ಬೆಂಗಳೂರು: ಆಂಧ್ರದ ಯುವತಿಯೊಬ್ಬರು ನೀಡಿರುವ ಹೇಳಿಕೆಯಿಂದ ಕನ್ನಡಿಗರು ಕೆರಳಿದ್ದಾರೆ. ಆಂಧ್ರದ ಯುವತಿಯೊಬ್ಬರದ್ದು ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಏನಿದು ವಿವಾದ? ಬೆಂಗಳೂರಿನ ಮಾರತಹಳ್ಳಿಯನ್ನು 'ಮಿನಿ ಆಂಧ್ರ' ಎಂದಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಹೌದು. ಮಾರತಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಾ ವಿಡಿಯೋ ಮಾಡಿರುವ ಯುವತಿ, ಸ್ನೇಹಿತರೇ ಮಾರತಹಳ್ಳಿಯನ್ನು ಯಾಕೆ ಮಿನಿ ಆಂಧ್ರ ಎಂದು ಕರೆಯುತ್ತಾರೆ ಗೊತ್ತೆ? ಇಲ್ಲಿ ಶೇ.99. 99ರಷ್ಟು ಆಂಧ್ರದವರೇ ಇದ್ದೇವೆ. ಅದರಲ್ಲೂ ರಾಯಲ ಸೀಮಾದವರೇ ಹೆಚ್ಚು. ಅನಂತಪುರ ಜಿಲ್ಲೆಯವರೇ ಹೆಚ್ಚು ಎಂದು ಹೇಳುವುದು ವಿಡಿಯೋದಲ್ಲಿದೆ.
ಯುವತಿಯ ಹೇಳಿಕೆಯಿಂದ ಬೆಂಗಳೂರಿನ ಕನ್ನಡಿಗರು, ಕನ್ನಡ ಪರ ಸಂಘಟನೆಗಳು ಕೆರಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ. ರಾಜ್ಯ ಸರ್ಕಾರ ವಲಸೆ ನೀತಿ ಜಾರಿಗೆ ತರುವುದು ಉತ್ತಮ ಎಂದು ಆಗ್ರಹಿಸಿದ್ದಾರೆ.