ಸಿ.ಜೆ.ರಾಯ್ 
ರಾಜ್ಯ

ಕೇರಳದಿಂದ ದುಬೈವರೆಗೆ ಸಾಮ್ರಾಜ್ಯ: ಯುವಕರಿಗೆ ಸ್ಫೂರ್ತಿಯಾಗಿದ್ದ ಕಾನ್ಫಿಡೆಂಟ್ ಗ್ರೂಪ್ಸ್ ಒಡೆಯ ಸಿ.ಜೆ ರಾಯ್

ಸಿ.ಜೆ.ರಾಯ್ ಆತ್ಮಹತ್ಯೆ ಘಟನೆ 2019ರಲ್ಲಿ ನಡೆದ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆಯ ಕಹಿ ನೆನಪು ಮರುಕಳಿಸುವಂತೆ ಮಾಡಿದೆ.

ಬೆಂಗಳೂರು: ತಮ್ಮ ಕಂಪನಿ ಮೇಲೆ ದಾಳಿಗಿಳಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲೇ ಪಿಸ್ತೂಲ್‌ನಿಂದ ಎದೆಗೆ ಗುಂಡುಹಾರಿಸಿಕೊಂಡು ಖ್ಯಾತ ಉದ್ಯಮಿ ಹಾಗೂ ಕಾನ್ಸಿಡೆಂಟ್ ಕಂಪನಿ ಮುಖ್ಯಸ್ಥ ಡಾ.ಚಿರಿಯಂಡತ್ ಜೋಸೆಫ್ ರಾಮ್ (ಸಿ.ಜೆ.ರಾಯ್) ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಶುಕ್ರವಾರ ನಡೆದಿದೆ.

ಸಿ.ಜೆ.ರಾಯ್ ಆತ್ಮಹತ್ಯೆ ಘಟನೆ 2019ರಲ್ಲಿ ನಡೆದ ಕಾಫಿ ಡೇ ಮಾಲೀಕ ಸಿದ್ದಾರ್ಥ ಅವರ ಆತ್ಮಹತ್ಯೆಯ ಕಹಿ ನೆನಪು ಮರುಕಳಿಸುವಂತೆ ಮಾಡಿದೆ.

ಜೆ.ಸಿ.ರಾಯ್, ಕೇರಳ ಮೂಲದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಶರವೇಗದಲ್ಲಿ ಪ್ರಗತಿ ಕಂಡ ಯಶಸ್ವಿ ಉದ್ಯಮಿ ಆಗಿದ್ದರು. ಜನರ ಕನಸು ಅಡಮಾನವಿಟ್ಟು ಸಾಲ ಮಾಡದೆ ದೇಶ-ವಿದೇಶದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಬಹುದೊಡ್ಡ ಸಾಮ್ರಾಜ್ಯ ಕಟ್ಟಿ ಯಶಸ್ವಿ ಉದ್ಯಮಿ ಎನ್ನಿಸಿಕೊಂಡಿದ್ದ ಸಿ.ಜೆ.ರಾಯ್ ಅವರ ಬದುಕು ದುರಂತ ಅಂತ್ಯ ಕಂಡಿದ್ದು ವಿಧಿಯಾಟವೇ ಸರಿ.

ಡಾ. ಸಿ.ಜೆ. ರಾಯ್ ಅವರ ಪೂರ್ಣ ಹೆಸರು ರಾಯ್ ಚಿರಿಯನ್ ಕಂದತ್ ಜೋಸೆಫ್ (Roy Cherian Kandath Joseph). ಮೂಲತಃ ಕೇರಳದವರಾದ ಅವರು ಬೆಳೆದದ್ದು ಮತ್ತು ಉನ್ನತ ಶಿಕ್ಷಣ ಪಡೆದದ್ದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ. ಉದ್ಯಮಿಯಾಗುವ ಮುನ್ನ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡಿದ್ದರು.

ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಬಳಿಕ, ಸ್ವಿಟ್ಜರ್ಲೆಂಡ್‌ನ ಪ್ರತಿಷ್ಠಿತ ಎಸ್.ಬಿ.ಎಸ್ (SBS) ಬಿಸಿನೆಸ್ ಸ್ಕೂಲ್‌ನಿಂದ 'ಡಾಕ್ಟರೇಟ್ ಇನ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್' (DBA) ಪದವಿ ಪಡೆದಿದ್ದರು. ಉದ್ಯಮಿಯಾಗುವ ಮೊದಲು ಅವರು ಹೆವ್ಲೆಟ್ ಪ್ಯಾಕರ್ಡ್ (HP) ನಂತಹ ಬಹುರಾಷ್ಟ್ರೀಯ ಕಂಪನಿಯಲ್ಲಿ (MNC) ಉದ್ಯೋಗಿಯಾಗಿದ್ದರು.

