ಬೆಂಗಳೂರು: ಇನ್ನೊಂದು ಹೊಸ ಮೋಡಸ್ ಆಪರ್ಯಾಂಡಿ (ಕಾರ್ಯತಂತ್ರ) ಅಡಿಯಲ್ಲಿ, ಅಂತಾರಾಷ್ಟ್ರೀಯ ಮಾದಕ ವಸ್ತು ಕಾರ್ಟೆಲ್‌ಗಳು ಉನ್ನತ ದರ್ಜೆಯ ಅಕ್ರಮ ಮಾದಕ ವಸ್ತುಗಳನ್ನು ಗಡಿಪಾರು ಕಳ್ಳಸಾಗಣೆ ಮಾಡಲು ಮಕ್ಕಳ ಕಥೆ ಪುಸ್ತಕಗಳನ್ನು ಬಳಸುತ್ತಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ನಂಬಿಕಸ್ಥ ಮಾಹಿತಿ ಆಧರಿಸಿ, ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಚಿಲಿಯ ಪ್ರಜೆಯನ್ನು ಬಂಧಿಸಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸ್ಪ್ಯಾನಿಷ್ ಭಾಷೆಯ ಕಥೆ ಪುಸ್ತಕಗಳೊಳಗೆ ಮರೆಮಾಚಿದ್ದ ಸುಮಾರು 7.7 ಕೆಜಿ ಉನ್ನತ ದರ್ಜೆಯ ಕೊಕೇನ್ ನ್ನು ವಶಪಡಿಸಿಕೊಂಡಿದೆ. ಆರೋಪಿತ “ಮ್ಯೂಲ್” (ಕಳ್ಳಸಾಗಣೆಗೆ ಬಳಸುವ ವ್ಯಕ್ತಿ) 70 ವರ್ಷ ವಯಸ್ಸಿನವನಾಗಿದ್ದು, ನಿನ್ನೆ ಬೆಳಗ್ಗೆ 10.30ಕ್ಕೆ ಕೆಂಪೇಗೌಡ ಏರ್ ಪೋರ್ಟ್ ನ ಟಿ2 ಯ ಕಸ್ಟಮ್ಸ್ ಆಗಮನ ಹಾಲ್‌ನಲ್ಲಿ ಬಂಧಿಸಲಾಯಿತು.
ಮಾಹಿತಿ ಪಡೆದ ಮೂಲಗಳ ಪ್ರಕಾರ, ಕಸ್ಟಮ್ಸ್‌ನ ಏರ್ ಇಂಟೆಲಿಜೆನ್ಸ್ ಯೂನಿಟ್ ತಂಡವು ಅಡಿಸ್ ಅಬಾಬಾದಿಂದ ಎಥಿಯೋಪಿಯನ್ ಏರ್‌ಲೈನ್ಸ್‌ನ ET-690 ವಿಮಾನದಲ್ಲಿ ಬಂದಿದ್ದ ಚಿಲಿಯ ಪ್ರಜೆಯನ್ನು ತಡೆಹಿಡಿದಿದೆ. ಅವನಿಗೆ ಸೌವ್ ಪೌಲೋದಲ್ಲಿ ಕೊಕೇನ್ ಸಾಗಾಟದ ಸರಕು ಹಸ್ತಾಂತರಿಸಲಾಗಿದೆ ಎನ್ನಲಾಗಿದೆ.
ಬಳಿಕ ಬ್ರೆಜಿಲ್‌ನ ನಗರದಿಂದ ಅಡಿಸ್ ಅಬಾಬಾಕ್ಕೆ ಹೋಗಿ, ಅಲ್ಲಿಂದ ಬೆಂಗಳೂರಿಗೆ ಬರುತ್ತಿದ್ದ. ಈ ಸರಕು ಬೆಂಗಳೂರು ತಲುಪಿಸಿ ಒಪ್ಪಿಸಬೇಕಾಗಿತ್ತು. ಆರೋಪಿಗೆ ಮುಂದಿನ ಪ್ರಯಾಣಕ್ಕಾಗಿ ಟಿಕೆಟ್ ಬುಕ್ ಮಾಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ. ಆರೋಪಿ ಸ್ಪ್ಯಾನಿಷ್ ಮಾತ್ರ ಮಾತನಾಡುತ್ತಿದ್ದು, ತನ್ನ ಬಗ್ಗೆ ಹೆಚ್ಚಿನ ವಿಷಯ ಹೇಳಿಕೊಂಡಿಲ್ಲ.
ಅವನ ಬ್ಯಾಗೇಜನ್ನು ಪರಿಶೀಲಿಸಿದಾಗ, ಸ್ಪ್ಯಾನಿಷ್ ಮಕ್ಕಳ ಕಥೆ ಪುಸ್ತಕಗಳೊಳಗೆ ಪ್ಯಾಕೆಟ್‌ಗಳಲ್ಲಿ ಕೊಕೇನ್ ಮರೆಮಾಚಿರುವುದು ತನಿಖಾ ತಂಡಕ್ಕೆ ಪತ್ತೆಯಾಯಿತು. ಈ ಸರಕಿನಲ್ಲಿ 3 ಕೆಜಿ ಕ್ಕಿಂತ ಹೆಚ್ಚು ಬಿಳಿ ಪುಡಿ ಮತ್ತು 4.5 ಕೆಜಿ ಕಪ್ಪು ಪುಡಿ ಇತ್ತು.
