ಬೆಂಗಳೂರು: ಕರ್ನಾಟಕದ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಗ್ಗೆ ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಟಿವಿ ಮೋಹನದಾಸ್ ಪೈ ಅವರು ಮಾಡಿದ್ದ ಪೋಸ್ಟ್ ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ನೀಡಿದ ಪ್ರತಿಕ್ರಿಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಖಾಸಗಿ ಬಸ್‌ಗಳಿಗೆ ಅನುಮತಿ ನೀಡಬೇಕೆಂಬ ಮೋಹನ್ ದಾಸ್ ಪೈ ಅವರ ಸಲಹೆಯನ್ನು ತಳ್ಳಿ ಹಾಕಿದ ಅವರು, ಸಾರ್ವಜನಿಕ ಸಾರಿಗೆ ವಾಣಿಜ್ಯ ಸೇವೆಯಲ್ಲ, ಅದು ಸಮಾಜದ ಮೇಲಿನ ಜವಾಬ್ದಾರಿಯಾಗಿದೆ ಎಂದು ಸಚಿವರು ತಿರುಗೇಟು ನೀಡಿದ್ದಾರೆ.
ಮೋಹನ್ ದಾಸ್ ಪೈ ಮಾಡಿರುವ ಟೀಕೆಯೇನು?
ಕಳೆದ ಮೂರು ವರ್ಷಗಳಿಂದ ಬಸ್‌ಗಳ ಕೊರತೆಯಿದೆ ಎಂದು ಆರೋಪಿಸಿ, ಸಮರ್ಪಕ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಖಚಿತಪಡಿಸಲು ಸರ್ಕಾರ ವಿಫಲವಾಗಿದೆ ಎಂದು ಮೋಹನ್ ದಾಸ್ ಪೈ ಎಕ್ಸ್ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದರು. ಯಾರು ನಡೆಸಿದರೂ ಪರವಾಗಿಲ್ಲ, ನಾಗರಿಕರಿಗೆ ವಿಶ್ವಾಸಾರ್ಹ ಸಾರ್ವಜನಿಕ ಸಾರಿಗೆ ಅಗತ್ಯವಿದೆ ಎಂದು ಹೇಳಿ, ಸೇವೆಗಳನ್ನು ಒದಗಿಸಲು ರಾಜ್ಯವು ಖಾಸಗಿ ಸಂಚಾಲಕರಿಗೆ ಅನುಮತಿ ನೀಡಬೇಕು ಎಂದು ಬರೆದುಕೊಂಡಿದ್ದಾರೆ.
ಸಚಿವ ರಾಮಲಿಂಗಾ ರೆಡ್ಡಿ ಏನೆಂದರು?
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮುಖಾಮುಖಿ ಚರ್ಚೆಗೆ ಬನ್ನಿ ಎಂದು ಮೋಹನ್ ದಾಸ್ ಪೈ ಅವರಿಗೆ ಆಹ್ವಾನಿಸಿ, ಯಾವುದೇ ವೇದಿಕೆಯಲ್ಲಿ ನಿಮ್ಮೊಂದಿಗೆ ನೇರ ಚರ್ಚೆ ನಡೆಸಲು ನಮ್ಮ ಬಿಎಂಟಿಸಿ ಎಂಡಿಯೇ ಸಾಕು. ದಯವಿಟ್ಟು ಬಂದು ಅವರೊಂದಿಗೆ ನೇರವಾಗಿ ವಾಸ್ತವಾಂಶಗಳನ್ನು ಚರ್ಚಿಸಿ. ನೀವು ಮುಂದಾಗಲು ಸಿದ್ಧರಿದ್ದೀರಾ, ಅಥವಾ ಕೇವಲ ಟ್ವೀಟ್ ಮಾಡುತ್ತಲೇ ಇರುತ್ತೀರಾ?” ಎಂದು ಕೇಳಿದರು.