ಎಂಎನ್ಸಿ ಕಂಪನಿಯ ಉದ್ಯೋಗ ತೊರೆದು 2006 ರಲ್ಲಿ 'ಕಾನ್ಫಿಡೆಂಟ್ ಗ್ರೂಪ್' ಪ್ರಾರಂಭಿಸಿದರು. ಆರಂಭದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಾಲಿಟ್ಟ ಅವರು, ನಂತರ ಶಿಕ್ಷಣ ಮತ್ತು ಮನರಂಜನಾ ಕ್ಷೇತ್ರಗಳಿಗೂ ತಮ್ಮ ಸೇವೆಯನ್ನು ವಿಸ್ತರಿಸಿ ಯಶಸ್ವಿಯಾದರು.

ಸಿ.ಜೆ. ರಾಯ್ ಅವರಿಗೆ ಸಿನಿಮಾ ಮೇಲೆ ಅಪಾರ ಆಸಕ್ತಿ ಇತ್ತು. ಹೀಗಾಗಿಯೇ ಚಲನಚಿತ್ರಗಳ ನಿರ್ಮಾಣ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದರು. ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ 'ಕ್ಯಾಸನೋವಾ' (Casanovva) ಸೇರಿದಂತೆ ಹಲವು ಬೃಹತ್ ಬಜೆಟ್ ಚಿತ್ರಗಳಿಗೆ ಅವರು ನಿರ್ಮಾಪಕರಾಗಿದ್ದರು.

ಡಾ. ಸಿ.ಜೆ. ರಾಯ್ ಅವರು ಐಷಾರಾಮಿ ಕಾರುಗಳ ಅಪ್ಪಟ ಪ್ರೇಮಿಯಾಗಿದ್ದರು. ಇವರ ಬಳಿ ಬರೋಬ್ಬರಿ ಹತ್ತಕ್ಕೂ ಹೆಚ್ಚು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ (Rolls Royce) ಕಾರುಗಳಿದ್ದವು. ಅವರ ಐಷಾರಾಮಿ ಜೀವನಶೈಲಿ ಉದ್ಯಮ ವಲಯದಲ್ಲಿ ಸದಾ ಚರ್ಚೆಯಲ್ಲಿರುತ್ತಿತ್ತು. ಆತ್ಮವಿಶ್ವಾಸ, ಆಕರ್ಷಣೆ ಮತ್ತು ಅದ್ದೂರಿ ಬದುಕು ಅವರ ಗುರುತಾಗಿತ್ತು.

ಕೋಟಿ ಕೋಟಿ ರೂಪಾಯಿಗಳ ಉದ್ಯಮಿ ಆಗುವ ಮೊದಲು ಸಿಜೆ ರಾಯ್ ಸಾಮಾನ್ಯ ಹಿನ್ನೆಲೆಯುಳ್ಳ ವ್ಯಕ್ತಿಯಾಗಿದ್ದರು. ಶಾಲಾ ದಿನಗಳಲ್ಲಿ “ಫ್ರಂಟ್ ಬೆಂಚರ್” ಎಂದೇ ಗುರುತಿಸಿಕೊಂಡಿದ್ದ ಅವರು, ದೈಹಿಕವಾಗಿ ಅಷ್ಟೇನು ಎತ್ತರವಾಗಿರದಿದ್ದರೂ, ಮಾನಸಿಕವಾಗಿ ಗಟ್ಟಿತನ ಹೊಂದಿದ್ದರೆಂದು ಬಾಲ್ಯದ ಸ್ನೇಹಿತರು ನೆನಪಿಸಿಕೊಳ್ಳುತ್ತಾರೆ.

ಸಿಜೆ.ರಾಯ್ ಗಟ್ಟಿ ಮನಸ್ಸಿನ ವ್ಯಕ್ತಿಯಾಗಿದ್ದರು. ಯಾವುದೇ ಪರಿಸ್ಥಿತಿಯನ್ನೂ ಎದುರಿಸುವ ಧೈರ್ಯ ಅವರಲ್ಲಿತ್ತು,” ಎಂದು ಅವರ ಸ್ನೇಹಿತರು ಹೇಳಿದ್ದಾರೆ.

