ಸಾಂದರ್ಭಿಕ ಚಿತ್ರ  
ರಾಜ್ಯ

ಮಣ್ಣಿನ ಫಲವತ್ತತೆ ಕೊರತೆ: UAS-GKVK ವಿಜ್ಞಾನಿಗಳಿಂದ ಬಯೋಚಾರ್ ತಂತ್ರಜ್ಞಾನ ಅಭಿವೃದ್ಧಿ, ಏನಿದು?

ಸಣ್ಣ ಮತ್ತು ಅತಿಸಣ್ಣ ಮಟ್ಟದ ರೈತರು ಮಣ್ಣಿನ ಪೋಷಕಾಂಶವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಕಡಿಮೆ ವೆಚ್ಚದ ಬಯೋಚಾರ್ (Biochar) ತಂತ್ರಜ್ಞಾನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ (UAE) ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಬೆಂಗಳೂರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಹುಬ್ಬಳ್ಳಿ: ಸಣ್ಣ ಮತ್ತು ಅತಿಸಣ್ಣ ಮಟ್ಟದ ರೈತರು ಮಣ್ಣಿನ ಪೋಷಕಾಂಶವನ್ನು ಹೆಚ್ಚಿಸಿಕೊಳ್ಳಲು ನೆರವಾಗುವ ಕಡಿಮೆ ವೆಚ್ಚದ ಬಯೋಚಾರ್ (Biochar) ತಂತ್ರಜ್ಞಾನವನ್ನು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಧಾರವಾಡ (UAS) ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK), ಬೆಂಗಳೂರು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ.

ಯುಎಎಸ್ ಕುಲಪತಿ ಎಸ್.ವಿ. ಸುರೇಶ್ ಈ ಬಗ್ಗೆ ಮಾಹಿತಿ ನೀಡಿ, ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಕೃಷಿಭೂಮಿಯಲ್ಲಿ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಅಗತ್ಯ ಮಟ್ಟಕ್ಕಿಂತ ಕೆಳಗೆ ಇಳಿದಿದೆ. ಇನ್ನು ಮುಂದೆ ನಿರ್ಲಕ್ಷಿಸಲು ಸಾಧ್ಯವಿಲ್ಲ. ರೈತರು ಸುಡುವ ಕೃಷಿ ಅವಶೇಷಗಳನ್ನು ಬಯೋಚಾರ್ ಆಗಿ ಪರಿವರ್ತಿಸುವ ಮೂಲಕ ಮಣ್ಣಿನ ಪುನರುಜ್ಜೀವನಕ್ಕೆ ನೆರವಾಗಬಹುದು ಎಂದು ಹೇಳಿದರು.

ಸ್ಥಳೀಯ ಕೃಷಿ ಅವಶೇಷಗಳಿಂದ ಬಯೋಚಾರ್

ಯುಎಎಸ್‌ನ ಅಖಿಲ ಭಾರತ ಸಮನ್ವಿತ ಸಂಶೋಧನಾ ಯೋಜನೆ - ಮಣ್ಣಿನ ಪರೀಕ್ಷೆ ಮತ್ತು ಬೆಳೆ ಪ್ರತಿಕ್ರಿಯೆ (STCR) ವಿಭಾಗದ ಮುಖ್ಯಸ್ಥ ಡಾ. ಆರ್. ಕೃಷ್ಣಮೂರ್ತಿ, ಬಯೋಚಾರ್ ತಯಾರಿಸಲು ಯಾವುದೇ ಹೊರಗಿನ ರಾಸಾಯನಿಕಗಳು ಅಥವಾ ಪೂರಕ ವಸ್ತುಗಳನ್ನು ಬಳಸುವುದಿಲ್ಲ ಎಂದು ತಿಳಿಸಿದರು.

ತೊಗರಿ, ಮೆಕ್ಕೆಜೋಳ ಮತ್ತು ಮಲ್ಬೆರಿ ಕಾಂಡಗಳು, ಸೂರ್ಯಕಾಂತಿ ಹಾಗೂ ಇತರ ಬೆಳೆಗಳ ಕೊಂಬೆ ಕತ್ತರಿಸಿದ ಅವಶೇಷಗಳಂತಹ ಸ್ಥಳೀಯವಾಗಿ ಲಭ್ಯವಿರುವ ಕೃಷಿ ತ್ಯಾಜ್ಯಗಳನ್ನು ಬಳಸಲಾಗುತ್ತದೆ ಎಂದು ಅವರು ಹೇಳಿದರು.

