ಬೆಂಗಳೂರು: ಫ್ರೀಡಂ ಪಾರ್ಕ್‌ನಲ್ಲಿ ಪ್ರಥಮ ವರ್ಷದ ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪ್ಪಾರಪೇಟೆ ಪೊಲೀಸರು ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರನ್ನು ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ಆರ್.ಟಿ. ನಗರ ಪೊಲೀಸ್ ಠಾಣೆಗೆ ಸೇರಿದ ಕಾನ್‌ಸ್ಟೆಬಲ್ ಯಮುನಾ ನಾಯಕ್ ಎಂದು ಗುರುತಿಸಲಾಗಿದೆ.
ಆರ್‌ಟಿ ನಗರ ಪೊಲೀಸ್ ಠಾಣೆಗೆ ಸೇರಿದ ಕಾನ್‌ಸ್ಟೆಬಲ್ ಯಮುನಾ ನಾಯಕ್ ಅವರು ಫ್ರೀಡಂ ಪಾರ್ಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ, ಪಿಯು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಲಾಗಿದೆ. ಘಟನೆ ಕುರಿತು ವಿದ್ಯಾರ್ಥಿನಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೂರು ಆಧಾರದ ಮೇಲೆ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (POCSO) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಮಹಿಳೆಗೆ ಕಿರುಕುಳ ನೀಡಿದ ಆರೋಪ: ನಾಲ್ವರು ಬಂಧನ
ಮಾರುತಿ ನಗರದಲ್ಲಿ ತನ್ನ ಗೆಳೆಯನೊಂದಿಗಿದ್ದ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಡಿವಾಳ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳು ಮಾರುತಿ ನಗರದ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದರು, ಅವರಲ್ಲಿ ಇಬ್ಬರು ಸಿಗರೇಟ್ ಖರೀದಿಸಲು ಹೊರಗೆ ಬಂದಿದ್ದು, ಹಿಂತಿರುಗುವಾಗ ಮಹಿಳೆಯೊಬ್ಬರ ಕುರಿತು ಅಸಭ್ಯವಾಗಿ ಮಾತನಾಡಿದ್ದಾರೆ, ಈ ವೇಳೆ ಮಹಿಳೆ ಆಕ್ರೋಶಗೊಂಡಿದ್ದಾರೆ. ಬಳಿಕ ಜೊತೆಗಿದ್ದ ಗೆಳೆಯ ಪ್ರಶ್ನಿಸಿದ್ದು, ಆರೋಪಿಗಳು ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಆರೋಪಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯ ದೂರು ಆಧಾರದ ಮೇಲೆ, ಪೊಲೀಸರು ಬಿಎನ್‌ಎಸ್ (BNS) ಸೆಕ್ಷನ್ 79 ಮತ್ತು 115 ಅಡಿ ಪ್ರಕರಣ ದಾಖಲಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.