ಬೆಂಗಳೂರು: 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಷೇಧಿಸುವ ಕುರಿತು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ.
ಆಸ್ಟ್ರೇಲಿಯಾ ಹಾಗೂ ಗೋವಾದಲ್ಲಿ ಈಗಾಗಲೇ ಈ ನಿಯಮವನ್ನು ಜಾರಿಗೆ ತರಲಾಗಿದ್ದು, ಇದೇ ಮಾದರಿಯನ್ನು ಅನುಸರಿಸಿ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
ಶುಕ್ರವಾರ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಐಟಿ–ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಸಾಮಾಜಿಕ ಜಾಲತಾಣಗಳ ದುರುಪಯೋಗ ಗಂಭೀರ ಸಮಸ್ಯೆಯಾಗಿದೆ ಎಂದು ಹೇಳಿದೆ.
ಬಿಜೆಪಿ ಹಿರಿಯ ನಾಯಕ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣಗಳ ದುರ್ಬಳಕೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಚಿವರು ಈ ಮಾಹಿತಿ ನೀಡಿದರು.
ಫಿನ್‌ಲ್ಯಾಂಡ್‌ನಲ್ಲಿ ಈ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ಬ್ರಿಟನ್ ನಲ್ಲೂ ಇಂತಹ ನಿರ್ಧಾರ ಕುರಿತು ಚಿಂತನೆ ನಡೆಸುತ್ತಿದೆ. ಆಸ್ಟ್ರೇಲಿಯಾ ಎರಡು ತಿಂಗಳ ಹಿಂದೆ ಸಾಮಾಜಿಕ ಜಾಲತಾಣಗಳ ಮೇಲೆ ನಿಷೇಧ ಹೇರಿದೆ. ಕರ್ನಾಟಕದಲ್ಲಿಯೂ ನಾವು ಜವಾಬ್ದಾರಿಯುತ ಎಐ ಮತ್ತು ಸಾಮಾಜಿಕ ಜಾಲತಾಣ ಬಳಕೆಗೆ ಡಿಜಿಟಲ್ ಡಿಟಾಕ್ಸಿಫಿಕೇಶನ್ ಕಾರ್ಯಕ್ರಮ ಆರಂಭಿಸಿದ್ದೇವೆ ಎಂದು ಹೇಳಿದರು.
ಐಟಿ–ಬಿಟಿ ಇಲಾಖೆ ಮೆಟಾ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಇದೂವರೆಗೆ ಮೂರು ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಒಂದು ಲಕ್ಷ ಶಿಕ್ಷಕರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಮಾರ್ಚ್ 2025ರಲ್ಲಿ ಡಿಜಿಟಲ್ ಅಡಿಕ್ಷನ್ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೆರವಾಗಲು ‘ಬಿಯಾಂಡ್ ಸ್ಕ್ರೀನ್ಸ್’ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
GAFX 2025 ಶೃಂಗಸಭೆಯಲ್ಲಿ ‘ಬಿಯಾಂಡ್ ಸ್ಕ್ರೀನ್ಸ್’ ಡಿಜಿಟಲ್ ಡಿಟಾಕ್ಸ್ ಕೇಂದ್ರ ಹಾಗೂ ಇಲಾಖೆಯ ಅಧಿಕೃತ ವೆಬ್‌ಸೈಟ್‌ನ್ನು ಉದ್ಘಾಟಿಸಲಾಗಿದೆ. ಈ ಕೇಂದ್ರವು ಆರೋಗ್ಯಕರ ಡಿಜಿಟಲ್ ಅಭ್ಯಾಸಗಳಿಗಾಗಿ ಸಂಪನ್ಮೂಲಗಳು, ಸಮಾಲೋಚನೆ ಕಾರ್ಯಕ್ರಮಗಳಿಗೆ ಸಮರ್ಪಿತ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ವಿಧಾನಸಭೆಯಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರುಸ ಲೋಕಸಭೆಗೆ ಗುರುವಾರ ಸಲ್ಲಿಸಲಾದ ಆರ್ಥಿಕ ಸಮೀಕ್ಷೆ 2025–26ರಲ್ಲಿ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ವಯೋಮಿತಿಯ ಆಧಾರದ ಮೇಲೆ ನಿರ್ಬಂಧ ಹೇರಲು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.