ಬೆಂಗಳೂರು: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (BIFF)ಪ್ಯಾಲೆಸ್ತೀನ್ ಸಿನಿಮಾ ಪ್ರದರ್ಶನದ ಪರ ಧ್ವನಿ ಎತ್ತಿರುವ ನಟ ಪ್ರಕಾಶ್ ರಾಜ್ ವಿರುದ್ಧ ಬಿಜೆಪಿ ಶುಕ್ರವಾರ ವಾಗ್ದಾಳಿ ನಡೆಸಿದೆ.
ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ನಟ ಹಾಗೂ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಗುರುವಾರ ಪ್ರತಿರೋಧ ವ್ಯಕ್ತಪಡಿಸಿದರು.
ಈ ಬಾರಿ ಬೆಂಗಳೂರಿನಲ್ಲಿ ಪ್ರದರ್ಶನವಾಗಬೇಕಿದ್ದ 'ಪ್ಯಾಲೆಸ್ತಿನ್ ಸಿನಿಮಾಗಳ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅಡ್ಡಗಾಲು ಹಾಕಿದೆ. ಇದು ಯಾಕೆ? ಇದರ ವಿರುದ್ಧ ನಾವು ಹೇಗೆ ಪ್ರತಿಭಟಿಸಬೇಕು? ಎಂದು ಪ್ರಶ್ನಿಸಿದ ಪ್ರಕಾಶ್ ರಾಜ್, ಈ ಬಗ್ಗೆ ದೃಢ ನಿರ್ಧಾರ ತೆಗೆದುಕೊಳ್ಳುವಂತೆ ಬಿಐಎಫ್‌ಎಫ್ ರಾಯಭಾರಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಕಾದಂಬರಿಗೆ ಇತರರು ನೀಡಿದ ಬೂಕರ್ ಪ್ರಶಸ್ತಿಯನ್ನು ರಾಜ್ಯದ ಜನರು ಸಂಭ್ರಮಿಸುತ್ತಿರುವಾಗ ಇತರರ ಸಿನಿಮಾ ನಿರ್ಬಂಧಿಸುವುದನ್ನು ಭಾರತೀಯರು ಹೇಗೆ ಸ್ವೀಕರಿಸುತ್ತಾರೆ ಎಂದು ಅವರು ಹೇಳಿದರು. ಅಲ್ಲದೇ ಪ್ಯಾಲೆಸ್ತೀನ್ ಸಿನಿಮಾವನ್ನು ಬೆಂಬಲಿಸಿ ಕವಿತೆ ವಾಚಿಸಿದರು ಮತ್ತು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳಲ್ಲಿ ರಾಜಕೀಯ ಬೆರೆಸಬಾರದು ಎಂದು ಅವರು ಸರ್ಕಾರ ಒತ್ತಾಯಿಸಿದ್ದಾರೆ.
ಪ್ರಕಾಶ್ ರಾಜ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ಚಲನಚಿತ್ರೋತ್ಸವದಲ್ಲಿ ಯಾವ ಚಿತ್ರ ತೋರಿಸಬೇಕು ಅಂತ ಸಂಬಂಧಿಸಿದ ಇಲಾಖೆ ತೀರ್ಮಾನ ಮಾಡುತ್ತೆ ಎಂದಿದ್ದಾರೆ.
ಪ್ಯಾಲೆಸ್ತೀನ್ ಚಿತ್ರಗಳ ನಿರ್ಬಂಧದ ಬಗ್ಗೆ ಮೇಲೆ ನಿರ್ಧಾರ ಆಗಿರುತ್ತೆ. ಆದ್ರೆ ನಮ್ಮಲ್ಲಿ ಇಬ್ಬರು ವಿರೋಧ ಮಾಡಿದ್ದಾರೆ, ಅವರದ್ದು ಸಂಕುಚಿತ ಮನೋಭಾವ. ಬಾಂಗ್ಲಾ ನರಮೇಧ ಬಗ್ಗೆ, ಪಾಕಿಸ್ತಾನದಲ್ಲಿನ ನರಮೇಧದ ಬಗ್ಗೆಯೂ ಚಿತ್ರಗಳ ಪ್ರದರ್ಶನ ಮಾಡಿ ಅಂತ ಇವರ್ಯಾಕೆ ಹೇಳಲ್ಲ? ಎಡಪಂಥೀಯರ ಮಾತು ಯಾವಾಗಲೂ ಇದೇ ರೀತಿ ಇರುತ್ತೆ. ಪ್ಯಾಲೆಸ್ಟೈನ್ ಚಿತ್ರಗಳಿಗೆ ನಿರ್ಬಂಧ ನಿರ್ಧಾರ ಸರಿ ಇದೆ ಎಂದಿದ್ದಾರೆ.