೊಯ್ದಿದೆ. ಈ ವೇಳೆ ಕುತ್ತಿಗೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದರಿಂದ, ತೀವ್ರ ರಕ್ತಸ್ರಾವವಾಗಿ ಪ್ರವೀಣ್ ಮೃತಪಟ್ಟಿದ್ದಾರೆ. ಚಿರತೆ ದಾಳಿ ನಡೆಸಿದ ಕೂಡಲೇ ಪ್ರವೀಣ್ ಅವರ ಜೊತೆಗಿದ್ದ ಇತರರು ಸ್ಥಳದಿಂದ ಓಡಿಹೋಗುವಲ್ಲಿ ಯಶಸ್ವಿಯಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಧಾರವಾಡ: ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯ ಬರ್ಬರ ಹತ್ಯೆ

ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೋರ್ವಳು ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ. ಮೃತ ವಿದ್ಯಾರ್ಥಿನಿ ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ 19 ವರ್ಷದ ಝಕಿಯಾ ಮುಲ್ಲಾ ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇಂದು ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ.

ಉಡುಪಿಯ ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಕೇಸರಿ ಧ್ವಜ ಪ್ರದರ್ಶಿಸಿದ ಜಿಲ್ಲಾಧಿಕಾರಿ: ವಿವಾದ, ಕ್ರಮ ಕೈಗೊಳ್ಳಲು CM ಗೆ ಪತ್ರ

ಉಡುಪಿಯ ಕೃಷ್ಣಮಠದ ಪರ್ಯಾಯದ ಮೆರವಣಿಗೆ ವೇಳೆ ಜಿಲ್ಲಾಧಿಕಾರಿ ಕೇಸರಿ ಧ್ವಜ ಪ್ರದರ್ಶಿಸಿದ ವಿಚಾರ ಇದೀಗ ವಿವಾದಕ್ಕೀಡಾಗಿದೆ. ಉಡುಪಿ ಜಿಲ್ಲಾಧಿಕಾರಿ ಟಿಕೆ ಸ್ವರೂಪಾ ಅವರು, ತಮ್ಮ ಅಧಿಕೃತ ಕರ್ತವ್ಯದ ಭಾಗವಾಗಿ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದೆ ಮತ್ತು ಇದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನವರಿ 18 ರಂದು ಪರ್ಯಾಯ ಮೆರವಣಿಗೆಗೆ ಚಾಲನೆ ನೀಡುವಾಗ ಕೇಸರಿ ಧ್ವಜ ಪ್ರದರ್ಶಿಸಿದ್ದಕ್ಕಾಗಿ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಸ್ಪಷ್ಟನೆ ಬಂದಿದೆ. ಉಡುಪಿ ಜಿಲ್ಲಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂಬ ಈ ಬೇಡಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸಿಟಿ ರವಿ, ಕಾಂಗ್ರೆಸ್‌ನ ಹಿಂದೂ ವಿರೋಧಿ ಸಿದ್ಧಾಂತವನ್ನು ಪ್ರಶ್ನಿಸಿದರು ಮತ್ತು ಜಿಲ್ಲಾಧಿಕಾರಿಯನ್ನು ಸಮರ್ಥಿಸಿಕೊಂಡರು.

ಯುಪಿಐ ಸ್ಕ್ಯಾನರ್-ಲಿಂಕ್ಡ್ ಟಿಕೆಟ್ ವ್ಯವಸ್ಥೆ ದುರುಪಯೋಗ: BMTC ನಿರ್ವಾಹಕರ ಅಮಾನತು

ಯುಪಿಐ ಸ್ಕ್ಯಾನರ್-ಲಿಂಕ್ಡ್ ಟಿಕೆಟ್ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡ ಮೂವರು ನಿರ್ವಾಹಕರನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅಮಾನತುಗೊಳಿಸಿದೆ. ಕಳೆದ ಡಿಸೆಂಬರ್ ನಲ್ಲಿ ನಡೆದ ನಿಯಮಿತ ತಪಾಸಣೆಯಲ್ಲಿ, ಸುರೇಶ್, ಮಂಚೇಗೌಡ ಮತ್ತು ಅಶ್ವಕ್ ಖಾನ್ ಎಂಬ ಮೂವರು ಸಿಬ್ಬಂದಿ ಟಿಕೆಟ್ ನೀಡುವಾಗ ಬಿಎಂಟಿಸಿ ಒದಗಿಸಿದ ಅಧಿಕೃತ ಕೋಡ್ ಬದಲಿಗೆ ತಮ್ಮ ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‌ಗಳನ್ನು ಬಳಸಿದ್ದರು ಎಂದು ತಿಳಿದುಬಂದಿದೆ. ಮೂವರು ನಿರ್ವಾಹಕರು 1,04,821 ರೂಪಾಯಿ ಮೌಲ್ಯದ ಟಿಕೆಟ್ ಹಣವನ್ನು ಬೇರೆಡೆಗೆ ವರ್ಗಾಯಿಸಿಕೊಂಡಿದ್ದಾರೆ. ಇಂತಹ ಘಟನೆ ಪುನರಾವರ್ತನೆಯಾಗದಂತೆ ತಡೆಯಲು, ಹೆಚ್ಚು ಪಾರದರ್ಶಕ ಟಿಕೆಟ್ ವ್ಯವಸ್ಥೆಗೆ ಕ್ರಿಯಾತ್ಮಕ ಕ್ಯೂಆರ್-ಆಧಾರಿತ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಟಿಸಿ ಯೋಜಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ, ಪಾಕ್ ಸಹಿ!

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!

T20 World cup ಟೂರ್ನಿಗೆ ಬಾಂಗ್ಲಾದೇಶ ಬಹಿಷ್ಕಾರ: 2 ಮಿಲಿಯನ್ ದಂಡ; ಈ ತಂಡಕ್ಕೆ ಜಾಕ್‌ಪಾಟ್!

ಬಿಗ್ ಬಾಸ್-12 ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯರಿಂದ ಅಭಿನಂದನೆ!

ಜಮ್ಮು ಮತ್ತು ಕಾಶ್ಮೀರ: 200 ಅಡಿ ಆಳದ ಕಮರಿಗೆ ಉರುಳಿಬಿದ್ದ ಸೇನಾ ವಾಹನ; 10 ಸಿಬ್ಬಂದಿ ಸಾವು! Video

SCROLL FOR NEXT