ನಾವು ವಿಶೇಷವಾಗಿ 25 ಕೆ.ಜಿ. ಸಾಮರ್ಥ್ಯದ ಡ್ರಮ್ ನ್ನು ವಿನ್ಯಾಸಗೊಳಿಸಿದ್ದೇವೆ. ಇದರಲ್ಲಿ ಸೀಮಿತ ಪ್ರಮಾಣದ ಆಮ್ಲಜನಕ ಹರಿಯುವಂತೆ ರಂಧ್ರಗಳಿರುತ್ತವೆ. ಕಚ್ಚಾ ವಸ್ತುಗಳನ್ನು ಮುಚ್ಚಳ ಮುಚ್ಚಿದ ಸ್ಥಿತಿಯಲ್ಲಿ ಸುಮಾರು ಮೂರು ಗಂಟೆಗಳ ಕಾಲ ಸುಟ್ಟರೆ ಬಯೋಚಾರ್ ಸಿದ್ಧವಾಗುತ್ತದೆ. ಒಂದು ಕೆ.ಜಿ. ಬಯೋಚಾರ್‌ನಲ್ಲಿ 500ರಿಂದ 800 ಗ್ರಾಂ (ಶೇ.50-80) ಇಂಗಾಲ ಇರುತ್ತದೆ ಎಂದು ವಿವರಿಸಿದರು.

ಮಣ್ಣಿನಲ್ಲಿ ಇಂಗಾಲದ ಪ್ರಮಾಣ ಕುಸಿತ

ರಾಷ್ಟ್ರೀಯ ಮಾನದಂಡಗಳ ಪ್ರಕಾರ, ಒಂದು ಹೆಕ್ಟೇರ್ ಕೃಷಿಭೂಮಿಯಲ್ಲಿ ಕನಿಷ್ಠ ಶೇ.0.75 ಸಾವಯವ ಇಂಗಾಲ ಇರಬೇಕು. ಆದರೆ ಪ್ರಸ್ತುತ ಕರ್ನಾಟಕ ಹಾಗೂ ದೇಶದ ಬಹುತೇಕ ಭಾಗಗಳ ಕೃಷಿಭೂಮಿಯಲ್ಲಿ ಇದು ಶೇ.0.33ರಿಂದ 0.5ರಷ್ಟಿದೆ.

ಅರಣ್ಯ ಪ್ರದೇಶಗಳ ಸುತ್ತಮುತ್ತ ಮಾತ್ರ ಇಂಗಾಲದ ಪ್ರಮಾಣ ಶೇ.1ರಿಂದ 1.5ರಷ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮಣ್ಣಿನ ಸಾವಯವ ಇಂಗಾಲ (SOC) ಕೊರತೆಯಿಂದ ಅತ್ಯಂತ ಹೆಚ್ಚು ಹಾನಿಗೊಳಗಾಗಿರುವ ಜಿಲ್ಲೆ ಕೋಲಾರವಾಗಿದ್ದು, ಜಿಲ್ಲೆಯ ಶೇ.94ಕ್ಕಿಂತ ಹೆಚ್ಚು ಕೃಷಿಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕಡಿಮೆಯಾಗಿದೆ ಎಂದರು.

ಅತಿಯಾದ ರಾಸಾಯನಿಕ ಗೊಬ್ಬರ ಬಳಕೆ, ಜಾನುವಾರುಗಳ ಸಂಖ್ಯೆ ಕಡಿಮೆಯಾಗಿರುವುದು, ಸಾವಯವ ಗೊಬ್ಬರದ ಬೆಲೆ ಏರಿಕೆ, ಒಂದೇ ಬೆಳೆ ಬೆಳೆಯುವ ಪದ್ಧತಿ ಹಾಗೂ ಬೆಳೆ ಅವಶೇಷಗಳನ್ನು ಬಹಿರಂಗವಾಗಿ ಸುಡುವ ಕ್ರಮದಿಂದ ಮಣ್ಣಿಗೆ ಅಗತ್ಯವಾದ ಜೀವಸತ್ವಯುಕ್ತ ಇಂಗಾಲದ ಪ್ರಮಾಣ ಗಣನೀಯವಾಗಿ ಕುಸಿದಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಗೊಬ್ಬರ ಆಮದು ಅವಲಂಬನೆ ಕಡಿಮೆ ಮಾಡುವ ಸಾಮರ್ಥ್ಯ

