ಮೇಕೆದಾಟು 
ರಾಜ್ಯ

ಮೇಕೆದಾಟು ಯೋಜನೆಗೆ ಬಿಗ್‌ ಬೂಸ್ಟ್‌: ಕಾವೇರಿ ವನ್ಯಜೀವಿ ಧಾಮದಲ್ಲಿ ಬೋರ್‌ವೆಲ್ ಸಮೀಕ್ಷೆಗೆ ಸಿಎಂ ಡಿಕೆ.ಶಿವಕುಮಾರ್ ಗ್ರೀನ್ ಸಿಗ್ನಲ್!

ಯೋಜನೆ ಜಾರಿಗೊಳಿಸಲು ಉದ್ದೇಶಿಸಿರುವ ಸ್ಥಳದಲ್ಲಿನ ಮಣ್ಣಿನ ಗುಣಮಟ್ಟ, ಬಂಡೆಗಳ ಸ್ಥಿತಿ ಹಾಗೂ ಭೂವೈಜ್ಞಾನಿಕ ಮಾಹಿತಿಯನ್ನು ತಿಳಿದುಕೊಳ್ಳಲು ಬೋರ್‌ಹೋಲ್ ಸಮೀಕ್ಷೆ ನಡೆಸಲಾಗುತ್ತದೆ.

ಬೆಂಗಳೂರು: ಬಹುನಿರೀಕ್ಷಿತ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಕರ್ನಾಟಕ ಸರ್ಕಾರ ಮತ್ತೊಂದು ಪ್ರಮುಖ ಹೆಜ್ಜೆ ಇಟ್ಟಿದೆ.

ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿ ಉದ್ದೇಶಿತ ಯೋಜನೆಗಾಗಿ ಬೋರ್‌ವೆಲ್ ಸಮೀಕ್ಷೆ (Borehole Survey) ನಡೆಸುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮೋದನೆ ನೀಡಿದ್ದಾರೆ.

ಮಂಗಳವಾರ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿ.ಕೆ. ಶಿವಕುಮಾರ್ ಅವರು, ಈ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿ (National Board for Wildlife) ಅನುಮೋದನೆಗಾಗಿ ತಕ್ಷಣ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೇಕೆದಾಟು ಯೋಜನೆಗೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಶೀಘ್ರದಲ್ಲಿ ಪಡೆಯುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಈ ಯೋಜನೆಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಎತ್ತಿರುವ ಆಕ್ಷೇಪಣೆಗಳ ಕುರಿತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಿ, ಸಾಧ್ಯವಾದಷ್ಟು ಬೇಗ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಿದರು.

ಸಭೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾತನಾಡಿ, ಯೋಜನೆ ಜಾರಿಗೊಳಿಸಲು ಉದ್ದೇಶಿಸಿರುವ ಸ್ಥಳದಲ್ಲಿನ ಮಣ್ಣಿನ ಗುಣಮಟ್ಟ, ಬಂಡೆಗಳ ಸ್ಥಿತಿ ಹಾಗೂ ಭೂವೈಜ್ಞಾನಿಕ ಮಾಹಿತಿಯನ್ನು ತಿಳಿದುಕೊಳ್ಳಲು ಬೋರ್‌ಹೋಲ್ ಸಮೀಕ್ಷೆ ನಡೆಸಲಾಗುತ್ತದೆ. ಈ ಸಮೀಕ್ಷೆಯ ವರದಿ ಆಧರಿಸಿ ಯೋಜನೆಯ ಸವಿಸ್ತಾರ ವರದಿ (Detailed Project Report - DPR) ಸಿದ್ಧಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಆದರೆ, ಸಮೀಕ್ಷೆ ಆರಂಭಿಸುವ ಮುನ್ನ ರಾಷ್ಟ್ರೀಯ ವನ್ಯಜೀವಿ ಮಂಡಳಿ, ಅರಣ್ಯ ಇಲಾಖೆ ಹಾಗೂ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯವಾಗಿದೆ. ಸಮೀಕ್ಷೆಗಾಗಿ ಕೇವಲ 0.003 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಬಳಸಲು ಪ್ರಸ್ತಾವಿಸಲಾಗಿದೆ.

ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರದಿಂದ ಶೀಘ್ರ ಅನುಮೋದನೆ ಪಡೆಯುವ ಅಗತ್ಯಬಿದ್ದರೆ ಅಗತ್ಯವಿದ್ದರೆ ತಾವು ನೇರವಾಗಿ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಿದ್ಧ ಎಂದು ಡಿ.ಕೆ. ಶಿವಕುಮಾರ್ ಅವರು ಸಭೆಯಲ್ಲಿ ತಿಳಿಸಿದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 9,000 ರೂ. ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮೇಕೆದಾಟು ಯೋಜನೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ.