1996ರಲ್ಲಿ ಫರ್ನ್ ವ್ಯಾಲಿಯಲ್ಲಿ ಉದ್ಯಮಿ–ಬಿಲ್ಡರ್ ಪಾಲ್ ಫರ್ನಾಂಡಿಸ್ ಅವರ ಬಳಿ ಕೆಲಸ ಮಾಡುವ ಮೂಲಕ ಉದ್ಯಮದ ಪಾಠ ಕಲಿತ ಅವರು, 2000ರಲ್ಲಿ ಕೆಕೆ ನಂಬೂದಿರಿಯೊಂದಿಗೆ ಕೈಜೋಡಿಸಿದರು. 2005ರ ವೇಳೆಗೆ ಕಾಂಫಿಡೆಂಟ್ ಗ್ರೂಪ್ ಆರಂಭಿಸಿ, ಅಲ್ಪ ಸಮಯದಲ್ಲೇ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದರು. ದೇಶ–ವಿದೇಶಗಳಲ್ಲಿ ನೂರಾರು ಎಕರೆ ಭೂಮಿ ಪಡೆದು, ಗಡಿಗಳನ್ನು ದಾಟಿ ಉದ್ಯಮ ಸಾಮ್ರಾಜ್ಯವನ್ನು ನಿರ್ಮಿಸಿದರು.

ತಾವು ಸಂಪಾದಿಸಿದ ಸಂಪತ್ತನ್ನು ರಾಯ್ ಅವರು ಎಂದಿಗೂ ಮುಚ್ಚಿಟ್ಟಿರಲಿಲ್ಲ. ತಮ್ಮ ಸಂಪತ್ತನ್ನು ಮುಕ್ತವಾಗಿಯೇ ಜಗತ್ತಿಗೆ ತೋರಿಸಿದ್ದರು. ಅವರು ಖರೀದಿಸಿದ ದುಬಾರಿ ಕಾರುಗಳು ಸಾಕಷ್ಟು ಸದ್ದು ಮಾಡುತ್ತಿದ್ದವು. ಇತ್ತೀಚೆಗೆ ತಮ್ಮ 12ನೇ ರೋಲ್ಸ್–ರಾಯ್ಸ್ ಕಾರು ಖರೀದಿಸಿದ್ದನ್ನು ಅವರು ಸಂಭ್ರಮದಿಂದ ಹಂಚಿಕೊಂಡಿದ್ದರು. ಸಿನಿಮಾ ಬಿಡುಗಡೆ ಸಮಾರಂಭಗಳಲ್ಲಿ ಪ್ರಮುಖ ನಟರ ಜೊತೆಗೆ ಕಾಣಿಸಿಕೊಳ್ಳುವುದು ಅವರ ದಿನಚರಿಯ ಭಾಗವಾಗಿತ್ತು.

ಹಣವನ್ನು ಸಂಪಾದಿಸುವುದಷ್ಟೇ ಅಲ್ಲ, ಅದನ್ನು ಆನಂದಿಸುವ ಹಕ್ಕು ನನ್ನದು ಎಂಬ ಸಂದೇಶವನ್ನು ರಾಯ್ ಸ್ಪಷ್ಟವಾಗಿ ನೀಡುತ್ತಿದ್ದರು. ಅಭಿಮಾನಿಗಳು ಮುಖ್ಯವಾಗಿ ಯುವಕರಿಗೆ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದರು. ಸಾಮಾನ್ಯ ಹಿನ್ನೆಲೆಯಿಂದ ಬಂದವನೂ ದೊಡ್ಡ ಮಟ್ಟದಲ್ಲಿ ಗೆಲ್ಲಬಹುದು ಎಂಬ ಭರವಸೆಯ ಸಂಕೇತವನ್ನು ನೀಡಿದ್ದರು. ಆದರೆ ವಿಮರ್ಶಕರಿಗೆ ಇದು ಅತಿರೇಕದ ಪ್ರದರ್ಶನವಾಗಿ ಕಂಡಿತ್ತು.. ಆದರೂ, ಆ ಪ್ರದರ್ಶನವೇ ತಮ್ಮ ಮಾನಸಿಕ ಗಟ್ಟಿತನದ ಕವಚವೆಂದು ರಾಯ್ ಭಾವಿಸಿದ್ದರು.

ಅಷ್ಟು ಗಟ್ಟಿತನ ಹೊಂದಿದ್ದ ರಾಯ್ ಅವರು, ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ವಿಪರ್ಯಾಸದ ಸಂಗತಿಯಾಗಿದೆ. ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದ ಸಮಯದಲ್ಲೇ ರಾಯ್ ಅವರು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆ ಉದ್ಯಮ ವಲಯದಲ್ಲಿ ತೀವ್ರ ಆಘಾತ ಮೂಡಿಸಿದ್ದು, 2019ರಲ್ಲಿ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಅವರ ಸಾವು ಘಟನೆಯನ್ನು ಸ್ಮರಿಸುವಂತೆ ಮಾಡಿದೆ.

