ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಅನುಷ್ಠಾನ ಸಂಬಂಧ 14,805.80 ಕೋಟಿ ರು. ಮೊತ್ತದ ಶೇ.67ರಷ್ಟು ಕಾಮಗಾರಿಗಳನ್ನು ಕೇವಲ 7 ಮಂದಿ ನೀಡಿರುವುದು, ಗುತ್ತಿಗೆದಾರರ ಆರ್ಥಿಕ ಸಾಮರ್ಥ್ಯ, ಕೆಲಸದ ಅನುಭವ ಮೌಲ್ಯ ಮಾಪನ ಮಾಡದೆ ಶೇ.80ರಷ್ಟು ಕಾಮಗಾರಿಗಳನ್ನು ಗುತ್ತಿಗೆ ನೀಡಿರುವುದರಿಂದಲೇ ಯೋಜನೆ ಅನುಷ್ಠಾನ ವಿಳಂಬವಾಗಿದೆ ಎಂದು ಮಹಾಲೇಖಪಾಲರ ವರದಿ ಹೇಳಿದೆ.
ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾದ ‘ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಅನುಷ್ಠಾನದ ಮೇಲಿನ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆ’ ವರದಿಯಲ್ಲಿ ಈ ಆಕ್ಷೇಪ ಎತ್ತಲಾಗಿದೆ.
14,805 ಕೋಟಿ ರೂ. ಮೊತ್ತದ 18 ಕಾಮಗಾರಿಗಳನ್ನು ಏಳು ಕಂಪನಿಗಳಿಗೆ, ಒಂದೇ ಕಂಪನಿಗೆ 5,216 ಕೋಟಿ ರೂ. ಮೊತ್ತದ 11 ಕಾಮಗಾರಿಗಳ ಗುತ್ತಿಗೆಯನ್ನು ನಿಯಮ ಉಲ್ಲಂಘಿಸಿ ನೀಡಲಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆಗೆ 2012ರಲ್ಲಿಯೇ ಅನುಮೋದನೆ ನೀಡಲಾಗಿದ್ದು, 2014 ಮತ್ತು 2023ರಲ್ಲಿ ಮರು ಪರಿಷ್ಕರಣೆಗೊಂಡಿದೆ. ಮಾರ್ಚ್ 2024ರ ವೇಳೆಗೆ ಯೋಜನೆ ವೆಚ್ಚ ರೂ.15,297 ಕೋಟಿ ತಲುಪಿದ್ದು, ಯೋಜನೆಯ ಮುಖ್ಯ ಗುರಿ (ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಕುಡಿಯುವ ನೀರು ಪೂರೈಕೆ) ಇನ್ನೂ ಸಾಧಿಸಲ್ಪಟ್ಟಿಲ್ಲ.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಗುರಿಯನ್ನು ಹೊಂದಿರುವ ಈ ಯೋಜನೆಯು ಭೂಸ್ವಾಧೀನದಲ್ಲಿ ದೀರ್ಘ ವಿಳಂಬ, ಸಮತೋಲನ ಜಲಾಶಯದ ನಿರ್ಮಾಣದಲ್ಲಿ ಅತಿಯಾದ ವಿಳಂಬ, ಹಂತ-I ಮತ್ತು ಹಂತ-II ಘಟಕಗಳ ಸಿಂಕ್ರೊನೈಸೇಶನ್ ಇಲ್ಲದಿರುವುದು ಮತ್ತು ಆರ್ಥಿಕ ಸಮಸ್ಯೆ ಸೇರಿದಂತೆ ತೀವ್ರ ನ್ಯೂನತೆಗಳಿಂದಾಗಿ ಯೋಜನೆ 12 ವರ್ಷಗಳಿಗೂ ಹೆಚ್ಚು ಕಾಲ ನೆನೆಗುದಿಗೆ ಬಿದ್ದಿದೆ ಎಂದು ವರದಿ ಹೇಳಿದೆ.