ಪುಡಿಗಳ ಫೀಲ್ಡ್ ಟೆಸ್ಟಿಂಗ್ ಕಿಟ್ (FTK) ಪರೀಕ್ಷೆಯಲ್ಲಿ ಅದು ಕೊಕೇನ್ ಎಂದು ದೃಢಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಬ್ಲಾಕ್ ಕೊಕೇನ್ ಅಥವಾ ಕೋಕಾ ನೆಗ್ರಾ ಎನ್ನುವುದು ಕೊಕೇನ್ ಬೇಸ್/ಹೈಡ್ರೋಕ್ಲೋರೈಡ್‌ಗೆ ಚಾರ್ಕೋಲ್, ಬಣ್ಣದ ದ್ರವ್ಯಗಳು ಇತ್ಯಾದಿಗಳನ್ನು ಮಿಶ್ರಣ ಮಾಡಿ ಅದರ ರೂಪವನ್ನು ಮರೆಮಾಚುವ ಮಿಶ್ರಣವಾಗಿದ್ದು, ಸ್ಮೆಲ್ ಡಾಗ್‌ಗಳು ಮತ್ತು ಪರಿಶೀಲನೆಗಳಿಂದ ತಪ್ಪಿಸಿಕೊಳ್ಳಲು ಬಳಸಲಾಗುತ್ತದೆ.
ಭಾರತದ ಮಾದಕ ವಸ್ತು ಅಕ್ರಮ ಮಾರುಕಟ್ಟೆಯಲ್ಲಿ, ಬೇಡಿಕೆ ಮತ್ತು ಗುಣಮಟ್ಟವನ್ನು ಅವಲಂಬಿಸಿ, ಕೊಕೇನ್ ಒಂದು ಕೆಜಿಗೆ 5 ಕೋಟಿ ರೂಪಾಯಿಗಳಿಂದ 10 ಕೋಟಿವರೆಗೆ ಮಾರಾಟವಾಗುತ್ತದೆ. ವಶಪಡಿಸಿಕೊಂಡ ಅಕ್ರಮ ಮಾದಕ ವಸ್ತು ಉನ್ನತ ದರ್ಜೆಯದ್ದಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನಲ್ಲಿ ಅಕ್ರಮ ಮಾದಕ ವಸ್ತು ವ್ಯಾಪಾರವು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ, ಕೆಐಎ (KIA) ಯಲ್ಲಿಯೇ AIU ಕಸ್ಟಮ್ಸ್ ಅಧಿಕಾರಿಗಳು ಸುಮಾರು 100 ಪ್ರಕರಣಗಳನ್ನು ದಾಖಲಿಸಿ, ಮಾದಕ ಔಷಧಗಳು ಮತ್ತು ಮನೋಪ್ರಭಾವಿ ಪದಾರ್ಥಗಳು (NDPS) ಕಾಯ್ದೆ, 1985 ಅಡಿ 700 ಕೆಜಿಗೂ ಹೆಚ್ಚು ಹೈಡ್ರೋಪೊನಿಕ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಹೈಡ್ರೋಪೊನಿಕ್ ಗಾಂಜಾದ ಹೆಚ್ಚಿನ ಭಾಗವು ಬ್ಯಾಂಕಾಕ್‌ನಿಂದ ಕಳ್ಳಸಾಗಣೆ ಮಾಡಲಾಗುತ್ತದೆ ಎನ್ನಲಾಗಿದೆ. ಆರೋಪಿಯನ್ನು ನಂತರ NDPS ಕಾಯ್ದೆ, 1985 ಅಡಿ ಬಂಧಿಸಲಾಯಿತು. ಈ ಕಾಯ್ದೆಯಡಿ ದೋಷ ಸಾಬೀತಾದರೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಗೆ ದಾರಿ ಮಾಡಿಕೊಡುತ್ತದೆ. ಕೊಕೇನ್ ನ್ನು ಕೇಂದ್ರ ಮಾದಕವಿರೋಧಿ ಕಾಯ್ದೆಯಡಿ ನಿಷೇಧಿಸಲಾಗಿದೆ.
ದಕ್ಷಿಣ ಅಮೆರಿಕಕ್ಕೆ ಸ್ವದೇಶಿಯಾಗಿರುವ ಕೋಕಾ ಸಸ್ಯ (Erythroxylon coca)ದ ಎಲೆಗಳಿಂದ ತಯಾರಾಗುವ ಕೊಕೇನ್, ಅತ್ಯಂತ ಬಲವಾದ ಮತ್ತು ವ್ಯಸನಕಾರಕ (ಅಡಿಕ್ಟಿವ್) ಉತ್ತೇಜಕ ಮಾದಕವಸ್ತುವಾಗಿದ್ದು, ದೇಹದ ಎಲ್ಲಾ ವ್ಯವಸ್ಥೆಗಳ ಮೇಲೆ—ಮುಖ್ಯವಾಗಿ ಕೇಂದ್ರ ನರ ವ್ಯವಸ್ಥೆ (CNS)—ಪ್ರಭಾವ ಬೀರುತ್ತದೆ. ಕೊಕೇನ್ ಮೆದುಳಿನ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿ, ಉಲ್ಲಾಸ ಹೆಚ್ಚಿಸಿ ಮತ್ತೆ ಮತ್ತೆ ಸೇವಿಸಬೇಕೆಂದು ಆಸೆ ಹುಟ್ಟಿಸುತ್ತದೆ.