ಮಂಡ್ಯ: ಮಾಜಿ ಸಂಸದ ಎಲ್ಆರ್ ಶಿವರಾಮೇಗೌಡರದ್ದು ಎನ್ನಲಾದ ಆಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಜೆಡಿಎಸ್ ಕಾರ್ಯಕರ್ತನೊಂದಿಗೆ ಫೋನ್‌ನಲ್ಲಿ ಮಾತನಾಡುವ ವೇಳೆ ಮಾತಿನ ಭರದಲ್ಲಿ ಹಲವು ರಾಜಕೀಯ ರಹಸ್ಯಗಳನ್ನು ಬಿಚ್ಚಿಟ್ಟು, ಕೆಲ ರಾಜಕೀಯ ನಾಯಕರಿಗೆ ಏಕವಚನದಲ್ಲಿ ವಾಗ್ದಾಳಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಅವರ ಆಕ್ಷೇಪಾರ್ಹ ಹೇಳಿಕೆಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ಜೆಡಿಎಸ್ ಕಾರ್ಯಕರ್ತನೊಬ್ಬರೊಂದಿಗೆ ದೂರವಾಣಿ ಸಂಭಾಷಣೆ ವೇಳೆ ಅವರು ಅಶ್ಲೀಲ ಹಾಗೂ ಅವಾಚ್ಯ ಪದಗಳನ್ನು ಬಳಸಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ದಿವಂಗತ ನಟ ಅಂಬರೀಶ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ
ಅಂಬರೀಶ್ ನನ್ನು ಕಾಂಗ್ರೆಸ್‌ಗೆ ಕರೆದುಕೊಂಡು ಬಂದೆ, ಆದರೆ ಆತ ತೊಳೆದುಬಿಟ್ಟು ಹೋದ ಎಂದು ಹೇಳಿಕೊಂಡು, ಬಳಿಕ ಪಕ್ಷ ತೊರೆದು ಹೋದ ವಿಚಾರಕ್ಕೆ ಸಂಬಂಧಿಸಿ ಅಶ್ಲೀಲ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಈ ಆಡಿಯೋ ವೈರಲ್ ಆದ ಬಳಿಕ, ರಾಜಕೀಯ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಸಾರ್ವಜನಿಕ ಜೀವನದಲ್ಲಿರುವ ನಾಯಕರು ಜವಾಬ್ದಾರಿಯುತ ಭಾಷೆ ಬಳಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಏಕವಚನದಲ್ಲಿ ಕಿಡಿಕಾರಿರುವ ಅವರು, ಲೋಕಸಭೆ ಉಪಚುನಾವಣೆಗೆ ಟಿಕೆಟ್ ನೀಡಿ ನನ್ನಿಂದ ಸುಮಾರು 36 ಕೋಟಿ ರೂಪಾಯಿ ಖರ್ಚು ಮಾಡಿಸಿ, ಮತ್ತೆ ಟಿಕೆಟ್ ನೀಡದೆ ನನ್ನನ್ನು ಮೋಸಗೊಳಿಸಿದ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಜೆಡಿಎಸ್ ಪಕ್ಷದಲ್ಲಿ ಒಕ್ಕಲಿಗ ಸಮುದಾಯದ ನಾಯಕರನ್ನು ಬೆಳೆಯಲು ಅವಕಾಶ ನೀಡಲಿಲ್ಲ ಎಂಬ ಆರೋಪವನ್ನೂ ಅವರು ಮುಂದಿಟ್ಟಿದ್ದಾರೆ. ಪಕ್ಷದೊಳಗಿನ ನಾಯಕತ್ವದ ರಾಜಕಾರಣವನ್ನು ಪ್ರಶ್ನಿಸಿರುವ ಅವರು, ತಮ್ಮದೇ ಪಕ್ಷದ ಚಲುವರಾಯಸ್ವಾಮಿ, ಮಾಜಿ ಸಂಸದ ದಿವಂಗತ ಮಾದೇಗೌಡ ಹಾಗೂ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧವೂ ಅವಾಚ್ಯ ಭಾಷೆಯಲ್ಲಿ ಟೀಕೆ ಮಾಡಿರುವುದು ಆಡಿಯೋದಲ್ಲಿ ಕೇಳಿಬರುತ್ತಿದೆ.