ಸಿಜೆ ರಾಯ್ ಅವರ ಕುಟುಂಬಸ್ಥರು, ನಿರಂತರ ವಿಚಾರಣೆ ಮತ್ತು ಒತ್ತಡವೇ ಈ ದುರ್ಘಟನೆಗೆ ಕಾರಣವೆಂದು ಆರೋಪಿಸಿದ್ದಾರೆ.

ತನಿಖೆ ಮುಂದುವರಿದಿರುವ ನಡುವೆ, ರಾಜಕೀಯ ಮತ್ತು ಉದ್ಯಮ ವಲಯದಲ್ಲಿ ಒಂದು ಗಂಭೀರ ಪ್ರಶ್ನೆ ಮತ್ತೆ ಉದ್ಭವಿಸಿದೆ – ಜವಾಬ್ದಾರಿಯ ಹೆಸರಿನಲ್ಲಿ ನಡೆಯುವ ಒತ್ತಡ ಯಾವ ಹಂತದಲ್ಲಿ ಅಸಹನೀಯವಾಗುತ್ತದೆ? ಎಂಬುದು.

ಐಷಾರಾಮಿ ಕಾರುಗಳ ವೀಡಿಯೊಗಳು, ಬಹು ದೊಡ್ಡ ಜಾಹೀರಾತುಗಳು ಮತ್ತು “ಕಿಂಗ್ ಸೈಸ್” ಘೋಷಣೆಗಳ ಹಿಂದೆ ಒಬ್ಬ ವ್ಯಕ್ತಿ, ಅಪಾರ ಹೊಣೆಗಾರಿಕೆ ಮತ್ತು ಒತ್ತಡವನ್ನು ಹೊತ್ತುಕೊಂಡೇ ಸಾಗುತ್ತಿದ್ದಾನೆ ಎಂಬ ಸತ್ಯವನ್ನು ಸಿಜೆ ರಾಯ್ ಅವರ ಕಥೆ ನೆನಪಿಸುತ್ತಿದೆ.

ಒಮ್ಮೆ ಶಾಲೆಯ ಮುಂಭಾಗದಲ್ಲಿ ಕುಳಿತು ಜಗತ್ತನ್ನು ಗೆಲ್ಲುವ ಕನಸು ಕಂಡ ಆ ಬಾಲಕ, ಇಂದು ಆ ಕನಸುಗಳ ಭಾರವನ್ನೇ ಹೊತ್ತುಕೊಂಡು ಜಗತ್ತಿಗೆ ವಿದಾಯ ಹೇಳಿದ್ದಾನೆ.

ಅವರ ಅಗಲಿಕೆ, ಯಶಸ್ಸಿನ ಬೆಲೆಯಲ್ಲಿ ಮರೆತುಹೋಗುವ ಮಾನಸಿಕ ಆರೋಗ್ಯದ ಕುರಿತು ಸಮಾಜವು ಮತ್ತೆ ಚಿಂತಿಸಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಈ ಘಟನೆ ನೀಡುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾ ನೂತನ DCM ಸುನೇತ್ರಾ ಪವಾರ್‌ಗೆ ಕಂದಾಯ ಸೇರಿ ಮೂರು ಖಾತೆ ಹಂಚಿಕೆ; ಕೈತಪ್ಪಿದ ಹಣಕಾಸು

ನಂ. 1 ಆಟಗಾರ್ತಿ ಅರಿನಾ ಮಣಿಸಿದ ಎಲೆನಾ ರೈಬಾಕಿನಾ ಮುಡಿಗೆ Australian Open ಕಿರೀಟ

'ಮನ ಮೆಚ್ಚಿದ ಅಪ್ಪ': ಮಗನ ಜೀವ ಉಳಿಸಲು ಜೀವನ್ಮರಣ ಹೋರಾಟ, ಚಿರತೆಯನ್ನು ಬಡಿದು ಕೊಂದ ತಂದೆ

"ನಾವು ಭಿಕ್ಷೆ ಬೇಡುತ್ತೇವೆ, ನಾಚಿಕೆಯಿಂದ ತಲೆ ಬಾಗುತ್ತೇವೆ": ಪಾಕ್ ಪ್ರಧಾನಿ

'ಅಮ್ಮನ ಜೊತೆ ಮಾತಾಡಬೇಕು ಎಂದಿದ್ದರು': ಉದ್ಯಮಿ ಸಿಜೆ ರಾಯ್ ಅಂತಿಮ ಕ್ಷಣದ ಕುರಿತು MD ಮಾತು!

SCROLL FOR NEXT