ಮೋಹನ್ ದಾಸ್ ಪೈ ಅವರ ಅಭಿಪ್ರಾಯ ಕೇವಲ ಪಕ್ಷಪಾತಿಯಲ್ಲ — ಅದು ಮೂಲತಃ ಅತಿರೇಕದ ಸಿದ್ಧಾಂತಪರವಾಗಿದೆ ಎಂದು ಕೂಡ ರಾಮಲಿಂಗಾ ರೆಡ್ಡಿ ಟೀಕಿಸಿದರು. ಮೋಹನ್ ದಾಸ್ ಪೈ ಅವರು ಸಾರ್ವಜನಿಕ ಸಾರಿಗೆಯನ್ನು ಲೆಕ್ಕಪತ್ರದ ದೃಷ್ಟಿಕೋನದಿಂದ ನೋಡುತ್ತಾರೆ, ಆದರೆ ಸರ್ಕಾರವು ಅದನ್ನು 1.5 ಕೋಟಿ ನಾಗರಿಕರಿಗೆ ನೀಡುವ ಸೇವೆಯಾಗಿ ನೋಡುತ್ತದೆ ಎಂದು ಹೇಳಿದರು.
ತಮ್ಮ ಸರ್ಕಾರದ ಶಕ್ತಿ ಯೋಜನೆಯನ್ನು ಎತ್ತಿ ತೋರಿಸಿದ ರಾಮಲಿಂಗಾ ರೆಡ್ಡಿ, ರಾಜ್ಯವು ಮಹಿಳೆಯರಿಗೆ 650 ಕೋಟಿಗೂ ಹೆಚ್ಚು ಉಚಿತ ಬಸ್ ಪ್ರಯಾಣಗಳನ್ನು ನೀಡಿದೆ. ಇದು ದೇಶದ ಅತಿದೊಡ್ಡ ಚಲನಶೀಲತೆ ಆಧಾರಿತ ಆರ್ಥಿಕ ಸಬಲೀಕರಣ ಉಪಕ್ರಮ ಎಂದು ಬಣ್ಣಿಸಿದರು. ಈ ಯೋಜನೆಯು ಕರ್ನಾಟಕದಾದ್ಯಂತ ಮಹಿಳೆಯರಿಗೆ ಉದ್ಯೋಗ, ಶಿಕ್ಷಣ ಮತ್ತು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶವನ್ನು ವಿಸ್ತರಿಸಿದೆ ಎಂದು ಸಮರ್ಥಿಸಿಕೊಂಡರು.
ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಕಾರ್ಯಾಚರಣಾ ಮಾದರಿಯನ್ನು ವಿವರಿಸಿದ ರಾಮಲಿಂಗಾ ರೆಡ್ಡಿ, ದೂರದ ಹಳ್ಳಿಗಳ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು ಸುಮಾರು ಶೇಕಡಾ 30ರಷ್ಟು ಭಾಗಗಳ ಮಾರ್ಗಗಳು ನಷ್ಟದಲ್ಲಿ ಕಾರ್ಯನಿರ್ವಹಿಸುತ್ತವೆ, ಮತ್ತೊಂದು ಶೇಕಡಾ 30ರಷ್ಟು ಲಾಭ-ನಷ್ಟರಹಿತ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಉಳಿದ ಶೇಕಡಾ 40ರಷ್ಟು ಭಾಗ - ಹೆಚ್ಚಾಗಿ ದೂರದ ಮಾರ್ಗಗಳು - ವ್ಯವಸ್ಥೆಯನ್ನು ಉಳಿಸಿಕೊಳ್ಳುವ ಲಾಭವನ್ನು ಗಳಿಸುತ್ತವೆ ಎಂದು ಹೇಳಿದರು. ರಾಜ್ಯದ ಶೇಕಡಾ 98ರಷ್ಟು ಹಳ್ಳಿಗಳು ಬಸ್ ಸಂಪರ್ಕವನ್ನು ಹೊಂದಿವೆ ಎಂದು ವಿವರಿಸಿದರು.
