ಉಡುಪಿ: ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡ ನಿವೃತ್ತ ಸೇನಾ ವಿಂಗ್ ಕಮಾಂಡೋಗೆ ಉಡುಪಿ ಜಿಲ್ಲೆಯ ಟೋಲ್ ಪ್ಲಾಜಾ ಸಿಬ್ಬಂದಿ ಕಿರುಕುಳ ನೀಡಿ, ಅವಮಾನ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಜನವರಿ 26 ರಂದು ಕುಂದಾಪುರ ಬಳಿಯ ಸಾಸ್ತಾನ ಟೋಲ್ ಪ್ಲಾಜಾದಲ್ಲಿ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಟೋಲ್ ಬೂತ್‌ನಲ್ಲಿ ನಿವೃತ್ತ ಸೈನಿಕ ರೆಕಾರ್ಡ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಕೇರಳದ ಕಾಸರಗೋಡು ಜಿಲ್ಲೆಯ ಎಡನೀರು ಮೂಲದ ನಿವೃತ್ತ ಸೇನಾಧಿಕಾರಿ ಶ್ಯಾಮರಾಜ್(42) ಅವರು ಆಪರೇಷನ್ ಪರಾಕ್ರಮ್ ಸಮಯದಲ್ಲಿ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಶಾಶ್ವತವಾಗಿ ಅಂಗವಿಕಲರನ್ನಾಗಿ ಮಾಡಿದೆ. ಈಗ ಅವರು ವೀಲ್‌ಚೇರ್‌ನಲ್ಲಿ ಓಡಾಡುತ್ತಿದ್ದಾರೆ.
ವಿಡಿಯೋದಲ್ಲಿ, ಶ್ಯಾಮರಾಜ್ ಅವರು ಭಾರತ ಸರ್ಕಾರ ನೀಡಿದ ಅಧಿಕೃತ ಗುರುತಿನ ಚೀಟಿ ಮತ್ತು ಟೋಲ್ ವಿನಾಯಿತಿ ಪಾಸ್ ಅನ್ನು ಹೊಂದಿದ್ದಾರೆ ಎಂದು ಹಿಂದಿಯಲ್ಲಿ ವಿವರಿಸುತ್ತಿರುವುದು ಕಂಡುಬರುತ್ತದೆ.
ಇತರ ಪ್ಲಾಜಾಗಳಲ್ಲಿ ಟೋಲ್ ಪಾವತಿಸದೆ ದೇಶಾದ್ಯಂತ ಪ್ರಯಾಣಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಆದರೆ ಉಡುಪಿಯ ಸಾಸ್ಥಾನದ ಟೋಲ್ ಸಿಬ್ಬಂದಿ ಅವರನ್ನು ತಡೆದು, ಟೋಲ್ ಪಾವತಿಸುವಂತೆ ಒತ್ತಾಯಿಸಿದ್ದಾರೆ.
"ನಾನು ಆಪರೇಷನ್ ಪರಾಕ್ರಮ್‌ನ ಯುದ್ಧದಲ್ಲಿ ಹೋರಾಡಿದ್ದೇನೆ. ಟೋಲ್ ವಿನಾಯಿತಿಗೆ ನನ್ನ ಬಳಿ ಎಲ್ಲಾ ದಾಖಲೆಗಳಿವೆ. ಉಳಿದೆಲ್ಲೆಡೆ ನನಗೆ ಹೋಗಲು ಅವಕಾಶವಿದೆ. ಆದರೆ ಇಲ್ಲಿ ಅವರು ನನ್ನನ್ನು ತಡೆಯುತ್ತಿದ್ದಾರೆ" ಎಂದು ಅವರು ಇಬ್ಬರು ಟೋಲ್ ಸಿಬ್ಬಂದಿಯನ್ನು ಹೆಸರಿಸುತ್ತಾ ಹೇಳಿದ್ದಾರೆ.
