ಬೆಂಗಳೂರು: ಮಾರ್ಚ್ 5ರೊಳಗೆ ಬಾಕಿ ಬಿಲ್ ಪಾವತಿಸಬೇಕೆಂದು ಎಂದು ಗುತ್ತಿಗೆದಾರರ ಸಂಘವು ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದು, ಈ ನಡುವೆ ಗುತ್ತಿಗೆದಾರರ ಬಿಲ್ ಬಾಕಿ ಉಳಿಸಿ ಹೋಗಿದ್ದು ಬಿಜೆಪಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಗುತ್ತಿಗೆದಾರರ ಸಂಘ ನೀಡಿರುವ ಗಡುವಿನ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಗುತ್ತಿಗೆದಾರರಿಗೆ ಹಣ ಪಾವತಿಸದೇ ಉಳಿಸಿದ್ದರಿಂದ ಬಾಕಿ ಮೊತ್ತ ಹೆಚ್ಚಾಗಿದೆ. ಅವರು ಹಣ ಕೊಡದೇ ಹೋದ ಕಾರಣವೇ ಈ ಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಈ ನಡುವೆ ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ಬಿಜೆಪಿ ತೀವ್ರವಾಗಿ ವಾಗ್ದಾಳಿ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿ, ಕಳೆದ ಎರಡೂವರೆ ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ನಗರಾಭಿವೃದ್ಧಿ, ವಸತಿ, ಅಬಕಾರಿ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಿಡುಗಡೆಯಾಗದ 37,370 ಕೋಟಿ ರೂ. ಗುತ್ತಿಗೆದಾರರ ಬಿಲ್ ಹಾಗೂ ಗುತ್ತಿಗೆದಾರರ ಭ್ರಷ್ಟಾಚಾರದ ಗಂಭೀರ ಆರೋಪಗಳು ಈ ಕಾಂಗ್ರೆಸ್ ಸರ್ಕಾರದ ಅಸಲಿ ಮುಖವಾಡವನ್ನು ಮತ್ತೆ ಬಯಲು ಮಾಡಿದೆ.
ಸಿದ್ದರಾಮಯ್ಯ ನವರೇ, ನಿಮ್ಮ ಹೈಕಮಾಂಡ್ ಗೆ ಕಪ್ಪ ಸಲ್ಲಿಸುವ ಭರದಲ್ಲಿ ರಾಜ್ಯದ ಗುತ್ತಿಗೆದಾರರನ್ನು ಬೀದಿಗೆ ತಳ್ಳಿರುವುದಕ್ಕೆ ನಿಮ್ಮ ಸಮಜಾಯಿಷಿಯಾದರೂ ಏನು? ಅವರಿಗೆ ನೀಡಲು ಹಣವಿಲ್ಲದೆ ಬೊಕ್ಕಸ ಖಾಲಿಯಾಗಿದೆಯೇ? ಎಂದು ಪ್ರಶ್ನಿಸಿದ್ದಾರೆ.
2025ರ ಏಪ್ರಿಲ್ ನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಹೇಳಿ ಇಲ್ಲಿಯವರೆಗೂ ಮಾಡದೆ, ಈಗ ರಾಜ್ಯ ಸರ್ಕಾರಕ್ಕೆ ಗುತ್ತಿಗೆದಾರರ ಸಂಘ ಗಡುವು ನೀಡುವಷ್ಟರ ಮಟ್ಟಿಗೆ ಅವರನ್ನು ಆಕ್ರೋಶ, ಹತಾಶೆಗೆ ತಳ್ಳಿರುವುದೇ ನಿಮ್ಮ ಸಾಧನೆ. ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ, ಭ್ರಷ್ಟಾಚಾರಕ್ಕೆ ಕೊನೆಯೇ ಇಲ್ಲದಂತಾಗಿದೆ. ಕಮಿಷನ್ ಏಜೆಂಟ್‌ಗಳ ಕೈಗೆ ಅಧಿಕಾರ ನೀಡಿ ರಾಜ್ಯವನ್ನು ದಿವಾಳಿ ಮಾಡಬೇಡಿ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಿ, ಗುತ್ತಿಗೆದಾರರನ್ನು ಉಳಿಸಿ! ಇಡೀ ರಾಜ್ಯದಲ್ಲಿ ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರ ಆಕ್ರೋಶ ವ್ಯಕ್ತವಾಗುತ್ತಿದೆ. ನಿಮ್ಮ ಲೂಟಿಯ ದುರಾಡಳಿತಕ್ಕೆ ಜನರೇ ಅಂತ್ಯ ಹಾಡಲಿದ್ದಾರೆಂದು ಟೀಕಿಸಿದ್ದಾರೆ.