ಬೆಂಗಳೂರು: ಟಾಟಾ ಪವರ್‌ನ ಸಮಾನಾಂತರ (Parellel) ವಿದ್ಯುತ್ ವಿತರಣೆಗೆ ಪರವಾನಗಿ ನೀಡುವ ಅರ್ಜಿಯನ್ನು ರಾಜ್ಯ ಸರ್ಕಾರ ವಿರೋಧಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಈ ಸಂಬಂಧ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ಮುಂದೆ ಎಲ್ಲಾ ಎಸ್ಕಾಂಗಳು ಸಮಗ್ರ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಕೆಇಆರ್‌ಸಿ ಒಂದು ಅಥವಾ ಎರಡು ದಿನಗಳಲ್ಲಿ ಈ ಅರ್ಜಿಯ ಕುರಿತು ನಿರ್ಧಾರ ಕೈಗೊಳ್ಳಲಿದೆ. ಹಿಂದಿನ ಬಿಜೆಪಿ ಸರ್ಕಾರ ಪರವಾನಗಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು. ಈಗ ಟಾಟಾ ಪವರ್ ಸಮಾನಾಂತರ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿರುವುದರಿಂದ, ಸರ್ಕಾರದ ಅಭಿಪ್ರಾಯವನ್ನು ಆಯೋಗಕ್ಕೆ ತಿಳಿಸುತ್ತೇವೆ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಈ ಅರ್ಜಿ ನೇರವಾಗಿ ಬಂದಿಲ್ಲ. ಟಾಟಾ ಪವರ್ ಕೆಇಆರ್‌ಸಿಗೆ ಅರ್ಜಿ ಸಲ್ಲಿಸಿದ್ದು, ಆಯೋಗವು ನಂತರ ಎಸ್ಕಾಂಗಳ ಅಭಿಪ್ರಾಯವನ್ನು ಕೋರಿದೆ.
ಅರ್ಜಿ ನನ್ನ ಬಳಿ ಬಂದಿದ್ದರೆ ನೇರವಾಗಿ ನನ್ನ ಅಭಿಪ್ರಾಯ ತಿಳಿಸುತ್ತಿದ್ದೆ. ಆದರೆ ಈಗ ಎಲ್ಲಾ ಎಸ್ಕಾಂಗಳು ಯಾವುದೇ ಲೋಪವಿಲ್ಲದ, ಸಮಗ್ರ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ರಾಜ್ಯ ಸರ್ಕಾರ ಈ ಸಮಾನಾಂತರ ವಿದ್ಯುತ್ ವಿತರಣಾ ವ್ಯವಸ್ಥೆಗೆ ಯಾವುದೇ ರೀತಿಯ ಒಪ್ಪಿಗೆ ನೀಡುವುದಿಲ್ಲ ಎಂಬುದನ್ನು ಕೆಇಆರ್‌ಸಿಗೆ ಸ್ಪಷ್ಟವಾಗಿ ತಿಳಿಸಬೇಕು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಇದೇ ವೇಳೆ, ರಾಜ್ಯ ಸರ್ಕಾರವು ಹೊಸದಾಗಿ ಸ್ಥಾಪಿಸಿರುವ ನಾಗರಿಕರ ದೂರು ಪರಿಹಾರ ಇಲಾಖೆ ಪ್ರಜಾ ಸೇವೆ'ಗೆ ಹಿರಿಯ ಐಎಎಸ್ ಅಧಿಕಾರಿ ಹರ್ಷ್ ಗುಪ್ತಾ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದೆ.
ಈ ಇಲಾಖೆಯ ಕುರಿತು ವಿವರಿಸಿದ ಮುಖ್ಯಮಂತ್ರಿ, ನಾಗರಿಕ ಸೇವಾ ಇಲಾಖೆಯ ಪ್ರಮುಖ ಉದ್ದೇಶ ಸಾರ್ವಜನಿಕರ ದೂರುಗಳನ್ನು ಆಲಿಸುವುದು, ಪ್ರತಿಭಟನಾ ಮನವಿಗಳನ್ನು ಸ್ವೀಕರಿಸುವುದು ಹಾಗೂ ನಾಗರಿಕರ ಸಮಸ್ಯೆಗಳನ್ನು ಸಂಬಂಧಿತ ಇಲಾಖೆಗಳು ಮತ್ತು ಅಧಿಕಾರಿಗಳಿಗೆ ತ್ವರಿತವಾಗಿ ತಲುಪಿಸುವುದಾಗಿದೆ ಎಂದರು.
ಈ ಇಲಾಖೆಗೆ ಪ್ರತ್ಯೇಕ ಸಚಿವರಿರಲಿದ್ದಾರೆ. ಅಲ್ಲದೆ, ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ಕಡ್ಡಾಯವಾಗಿ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಭೇಟಿ ನೀಡಿ ಜನರ ಅಹವಾಲುಗಳನ್ನು ಆಲಿಸಬೇಕು. ಇದರಿಂದ ಜನರು ತಮ್ಮ ಸಮಸ್ಯೆಗಳಿಗಾಗಿ ಬೆಂಗಳೂರಿಗೆ ಬರಬೇಕಾದ ಅಗತ್ಯ ಇರುವುದಿಲ್ಲ ಎಂದು ಶಿವಕುಮಾರ್ ಹೇಳಿದರು.
ತಾಲೂಕು ಮಟ್ಟದಲ್ಲೇ ಅರ್ಜಿ ನಮೂನೆಗಳನ್ನು ಮುಂಚಿತವಾಗಿ ವಿತರಿಸಲಾಗುವುದು. ಇದರಿಂದ ಸಾರ್ವಜನಿಕರು ಭರ್ತಿ ಮಾಡಿದ ಅರ್ಜಿಗಳನ್ನು ನೇರವಾಗಿ ಸಚಿವರು ಅಥವಾ ಸ್ಥಳೀಯ ಶಾಸಕರಿಗೆ ಸಲ್ಲಿಸಬಹುದು ಎಂದರು.ನಾನು ಕೂಡ ವಿವಿಧ ತಾಲೂಕುಗಳಿಗೆ ಅಚ್ಚರಿ ಭೇಟಿ ನೀಡುತ್ತೇನೆ ಎಂದು ತಿಳಿಸಿದರು.
ಬಸ್ ಪ್ರಯಾಣ ದರ ಹೆಚ್ಚಳದ ಕುರಿತು ಮಾತನಾಡಿದ ಮುಖ್ಯಮಂತ್ರಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಸಾರಿಗೆ ಇಲಾಖೆಯ ಆರ್ಥಿಕ ಪರಿಸ್ಥಿತಿ ಗಂಭೀರವಾಗಿ ಹದಗೆಟ್ಟಿದೆ ಎಂದು ಹೇಳಿದರು.
ತಮ್ಮ ಕಾರ್ಯಾಚರಣೆಯ ನಷ್ಟಗಳ ಕುರಿತು ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಯಾಣಿಕರ ಹಿತಾಸಕ್ತಿ ಹಾಗೂ ಸಿಬ್ಬಂದಿಯ ಕಲ್ಯಾಣ ಎರಡನ್ನೂ ಸಮತೋಲನಗೊಳಿಸುವಂತೆ ಸಮಗ್ರ ತಾಂತ್ರಿಕ ವರದಿ ನೀಡುವಂತೆ ಸೂಚಿಸಲಾಗಿದೆ. ಅದರ ಆಧಾರದ ಮೇಲೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.