ಟೋಲ್ ಸಿಬ್ಬಂದಿಯನ್ನು ಪ್ರಶ್ನಿಸುತ್ತ, "ನಾನು ಈ ವೀಲ್‌ಚೇರ್‌ನಲ್ಲಿ ಏಕೆ ಕುಳಿತಿದ್ದೇನೆಂದು ನಿಮಗೆ ತಿಳಿದಿದೆಯೇ? ದೇಶಕ್ಕಾಗಿ ತ್ಯಾಗ ಮಾಡಿದ ಸೈನಿಕನನ್ನು ಈ ರೀತಿ ನಡೆಸಿಕೊಳ್ಳಲಾಗುತ್ತದೆಯೇ?" ಎಂದು ಕೇಳಿದ್ದಾರೆ.
ಡಿಸೆಂಬರ್ 2001 ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ 10 ತಿಂಗಳುಗಳಿಗಿಂತ ಹೆಚ್ಚು ಕಾಲ (ಡಿಸೆಂಬರ್ 2001-ಅಕ್ಟೋಬರ್ 2002) ನಡೆದ ದೊಡ್ಡ ಪ್ರಮಾಣದ ಮಿಲಿಟರಿ ಸಜ್ಜುಗೊಳಿಸುವಿಕೆ ಆಪರೇಷನ್ ಪರಾಕ್ರಮ್ ನಲ್ಲಿ ಭಾಗವಹಿಸಿದ್ದರು.
ಟೋಲ್ ಸಿಬ್ಬಂದಿ ನಡವಳಿಕೆಯಿಂದ ದುಃಖಿತರಾದ ಶ್ಯಾಮರಾಜ್ ಅವರು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ಯುದ್ಧ-ಅಂಗವಿಕಲ ಸೈನಿಕರಿಗೆ ಅಸ್ತಿತ್ವದಲ್ಲಿರುವ ಮಾನದಂಡಗಳ ಅಡಿಯಲ್ಲಿ ಟೋಲ್ ಪಾವತಿಯಿಂದ ವಿನಾಯಿತಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಟೋಲ್ ಪ್ಲಾಜಾ ಸಿಬ್ಬಂದಿ ಉನ್ನತ ಅಧಿಕಾರಿಗಳ ಸೂಚನೆಗಳ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ವಿನಾಯಿತಿಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ಘಟನೆಯು ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಅನೇಕ ಜನ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಮತ್ತು ರಕ್ಷಣಾ ಸಿಬ್ಬಂದಿ ಮತ್ತು ಯೋಧರಿಗೆ ಟೋಲ್ ನಿಯಮಗಳ ಕುರಿತು ಉತ್ತಮ ತರಬೇತಿ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕ್ಷಮೆಯಾಚಿಸಿದ ಟೋಲ್ ಸಿಬ್ಬಂದಿ
ಭಾನುವಾರ ರಾತ್ರಿ ಟೋಲ್ ಪಾವತಿ ವಿಚಾರದಲ್ಲಿ ಮಾಜಿ ಸೈನಿಕರೊಬ್ಬರಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದ ಬಗ್ಗೆ ಸಾಸ್ಥಾನ ಟೋಲ್ ಪ್ಲಾಜಾದ ಟೋಲ್ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ.
ಘಟನೆಯ ಬಗ್ಗೆ ಮಾಜಿ ಸೈನಿಕ ಯಾವುದೇ ದೂರು ನೀಡಿಲ್ಲ. ಆದರೆ ಸಂಬಂಧಪಟ್ಟ ಟೋಲ್ ಸಿಬ್ಬಂದಿ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ. "ಭಾಗಿಯಾಗಿರುವ ಎಲ್ಲಾ ಸಿಬ್ಬಂದಿಯನ್ನು ಪೊಲೀಸ್ ಠಾಣೆಗೆ ಕರೆಸಲಾಯಿತು ಮತ್ತು ಸೂಕ್ತ ನಡವಳಿಕೆಯ ಬಗ್ಗೆ ವಿಶೇಷವಾಗಿ ಮಾಜಿ ಸೈನಿಕರೊಂದಿಗೆ ಮತ್ತು ಸಶಸ್ತ್ರ ಪಡೆಗಳ ಸಿಬ್ಬಂದಿ ಬಗ್ಗೆ ಅರಿವು ಮೂಡಿಸಲಾಯಿತು" ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ.