ಶಿವಮೊಗ್ಗ: ಚಿತ್ರದುರ್ಗದಲ್ಲಿ ಬಸ್ ದುರಂತ ಘಟನೆ ಮಾಸುವ ಮುನ್ನವೇ ಶಿವಮೊಗ್ಗದಲ್ಲಿ ಮತ್ತೊಂದು ಅವಘಡ ನಡೆದಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡಿದ್ದ ಬೆಂಕಿಯಿಂದ ಖಾಸಗಿ ಸ್ಲೀಪರ್ ಬಸ್ಸು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಸೂಡುರು ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಹೊಸನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ 36 ಪ್ರಯಾಣಿಕರನ್ನು ಹೊಂದಿದ್ದ ಖಾಸಗಿ ಎಸಿಯೇತನ ಸ್ಲೀಪರ್ ಬಸ್ ನಿನ್ನೆ ಮಂಗಳವಾರ ತಡರಾತ್ರಿ ಬೆಂಕಿಗೆ ಆಹುತಿಯಾಯಿತು. ವಾಹನವು ತೀವ್ರವಾಗಿ ಹಾನಿಗೊಳಗಾಗಿದ್ದರೂ, ಎಲ್ಲಾ ಪ್ರಯಾಣಿಕರು ಪಾರಾಗಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದರು, 8 ಮಂದಿ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೃಷ್ಟವಶಾತ್ ಚಾಲಕನ ಅದ್ಭುತ ಸಮಯಪ್ರಜ್ಞೆಯಿಂದಾಗಿ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದೆ. ಹೊಸನಗರದಿಂದ ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ 'ಶ್ರೀ ಅನ್ನಪೂರ್ಣೇಶ್ವರಿ' ಸಂಸ್ಥೆಯ ಬಸ್ಸಿನಲ್ಲಿ ಅರಸಾಳು ಮತ್ತು ಸೂಡೂರು ಗ್ರಾಮಗಳ ಮಧ್ಯದ 9ನೇ ಮೈಲಿಗಲ್ಲು ಬಳಿ ಈ ಅವಘಡ ಸಂಭವಿಸಿದೆ.
ಚಲಿಸುತ್ತಿದ್ದ ಬಸ್ಸಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಾಗ ತಕ್ಷಣ ಎಚ್ಚೆತ್ತ ಚಾಲಕ, ಬಸ್ಸನ್ನು ನಿಯಂತ್ರಿಸಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಈ ಸಮಯಪ್ರಜ್ಞೆಯಿಂದಾಗಿ ಪ್ರಯಾಣಿಕರಿಗೆ ಎಮರ್ಜೆನ್ಸಿ ಡೋರ್ ಮೂಲಕ ಹೊರಬರಲು ಸಾಧ್ಯವಾಯಿತು, ಇಲ್ಲದಿದ್ದರೆ ಜೀವಹಾನಿ ಸಂಭವಿಸುತ್ತಿತ್ತು. ಬೆಂಕಿ ಇಡೀ ಬಸ್ಸಿಗೆ ಕ್ಷಣಾರ್ಧದಲ್ಲಿ ವ್ಯಾಪಿಸಿದ್ದರಿಂದ, ಪ್ರಯಾಣಿಕರ ಬಟ್ಟೆ-ಬರೆ ಹಾಗೂ ಬೆಲೆಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.