14,805.80 ಕೋಟಿ ರು.ಮೊತ್ತದ ಶೇ.67ರಷ್ಟು ಕಾಮಗಾರಿ ಗಳನ್ನು ಕೇವಲ 7 ಮಂದಿ ಗುತ್ತಿಗೆ ದಾರರಿಗೆ ನೀಡಲಾಗಿದೆ. ಅಷ್ಟೇ ಅಲ್ಲದೆ, ಒಬ್ಬ ಗುತ್ತಿಗೆದಾರನಿಗೆ 5,216.58 ಕೋಟಿ ರು. ಮೊತ್ತದ 11 ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. ವಿಜೆಎನ್ಎಲ್ ಈ ಗುತ್ತಿಗೆದಾರರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲು ವಿಫಲವಾಗಿದೆ. ಈ ಮೂಲಕ ಗುತ್ತಿಗೆದಾರರಿಗೆ ಪರೋಕ್ಷವಾಗಿ ಲಾಭಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಈ ಯೋಜನೆಯ ವಿಸೃತ ಯೋಜನಾ ವರದಿ(ಡಿಪಿಆರ್) 2 ಬಾರಿ ಪರಿಷ್ಕರಿಸಲಾಗಿದೆ. 2012ರಲ್ಲಿ 8,323.50ಕೋಟಿ ರು. ಇದ್ದ ಯೋಜನಾ ವೆಚ್ಚವು 2014ರ ಫೆಬ್ರವರಿ ಯಲ್ಲಿ 12,912.36 ಕೋಟಿ ರು.ಗೆ ಪರಿಷ್ಕರಿಸಲಾಗಿದೆ. ನಂತರ 2023ರ ಜನವರಿಯಲ್ಲಿ 23, 251 ಕೋಟಿ ರು.ಗೆ ಏರಿಕೆಯಾಗಿದೆ.
ಆರಂಭದಲ್ಲಿ 2 ಹಂತದಲ್ಲಿ ಕಾರ್ಯತಗೊಳಿಸಲು ಉದ್ದೇಶಿಸಿ ಬಳಿಕ ವಿವಿಧ ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ಕಾಮಗಾರಿಗಳ ಸಂಬಂಧ ಮಾಡಲಾದ ಡಿಪಿಆರ್‌ಗಳಲ್ಲಿ ಯೋಜನೆ ಪೂರ್ಣಗೊಳಿಸುವ ದಿನಾಂಕ ನಿಗದಿಪಡಿಸಿಲ್ಲ. 2023ರ ಅಕ್ಟೋಬರ್ ನಲ್ಲಿವಿಜೆಎನ್‌ಎಲ್ ನಿರ್ದೇಶಕರ ಮಂಡಳಿಯು 2026ರ ನವೆಂಬರ್‌ಗೆ ಯೋಜನೆ ಪೂರ್ಣಗೊಳಿಸಲು ನಿರ್ಧರಿಸಿರುವುದು ಬೆಳಕಿಗೆ ಬಂದಿದೆ.
ಈ ವಿಳಂಬವು ಕೋಲಾರ ಮತ್ತು ಚಿಕ್ಕಬಳ್ಳಾಪುರಕ್ಕೆ ಕುಡಿಯುವ ನೀರಿನ ಪೂರೈಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.
ಯೋಜನೆಯ ಭಾಗವಾಗಿ ಸಮತೋಲನ ಜಲಾಶಯ ಸ್ಥಳವನ್ನು 2 ಬಾರಿ ಬದಲಿಸಲಾಗಿದೆ. ಆರಂಭದಲ್ಲಿ ಪ್ರಸ್ತಾಪಿಸಲಾಗಿದ್ದ 10 ಟಿಎಂಸಿ ಸಾಮರ್ಥ್ಯವನ್ನು 2 ಟಿಎಂಸಿಗೆ ಇಳಿಸಿರುವುದು ಲೆಕ್ಕಪರಿಶೋಧನೆ ವೇಳೆ ಗೊತ್ತಾಗಿದೆ. ಮಳೆಗಾಲದ ತಿಂಗಳಲ್ಲಿ ಹೆಚ್ಚಿನ ನೀರು ಪಂಪ್ ಮಾಡುವ ಸಂಬಂಧ ವಿನ್ಯಾಸ ಬದಲಾವಣೆ ಮಾಡಿದ ಪರಿಣಾಮ 621.45 ಹೆಚ್ಚುವರಿ ವೆಚ್ಚದ ಬಗ್ಗೆ ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ಯೋಜನೆಯ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯವಿರುವ ಸಾಲ ಪಡೆಯಲು ವಿಜೆಎನ್‌ಎಲ್ 2023ರ ಜೂನ್‌ನಲ್ಲಿ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿದೆ. ಆದರೆ, ಸರ್ಕಾರ ಆ ಕೋರಿಕೆಯನ್ನು ಇನ್ನೂ ಅನುಮೋದಿಸದ ಪರಿಣಾಮ ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ 7,954.63 ಕೋಟಿ ರು. ಬಗ್ಗೆ ವಿಜೆಎನ್‌ಎಲ್ ಆರ್ಥಿಕ ಅನಿಶ್ಚಿತತೆ ಎದುರಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.