ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರ ವಿರುದ್ಧ ಏಚವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ ಎಂಬ ಆಡಿಯೋ ಸಂಬಂಧ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನಾಗಮಂಗಲದ ಜೆಡಿಎಸ್ ಕಾರ್ಯಕರ್ತನ ಜೊತೆ ನಾನು ಮಾತನಾಡಿದ್ದೇ ಎನ್ನಲಾದ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ನನಗೆ ಮಾಹಿತಿ ಲಭ್ಯವಾಯಿತು. ಆ ಆಡಿಯೋದಲ್ಲಿ ಇರೋ ಮಾತುಗಳು ಸತ್ಯಾಸತ್ಯತೆಗೆ ದೂರವಾಗಿದ್ದು ಅದರಲ್ಲಿ ಬಹುತೇಕ ಮಾತುಗಳನ್ನ ನಾನು ಮಾತನಾಡಿಯೇ ಇಲ್ಲ ಅಂತ ಈ ಮೂಲಕ ಸ್ಪಷ್ಟ ಪಡಿಸುತ್ತೇನೆ.
ಜನವರಿ 9ರಂದು ನಾನು ನಾಗಮಂಗಲದಲ್ಲಿ ಕೇಂದ್ರ ಸಚಿವರ ಕುಮಾರಸ್ವಾಮಿಯವರ ವಿರುದ್ದ ರಾಜಕೀಯವಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದೆ. ಹೆಚ್ಡಿಕೆ ಅವರು ಡಿ.ಕೆ.ಶಿವಕುಮಾರ್ ಅವರನ್ನ ತೇಜೋವದೆ ಮಾಡುವಂತೆ ಮಾತನಾಡಿದ್ದಕ್ಕೆ ಹೆಚ್‍ಡಿಕೆಯವರ ಬಗ್ಗೆ ನಾನು ಖಾರವಾಗಿಯೇ ಹೇಳಿಕೆ ನೀಡಿ ವಾಗ್ದಾಳಿ ಮಾಡಿದ್ದೆ. ಇದಾದ ನಂತರ ಜನವರಿ 11ರಂದು, ಕದಬಳ್ಳಿ ಗ್ರಾಮದ ರಂಗ ಎಂಬಾತ ನನ್ನ ಪಿಎ ನಂಬರ್ ಗೆ ಕಾಲ್ ಮಾಡಿ, ಗೌಡರ ಜೊತೆ ಮಾತನಾಡಬೇಕು ಎಂದು ಮನವಿ ಮಾಡಿಕೊಂಡ. ಆಗ ಅವರ ಮಾಹಿತಿ ಪಡೆದುಕೊಂಡ ನನ್ನ ಪಿಎ ನನಗೆ ಪೋನ್ ಕೊಟ್ಟರು.
ನನ್ನ ಜೊತೆ ಮಾತನಾಡಲು ಆರಂಭಿಸಿದ ಅವರು, ನನ್ನ ಹೇಳಿಕೆಯನ್ನ ಪ್ರಶ್ನೆ ಮಾಡಿದ್ದ ಆ ಯುವಕ ಕುಮಾರಸ್ವಾಮಿ ಪರವಾಗಿ ವಾದ ಮಾಡಿದ. ನಾನು ಆತನಿಗೆ ಪ್ರತಿಕ್ರಿಯೆ ನೀಡಿ ಆತನ ಜೊತೆ ಗೌರವಯುತವಾಗಿಯೇ ಮಾತನಾಡಿದೆ. ಮಾತು ಮುಂದುವರೆಸಿ ನನ್ನನ್ನ ಪ್ರದೋಚಿಸಲು ಪ್ರಯತ್ನಿಸಿದ ಆತನ ವರ್ತನೆ ಗಮನಿಸಿ ನಾನು ಆತನಿಗೆ ಒಂದೇರಡು ಬೈಗುಳ ಬೈದು ಪೋನ್ ಇಟ್ಟೆ. ಅಂದು ಆತ ನನ್ನ ಜೊತೆ ಮಾತನಾಡಿದ್ದು 2 ನಿಮಿಷ 42 ಸೆಕೆಂಡ್ ಅಷ್ಟೆ. ಅದೆ ದಿನ ಆತ ನನಗೆ ಬೆಳಗ್ಗೆ 11.37ರಲ್ಲಿ ಕರೆ ಮಾಡಿದ್ದು ಆ ಕರೆಯನ್ನ ನಾವು ಸ್ವೀಕರಿಸಿರಲಿಲ್ಲ.