ಅಂಕಿಅಂಶಗಳನ್ನು ಒದಗಿಸಿರುವ ಸಚಿವರು, ಕರ್ನಾಟಕವು 26,054 ಬಸ್‌ಗಳನ್ನು ನಿರ್ವಹಿಸುತ್ತಿದ್ದರೆ, ಬಿಎಂಟಿಸಿ ಬೆಂಗಳೂರಿನಲ್ಲಿ ಪ್ರತಿದಿನ ಸುಮಾರು 45 ಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸುತ್ತಿದೆ. 1,686 ಎಲೆಕ್ಟ್ರಿಕ್ ಬಸ್‌ಗಳು ಸೇರಿದಂತೆ 7,108 ಬಸ್‌ಗಳ ನಗರದಲ್ಲಿ 13 ಲಕ್ಷ ಕಿ.ಮೀ.ಗಳಿಗೂ ಹೆಚ್ಚು ಕ್ರಮಿಸುತ್ತದೆ ಮತ್ತು ಪ್ರತಿದಿನ ಸುಮಾರು 66,000 ಟ್ರಿಪ್‌ಗಳನ್ನು ನಿರ್ವಹಿಸುತ್ತದೆ, ಇದು ದೇಶದ ಅತಿದೊಡ್ಡ ನಗರ ಬಸ್ ಕಾರ್ಯಾಚರಣೆಗಳಲ್ಲಿ ಒಂದಾಗಿದೆ.
ಹಿಂದಿನ ಸರ್ಕಾರ ಇದ್ದಾಗ ಏಕೆ ಮೌನವಾಗಿದ್ದಿರಿ?
ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೋಹನ್ ದಾಸ್ ಪೈ ಅವರ ಮೌನವನ್ನು ರಾಮಲಿಂಗಾ ರೆಡ್ಡಿ ಪ್ರಶ್ನಿಸಿದರು. 2019 ಮತ್ತು 2023 ರ ನಡುವೆ ಬಸ್‌ಗಳ ಸೇರ್ಪಡೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದಕ್ಕೆ ವ್ಯತಿರಿಕ್ತವಾಗಿ, ಕಳೆದ ಎರಡು ವರ್ಷಗಳಲ್ಲಿ 5,800 ಕ್ಕೂ ಹೆಚ್ಚು ಹೊಸ ಬಸ್‌ಗಳನ್ನು ಸೇರಿಸಲಾಗಿದ್ದು, ಮಾರ್ಚ್ 2026 ರ ವೇಳೆಗೆ ಇನ್ನೂ 2,000 ಬಸ್‌ಗಳನ್ನು ಸೇರಿಸುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು.
ಲಾಭ ಕುಸಿದ ಕ್ಷಣದಲ್ಲಿ ಖಾಸಗಿ ನಿರ್ವಾಹಕರು ಸ್ಥಗಿತಗೊಳಿಸುತ್ತಾರೆ. ಖಾಸಗಿ ಏಕಸ್ವಾಮ್ಯವು ಬಡವರ ಮೇಲೆ ತೀವ್ರವಾದ ಹೊರೆಯಾಗುತ್ತದೆ. ಸಾರ್ವಜನಿಕ ಸಾರಿಗೆ ಒಂದು ಹಕ್ಕು, ಐಷಾರಾಮಿ ಅಲ್ಲ. ನಮ್ಮ ಸಾರ್ವಜನಿಕ ವಲಯದ ಉದ್ಯಮಗಳು (PSUs) ಇಲ್ಲಿ ಉಳಿಯಲು, ಸೇವೆ ಸಲ್ಲಿಸಲು ಮತ್ತು ಕರ್ನಾಟಕವನ್ನು ಮುನ್ನಡೆಸಲು ಇವೆ ಎಂದು ಸಾರ್ವಜನಿಕ ಸಾರಿಗೆಯನ್ನು ಸಚಿವ ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡರು.