ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ವರದಿಯಾಗಿದ್ದು, ಕಾರು ಹಿಂಬಾಲಿಸಿ ಪುಂಡಾಟ ಮೆರೆದ ಯುವಕನ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಬೆಂಗಳೂರಿನ ಡಿಕೆನ್ಸನ್ ರಸ್ತೆಯಲ್ಲಿ ಕಾನೂನು, ಸುವ್ಯವಸ್ಥೆ ಮತ್ತು ನಾಗರಿಕ ಜವಾಬ್ದಾರಿಯನ್ನು ಸಂಕೇತಿಸುವ ಗಣರಾಜ್ಯೋತ್ಸವ ದಿನದಂದೇ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನ ಸವಾರನೊಬ್ಬ ಅಜಾಗರೂಕತೆಯಿಂದ ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದು ಮಾತ್ರವಲ್ಲದೇ ಇದನ್ನು ಪ್ರಶ್ನಿಸಿದ ಕಾರು ಚಾಲಕನನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ.
ಬಳಿಕ ತನ್ನ ದ್ವಿಚಕ್ರ ವಾಹನವನ್ನು ಅಜಾಗರೂಕವಾಗಿ ಚಾಲನೆ ಮಾಡಿಕೊಂಡು ಹೋದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ಈ ಬಗ್ಗೆ ಕಾರು ಮಾಲೀಕ ಎಂಎನ್ ಪ್ರವೀಣಿ ಎಂಬುವವರು ಘಟನೆ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿದ್ದು, ಘಟನೆಯ ಸಂಪೂರ್ಣ ವಿವರ ಬರೆದಿದ್ದಾರೆ.
ಆಗಿದ್ದೇನು?
KA05 ON 1454 ನೋಂದಣಿ ಸಂಖ್ಯೆಯನ್ನು ಹೊಂದಿರುವ TVS NTORQ ದ್ವಿಚಕ್ರ ವಾಹನ ಸಿಗ್ನಲ್ ಜಂಪ್ ನುಗ್ಗಿದ್ದು, ಈ ವೇಳೆ ಕಾರಿಗೆ ಢಿಕ್ಕಿಯಾಗುವುದು ತಪ್ಪಿದೆ. ದ್ವಿಚಕ್ರ ವಾಹನ ಸವಾರನ ಅಪಾಯಕಾರಿ ನಡೆಯಿಂದ ಗಾಬರಿಗೊಂಡ ಕಾರು ಮಾಲೀಕ ಸವಾರನಿಗೆ ಎಚ್ಚರಿಕೆ ನೀಡಲು ಕೂಗಿದರು.
ಈ ವೇಳೆ ಗಾಡಿ ನಿಲ್ಲಿಸಿದ ಬೈಕ್ ಚಾಲಕ ತನ್ನ ತಪ್ಪು ಒಪ್ಪಿಕೊಳ್ಳುವ ಬದಲು ದುರಂಹಕಾರದಿಂದ "ನನ್ನ ಬೈಕು, ನನ್ನ ನಿಯಮ, ನನ್ನ ರಸ್ತೆ, ನನ್ನ ಆಶಯ" ಎಂದು ಹೇಳಿದ್ದಾನೆ.
ಈ ವೇಳೆ ಕಾರು ಮಾಲೀಕ, 'ಪೊಲೀಸರ ಮುಂದೆ ಅದೇ ಮಾತುಗಳನ್ನು ಹೇಳು.. ಎಂದಾಗ ಯುವಕ ಕಾರು ಮಾಲೀಕನನ್ನು ನಿಂದಿಸಿದ್ದಾನೆ. ಈ ವೇಳೆ ಬೈಕ್ ಚಾಲಕ ಕಾರು ಮಾಲೀಕನಿಗೆ ಕಪಾಳಮೋಕ್ಷ ಮಾಡಲು ಪ್ರಯತ್ನಿಸಿದ್ದಾನೆ. ಬಳಿಕ ಬೈಕ್ ತೆಗೆದುಕೊಂಡು ಅಪಾಯಕಾರಿಯಾಗಿ ಚಲಾಯಿಸಿಕೊಂಡು ಹೋಗಿದ್ದಾನೆ.
ಪೊಲೀಸ್ ಕ್ರಮಕ್ಕೆ ಆಗ್ರಹ
ಸಿಗ್ನಲ್‌ಗಳನ್ನು ದಾಟುವುದು, ಸಹ ನಾಗರಿಕರನ್ನು ಬೆದರಿಸುವುದು ಮತ್ತು ದೈಹಿಕ ಹಲ್ಲೆಗೆ ಪ್ರಯತ್ನಿಸುವುದು ಸಣ್ಣ ಸಂಚಾರ ಸಮಸ್ಯೆಗಳೆಂದು ತಳ್ಳಿಹಾಕಲಾಗುವುದಿಲ್ಲ. ಅವು ಜೀವಗಳಿಗೆ ಅಪಾಯವನ್ನುಂಟುಮಾಡುವ ಕ್ರಿಮಿನಲ್ ಕೃತ್ಯಗಳಾಗಿವೆ.
ಬೆಂಗಳೂರು ಪೊಲೀಸರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು, ಘಟನೆಯನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು, ವಾಹನದ ವಿವರಗಳನ್ನು ಪರಿಶೀಲಿಸಬೇಕು ಮತ್ತು ಭಾಗಿಯಾಗಿರುವ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾವು ಬಲವಾಗಿ ಒತ್ತಾಯಿಸುತ್ತೇವೆ ಎಂದು ಪೋಸ್ಟ್ ನಲ್ಲಿ ಬರೆದಿದ್ದಾರೆ.