ದಾವಣಗೆರೆ: ಮದುವೆಯಾಗಿ ಕೇವಲ 45 ದಿನಕ್ಕೆ ಪ್ರಿಯಕರನೊಂದಿಗೆ ಪತ್ನಿ ಓಡಿ ಹೋಗಿದ್ದರಿಂದ ಮನನೊಂದು ಆಕೆಯ ಪತಿ ಹಾಗೂ ಮದುವೆ ಮಾಡಿಸಿದ್ದ ತಪ್ಪಿಗೆ ಸೋದರಮಾವ ಸಹ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ದಾವಣಗೆರೆ ಜಿಲ್ಲೆಯ ಗುಮ್ಮನೂರಿನಲ್ಲಿ ನಡೆದಿದೆ.
ಮೃತರನ್ನು ಗುಮ್ಮನೂರು ಗ್ರಾಮದ 30 ವರ್ಷದ ಹರೀಶ್ ಮತ್ತು ಯುವತಿಯ ಸೋದರ ಮಾವ ರುದ್ರೇಶ್ ಎಂದು ಗುರುತಿಸಲಾಗಿದೆ.
45 ದಿನಗಳ ಹಿಂದೆ ಮೃತ ಹರೀಶ್ ಅವರಿಗೆ ಹುಲಿಕಟ್ಟಿ ಗ್ರಾಮದ ಸರಸ್ವತಿ ಎಂಬ ಯುವತಿಯೊಂದಿಗೆ ಮದುವೆಯಾಗಿತ್ತು. ಆದರೆ, ಯುವತಿ ಆಕೆಯ ಪ್ರೇಮಿ ಕುಮಾರ ಎಂಬಾತನ ಜೊತೆ ಓಡಿ ಹೋದ ಕಾರಣ ಹರೀಶ್ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಎರಡು ಪುಟಗಳ ಡೆತ್‌ನೋಟ್ ಸಿಕ್ಕಿದ್ದು, ಅದರಲ್ಲಿ ನನ್ನ ಸಾವಿಗೆ ಹೆಂಡತಿಯೇ ಕಾರಣ ಎಂದು ಉಲ್ಲೇಖಿಸಿದ್ದಾರೆ.
ಇನ್ನು ಹರೀಶ್ ಸಾವಿನ ಸುದ್ದಿ ಕೇಳಿದ ಯುವತಿ ಸೋದರ ಮಾವ ರುದ್ರೇಶ್, ತಾನು ಮಾಡಿದ ತಪ್ಪಿಗೆ ಹರೀಶ್ ಮೃತಪಟ್ಟ ಎಂದು ನೊಂದ ಅವರೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರುದ್ರೇಶ್ ಖುದ್ದು ಹುಡುಗನ ಹುಡುಕಿ ಮದುವೆ ಮಾಡಿಕೊಟ್ಟಿದ್ದರು.
ಡೆತ್‌ನೋಟ್‌ನಲ್ಲಿ ಏನಿದೆ?
ʻ45 ದಿನದ ಹಿಂದಷ್ಟೇ ಮದುವೆ ಆಯಿತು. ಅಲ್ಲಿಂದ ಇಲ್ಲಿಯವರೆಗೂ ನೆಮ್ಮದಿಯೇ ಇಲ್ಲ. ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಳು. ಬೇರೆ ಯುವಕನೊಂದಿಗೆ ಓಡಿಹೋಗಿ, ನಾನು ಹಿಂಸೆ ನೀಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾಳೆ. ಪತ್ನಿ ಮತ್ತು ಆಕೆಯ ಸಂಬಂಧಿಕರಿಂದ ನನಗೆ ಜೀವ ಬೆದರಿಕೆ ಇತ್ತು. ನಾನು ಯಾವ ತಪ್ಪು ಮಾಡಿಲ್ಲ. ನನಗೆ ಮಾನ ಮರ್ಯಾದೆ ಮುಖ್ಯ. ಆ ಕಾರಣದಿಂದ ಅದನ್ನು ಉಳಿಸಿಕೊಳ್ಳಲು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ. ಪ್ರೀತಿಸಿದ ಯುವಕನೊಂದಿಗೆ ಓಡಿ ಹೋದರು ಸಹ ನನಗೆ ಕಿರುಕುಳ ನೀಡುತ್ತಿರುವ ಪತ್ನಿ ಹಾಗೂ ಆಕೆಯ ಪೋಷಕರು, ಚಿಕ್ಕಪ್ಪನಿಗೆ ಕಠಿಣ ಶಿಕ್ಷೆಯಾಗಲಿ. ಪತ್ನಿ ಮನೆಯವರ ಕಿರುಕುಳದಿಂದಾಗಿಯೇ ನನ್ನ ಅಪ್ಪ-ಅಮ್ಮ ಮನೆ ಬಿಡುವ ಯೋಚನೆ ಮಾಡಿದ್ದರುʼ ಎಂದು ಬರೆದುಕೊಂಡಿದ್ದಾರೆ.