ಈ ಯೋಜನೆಯ ಮೂಲಕ ಬೆಂಗಳೂರು ನಗರಕ್ಕೆ 4.75 ಟಿಎಂಸಿ ಅಡಿ (TMCft) ಕುಡಿಯುವ ನೀರು ಪೂರೈಸುವುದು ಹಾಗೂ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ.

ಯೋಜನೆ ಜಾರಿಗೊಳಿಸಲು ಒಟ್ಟು 1,079 ಹೆಕ್ಟೇರ್ ಅರಣ್ಯ ಭೂಮಿ ಅಗತ್ಯವಿದ್ದು, ಇದೇ ಕಾರಣಕ್ಕೆ ವಿವಿಧ ಪರಿಸರ ಮತ್ತು ವನ್ಯಜೀವಿ ಅನುಮತಿಗಳು ಅಗತ್ಯವಾಗಿವೆ.

ಸಭೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಸಮಸ್ಯೆಯ ಬಗ್ಗೆಯೂ ಚರ್ಚೆ ನಡೆಯಿತು. ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (BMIC) ನಿರ್ಮಾಣದಿಂದ ವಿಶೇಷವಾಗಿ ರಾಮನಗರ ಮತ್ತು ಚನ್ನಪಟ್ಟಣ ಭಾಗಗಳಲ್ಲಿ ಆನೆ, ಹುಲಿ, ಚಿರತೆ ಸೇರಿದಂತೆ ಹಲವು ವನ್ಯಜೀವಿಗಳ ಸಾಂಪ್ರದಾಯಿಕ ಸಂಚಾರ ಮಾರ್ಗಗಳಿಗೆ ಅಡ್ಡಿಯಾಗಿದೆ ಎಂದು ವನ್ಯಜೀವಿ ಮಂಡಳಿ ಸದಸ್ಯರು ಮುಖ್ಯಮಂತ್ರಿ ಗಮನಕ್ಕೆ ತಂದರು.

ಈ ಹಿನ್ನೆಲೆಯಲ್ಲಿ, ವನ್ಯಜೀವಿಗಳ ಸುರಕ್ಷಿತ ಸಂಚಾರಕ್ಕಾಗಿ ನಿರ್ಮಿಸಬೇಕಾಗಿದ್ದ ಅಂಡರ್‌ಪಾಸ್‌, ಸುರಂಗ ಮಾರ್ಗಗಳು ಹಾಗೂ ಮೇಲ್ಸೇತುವೆಗಳ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.

ಇದೇ ವೇಳೆ ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ಸಫಾರಿ ಹಾಗೂ ಪರಿಸರ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪುನರಾರಂಭಿಸುವ ಕುರಿತು ಚರ್ಚೆ ನಡೆದಿದ್ದು, ಪ್ರವಾಸಿಗರ ಸುರಕ್ಷತೆಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳದೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಮತಾ ಆಪ್ತ ಹಾಗೂ ಮಾಜಿ ಉಪಸಭಾಪತಿ ಅಸೀಶ್ ಬ್ಯಾನರ್ಜಿ TMC ಕಚೇರಿಯಲ್ಲಿ ಶವವಾಗಿ ಪತ್ತೆ!

ಮುಂದಿನ ವರ್ಷ ಆಗಸ್ಟ್ ವೇಳೆಗೆ ಮೇಕೆದಾಟು ಯೋಜನೆಗೆ ಶಂಕುಸ್ಥಾಪನೆ: ಸಚಿವ ಎನ್. ಚಲುವರಾಯಸ್ವಾಮಿ

ಮೋದಿನೇ ಡಿ.ಕೆ - ಡಿ.ಕೆ ಅಂತಿದ್ದಾರೆ ನೀವ್ಯಾಕೆ ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಫ್ರೀಡಂ ಹಬ್ಬದಲ್ಲಿ ಡಿ.ಕೆ ಶಿವಕುಮಾರ್ ಟಾಂಗ್

ನಿಂತಿಲ್ಲ ಸೋನಿಯಾ ಗಾಂಧಿ ವಿರುದ್ಧ 'ವಂದೇ ಮಾತರಂ' ಟೀಕೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹಂಚಿಕೊಂಡ ವಿಡಿಯೊದಲ್ಲಿ ಏನಿದೆ?-Video

ಹನೂರು ಶೂಟೌಟ್ ಪ್ರಕರಣ: ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ತನಿಖೆ; ಸಿಎಂ ಡಿ ಕೆ ಶಿವಕುಮಾರ್