ಆದ್ರೆ ಮತ್ತೆ ಮಧ್ಯಾಹ್ನ 1.17ಕ್ಕೆ ಕರೆ ಮಾಡಿದಾಗ ಯಾರು ನಾಗಮಂಗಲದ ನಮ್ಮ ಕಾರ್ಯಕರ್ತರಿರಬಹುದು ಎಂದು ಕರೆ ಸ್ವೀಕರಿಸಿದಾಗ ಆ ವ್ಯಕ್ತಿ ಜೊತೆ ಮಾತುಕತೆ ನಡೆದಿದೆ. ಇದು ಅಂದು ನಡೆದ ವಾಸ್ತವ. ಆದ್ರೆ ಘಟನೆ ನಡೆದ 18 ದಿನಗಳ ನಂತರ ನನ್ನ ಆಡಿಯೋದಲ್ಲಿ ಇಲ್ಲಸಲ್ಲದ್ದನ್ನ ಸೇರಿಸಿ 2 ನಿಮಿಷ. 42 ಸೆಕೆಂಡ್ ಆಡಿಯೋವನ್ನ 20 ನಿಮಿಷದ ಆಡಿಯೋ ಆಗಿ ಪರಿವರ್ತಿಸಿ, ತಮಗೆ ಬೇಕಾದ ರೀತಿಯಲ್ಲಿ ವಾಕ್ಯಗಳನ್ನ , ಪದಗಳನ್ನ ಸೇರಿಸಿ ಅದನ್ನ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ.
ನಾನು ನಿಜಕ್ಕು ಯಾರಾದರೂ ಗಣ್ಯರ ಬಗ್ಗೆ, ನಾಯಕರ ಬಗ್ಗೆ ಮಾತನಾಡಿದ್ದರೆ ಅದರ ಮರುದಿನವೇ ಅದನ್ನ ಆಡಿಯೋವನ್ನ ಹರಿಬಿಡಬಹುದಿತ್ತಲ್ಲವೇ? ಆದ್ರೆ 18 ದಿನಗಳ ಸಮಯವಕಾಶ ಪಡೆದುಕೊಂಡುದ AI ರಚಿತ ಪೋಟೋವೊಂದನ್ನ ಬಳಸಿ ನನ್ನ ವೈಯುಕ್ತಿಕ ತೇಜೋವಧೆಗೆ ಧಕ್ಕೆ ತರುವಂತ ಮಾತುಗಳನ್ನ ಆಡಿಯೋದಲ್ಲಿ ಸೇರಿಸಿರೋದು ಒಂದು ದೊಡ್ಡ ಷಡ್ಯಂತ್ರವನ್ನ ತೋರುತ್ತದೆ. ಇಂದಿನ ಕಾಲದಲ್ಲಿ ಯಾವ ಮುಖಂಡರು ಕಾರ್ಯಕರ್ತರ ಜೊತೆ 20 ನಿಮಿಷ ಪೋನ್ನಲ್ಲಿ ಮಾತನಾಡುತ್ತಾರೆ? ಕಾಲ್ ರೆಕಾರ್ಡ್ ಮಾಡಿಕೊಳ್ಳುತ್ತಾರೆ ಅಂತ ಗೊತ್ತಿದ್ದರು ಮಾತನ್ನ ಮುಂದುವರೆಸುತ್ತಾರೆ? ಅಲ್ಲದೆ ತನ್ನದೆ ಪಕ್ಷದ ಮುಖಂಡರಿಗೆ ಏಕವಚನ ಬಳಸುತ್ತಾರೆ ಹೇಳಿ? ಎಂದು ಪ್ರಶ್ನಿಸಿದ್ದಾರೆ.