ಪ್ರಸ್ತುತ ಭಾರತವು ತನ್ನ ಅಗತ್ಯದ ಶೇ.20ರಿಂದ 25ರಷ್ಟು ಯೂರಿಯಾ, ಶೇ.50ರಿಂದ 60ರಷ್ಟು ಡೈಅಮೋನಿಯಂ ಫಾಸ್ಫೇಟ್ (DAP) ಹಾಗೂ ಸುಮಾರು ಶೇ.100ರಷ್ಟು ಮ್ಯುರಿಯೇಟ್ ಆಫ್ ಪೊಟ್ಯಾಶ್ ನ್ನು ಆಮದು ಮಾಡಿಕೊಳ್ಳುತ್ತಿದೆ.

ನೈಸರ್ಗಿಕ ಅನಿಲ, ರಾಕ್ ಫಾಸ್ಫೇಟ್ ಹಾಗೂ ಗಂಧಕದಂತಹ ಕಚ್ಚಾ ವಸ್ತುಗಳ ಆಮದು ಅವಲಂಬನೆಯನ್ನು ಸೇರಿಸಿದರೆ, ಜಾಗತಿಕ ಗೊಬ್ಬರ ಪೂರೈಕೆ ಸರಪಳಿಯ ಮೇಲಿನ ಭಾರತದ ಅವಲಂಬನೆ ಶೇ.68ರಿಂದ 70ಕ್ಕೆ ಏರುತ್ತದೆ ಎಂದು ವಿಜ್ಞಾನಿಗಳು ತಿಳಿಸಿದ್ದು, ಪಶ್ಚಿಮ ಏಷ್ಯಾದ ಸಂಘರ್ಷದಿಂದ ಈ ಅವಲಂಬನೆಯ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ ಎಂದರು.

ಬಯೋಚಾರ್ ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಲ್ಲ. ಆದರೆ ಸಾರಜನಕ (ನೈಟ್ರೋಜನ್), ರಂಜಕ (ಫಾಸ್ಫರಸ್) ಮತ್ತು ಪೊಟ್ಯಾಶ್ ಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವುದರಿಂದ, ಭಾರತವು ಆಮದು ಗೊಬ್ಬರಗಳ ಮೇಲಿನ ದೀರ್ಘಕಾಲೀನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಪ್ರಮುಖ ಪೂರಕ ತಂತ್ರಜ್ಞಾನವಾಗಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಲಾಖೆಗಳ ನಡುವಿನ ತಡೆಗೋಡೆ ಒಡೆಯಿರಿ, ಒಂದೇ ತಂಡವಾಗಿ ಕೆಲಸ ಮಾಡಿ: ಕೇಂದ್ರ ಅಧಿಕಾರಿಗಳಿಗೆ ಪ್ರಧಾನಿ ಮೋದಿ ಖಡಕ್ ಸೂಚನೆ..!

ವಿಮಾನಯಾನ ಸಂಸ್ಥೆಗಳಿಗೆ ಬಿಗ್ ರಿಲೀಫ್; ATF ದರ ಲೀಟರ್‌ಗೆ 5 ರೂ. ಇಳಿಕೆ, ವಿಮಾನ ಪ್ರಯಾಣ ದರವೂ ಕಡಿಮೆಯಾಗುತ್ತಾ..?

ಜನ್ಮಸಿದ್ಧ ಪೌರತ್ವ ರದ್ದತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಟ್ರಂಪ್‌ಗೆ ಭಾರೀ ಶಾಕ್, 'ದೇಶಕ್ಕೆ ಮಾರಕ' ಎಂದ ಅಮೆರಿಕ ಅಧ್ಯಕ್ಷ..!

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ; ಇಂದಿನಿಂದ ಹೊಸ ದರ ಜಾರಿ, ಬೆಂಗಳೂರಿನಲ್ಲಿ ಇಂದಿನ ರೇಟ್ ಎಷ್ಟು..?

ಜನ್ಮಸಿದ್ಧ ಪೌರತ್ವ ವಿವಾದ: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಚೀನಾಗೆ ಅಭಿನಂದನೆ ತಿಳಿಸಿದ ಟ್ರಂಪ್, ಕಾರಣ..?