ಆದ್ರೆ ಉಳಿದ ಯಾವುದೇ ಮಾತುಗಳು ನನ್ನದಲ್ಲ ಅದೊಂದು ಸೃಷ್ಟಿ ಮಾಡಿರುವ ಆಡಿಯೋ….ಇದಕ್ಕೆ ಸಾಕ್ಷಿ ಎಂಬಂತೆ ಚಾಟ್ ಜಿಪಿಟಿಯಲ್ಲಿ ಆಡಿಯೋದಲ್ಲಿರುವ ವ್ಯಕ್ತಿ ಪೋಟೋ ಹಾಕಿದರೆ ಆತನ ಎಐ ರಚಿತ ಪೋಟೋ ಸಿಗುತ್ತದೆ. ಆಡಿಯೋ ಕೂಡ ಎಐ ಬಳಸಿಯೇ ಸೃಷ್ಟಿಸಿದ್ದಾರೆ. ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಲು ಸಿದ್ದವಾಗಿದ್ದು ಯಾವ ಯಾವ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ಅಪ್ಲೋಡ್ ಆಗಿದೆ ಅವುಗಳ ಮಾಹಿತಿ ಪಡೆದು. ಎಐ ಟೂಲ್ ಬಳಸಿರುವ ಬಗ್ಗೆ ಮಾಹಿತಿ ಕಲೆ ಹಾಕಿ. ಸಂಪೂರ್ಣ ಮಾಹಿತಿ ಬಂದ ತಕ್ಷಣ ನನ್ನ ಲಿಗಲ್ ಟೀಂ ಜೊತೆ ಚರ್ಚಿಸಿ ಸೈಬರ್ ಠಾಣೆಗೆ ದೂರು ನೀಡುತ್ತೇನೆ.
ಮತ್ತೆ ಸಷ್ಟಪಡಿಸುತ್ತೇನೆ ಅಂದು ನಾನು ಮಾತನಾಡಿದ್ದು ನಿಜ, ಉಳಿದ ಯಾವುದೇ ಪದಗಳು ನನ್ನದಲ್ಲ, ಹಿರಿಯ ನಟ ಅಂಬರೀಶ್ ಅವರ ಬಗ್ಗೆಯೇ ಆಗಲಿ, ಜಿ.ಮಾದೇಗೌಡರ ಬಗ್ಗೆಯೇ ಆಗಲಿ. ಅಥವ ಯಾವುದೇ ನಾಯಕರ ಬಗ್ಗೆ ಅವಾಚ್ಯ ಶಬ್ದ ಅಥವ ಅಸಭ್ಯ ಪದಗಳನ್ನ ಬಳಸಿಲ್ಲ. ದಯವಿಟ್ಟು ಆ ವ್ಯಕ್ತಿಯ ಪೋಟೋವನ್ನ ಚಾಟ್ ಜಿಟಿಪಿಯಲ್ಲಿ ಹಾಕಿ ಸರ್ಚ್ ಮಾಡಿ ಎಲ್ಲರಿಗು ಸಾಕ್ಷಿ ಸಿಗುತ್ತೆ. ನಾನು ಮತ್ತೆ ನಾಗಮಂಗಲದಲ್ಲಿ ಪ್ರವಾಸ ಆರಂಭಿಸಿದ್ದರ ಪರಿಣಾಮವಾಗಿ ನನ್ನ ವಿರುದ್ದ ಈ ರೀತಿಯ ಸಂಚು ರೂಪಿಸಲಾಗಿದೆ. ಈ ಹಿಂದೆಯೂ ಕೂಡ ನನ್ನ ಬಗ್ಗೆ ಪಿತೂರಿ ಮಾಡಿದ್ದರು, ಈ ಬಗ್ಗೆ ನಾನು ಕಾನೂನು ಹೋರಾಟ ಮಾಡಲು ಸಿದ್ದನಿದ್ದೇನೆ. ಇದು ನನ್ನ ಅಧಿಕೃತ ಸ್ಪಷ್ಟನೆಯಾಗಿದ್ದು, ನನ್ನದಲ್ಲದ ಹೇಳಿಕೆಯಲ್ಲದಿದ್ದರೂ ಈ ಬೆಳಣಿಗೆಯಿಂದ ಅಂಬರೀಶ್ ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ವಿಷಾದ ವ್ತಕ್ತಪಡಿಸುತ್ತೇನೆ ಎಂದಿದ್ದಾರೆ.