ಗೃಹ ಜ್ಯೋತಿ ಯೋಜನೆ 
ರಾಜ್ಯ

ಗೃಹ ಜ್ಯೋತಿ ಪರಿಶೀಲನೆ ಆರಂಭ: ಉಚಿತ ವಿದ್ಯುತ್ ಸೌಲಭ್ಯ ಕೈತಪ್ಪುವ ಭೀತಿ, ಬಾಡಿಗೆದಾರರ ಆತಂಕ..!

ವಾಣಿಜ್ಯ ಕಟ್ಟಡಗಳಲ್ಲಿ ವಾಸಿಸುವವರು ಸೇರಿದಂತೆ ಕೆಲ ಅನರ್ಹರು ನಿಯಮ ಉಲ್ಲಂಘಿಸಿ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ಮನೆ-ಮನೆ ಪರಿಶೀಲನೆ ಜುಲೈ 1ರಿಂದ ಆರಂಭವಾಗಿದ್ದು, ಇದರ ಬೆನ್ನಲ್ಲೇ ರಾಜ್ಯದ ಸಾವಿರಾರು ಬಾಡಿಗೆದಾರರಲ್ಲಿ ಆತಂಕ ಹೆಚ್ಚಾಗಿದೆ.

ಹೊಸ ಪರಿಶೀಲನಾ ನಿಯಮಗಳಿಂದಾಗಿ ಅನೇಕರು ಉಚಿತ ವಿದ್ಯುತ್ ಸೌಲಭ್ಯ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯಲ್ಲಿ ಅಕ್ರಮ ಬಳಕೆ ನಡೆಯುತ್ತಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಪರಿಶೀಲನೆ ಆರಂಭಿಸಿದೆ.

ವಾಣಿಜ್ಯ ಕಟ್ಟಡಗಳಲ್ಲಿ ವಾಸಿಸುವವರು ಸೇರಿದಂತೆ ಕೆಲ ಅನರ್ಹರು ನಿಯಮ ಉಲ್ಲಂಘಿಸಿ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

ಪರಿಶೀಲನೆ ವೇಳೆ ಅಧಿಕಾರಿಗಳು ಫಲಾನುಭವಿಗಳ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬಾಡಿಗೆ ಒಪ್ಪಂದದ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ. ಅಗತ್ಯ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ಗೃಹ ಜ್ಯೋತಿ ಯೋಜನೆಯಡಿ ದೊರೆಯುತ್ತಿರುವ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆದರೆ, ಈ ಹೊಸ ನಿಯಮಗಳು ಮುಖ್ಯವಾಗಿ ಜುಲೈ 2023ರ ನಂತರ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿರುವ ಬಾಡಿಗೆದಾರರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿವೆ.

ಅನೇಕ ಮನೆಗಳಲ್ಲಿ ಹಿಂದಿನ ಬಾಡಿಗೆದಾರರು ಮನೆ ಖಾಲಿ ಮಾಡಿದ ಬಳಿಕವೂ ವಿದ್ಯುತ್ ಸಂಪರ್ಕಕ್ಕೆ ಜೋಡಿಸಲಾಗಿದ್ದ ತಮ್ಮ ಆಧಾರ್ ವಿವರವನ್ನು ರದ್ದುಪಡಿಸಿಲ್ಲ. ಇದರಿಂದ ಹೊಸ ಬಾಡಿಗೆದಾರರು ತಮ್ಮ ಆಧಾರ್ ಸಂಖ್ಯೆಯನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಜೋಡಿಸಿ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಂಧನ ಇಲಾಖೆಯ ಅಧಿಕಾರಿಗಳ ಪ್ರಕಾರ, ಹಿಂದಿನ ಫಲಾನುಭವಿಯ ನೋಂದಣಿ ರದ್ದಾಗದ ಹೊರತು ಹೊಸ ಫಲಾನುಭವಿಯ ನೋಂದಣಿ ಸಾಧ್ಯವಿಲ್ಲ. ಹೀಗಾಗಿ ಅನೇಕ ಬಾಡಿಗೆದಾರರು ಯೋಜನೆಯ ಲಾಭ ಪಡೆಯಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಲವರು, ಹಿಂದಿನ ಬಾಡಿಗೆದಾರರನ್ನು ಹುಡುಕಿ ಅವರ ಆಧಾರ್ ಲಿಂಕ್ ತೆಗೆಸುವುದು ಅಸಾಧ್ಯ. ಆದ್ದರಿಂದ ಸರ್ಕಾರ ತಾಂತ್ರಿಕ ಪರಿಹಾರ ಕಂಡುಹಿಡಿಯಬೇಕು ಅಥವಾ ಸ್ಪಷ್ಟ ಮಾರ್ಗಸೂಚಿಗಳನ್ನು ಹೊರಡಿಸಿ ನಿಜವಾದ ಫಲಾನುಭವಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ, ಕುಟುಂಬದ ಸದಸ್ಯರು ಮೃತಪಟ್ಟ ಬಳಿಕವೂ ವಿದ್ಯುತ್ ಸಂಪರ್ಕ ಅವರ ಹೆಸರಿನಲ್ಲೇ ಮುಂದುವರಿದಿರುವ ಮನೆಗಳಿಗೂ ಹೊಸ ಸಮಸ್ಯೆ ಎದುರಾಗಿದೆ. ಇಂತಹ ವಿದ್ಯುತ್ ಸಂಪರ್ಕಗಳ ಆರ್‌ಆರ್ ಸಂಖ್ಯೆ (RR Number)ಯನ್ನು ಕಾನೂನುಬದ್ಧ ವಾರಸುದಾರರ ಹೆಸರಿಗೆ ವರ್ಗಾಯಿಸಿ, ನಂತರ ಗ್ರುಹ ಜ್ಯೋತಿ ಯೋಜನೆಗೆ ಮರುನೋಂದಣಿ ಮಾಡಿಸದಿದ್ದರೆ ಉಚಿತ ವಿದ್ಯುತ್ ಸೌಲಭ್ಯವನ್ನು ಸ್ಥಗಿತಗೊಳಿಸಲು ಇಂಧನ ಇಲಾಖೆ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.

ಆದರೆ, ವಿದ್ಯುತ್ ಖಾತೆಯನ್ನು ವರ್ಗಾವಣೆ ಮಾಡುವ ವಿಧಾನವೇ ಗೊತ್ತಿಲ್ಲ ಎಂದು ಅನೇಕ ಕುಟುಂಬಗಳು ಹೇಳುತ್ತಿದ್ದು, ಈ ಪ್ರಕ್ರಿಯೆಗಾಗಿ ಪದೇಪದೆ ವಿದ್ಯುತ್ ಕಚೇರಿಗಳಿಗೆ ಅಲೆದಾಡಬೇಕಾಗಬಹುದು ಎಂಬ ಆತಂಕ ವ್ಯಕ್ತಪಡಿಸಿವೆ.

ರಾಜ್ಯ ಸರ್ಕಾರ ಅಕ್ರಮ ತಡೆಯುವ ಉದ್ದೇಶದಿಂದ ಪರಿಶೀಲನೆ ಆರಂಭಿಸಿದ್ದರೂ, ಹೊಸ ನಿಯಮಗಳಿಂದ ನೈಜ ಫಲಾನುಭವಿಗಳೇ ಸಂಕಷ್ಟಕ್ಕೆ ಸಿಲುಕುತ್ತಿರುವುದರಿಂದ ಈ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

"ಒಂದೇ ಶಾಟ್‌ನಲ್ಲಿ ಇರಾನ್‌ನ ಎಲ್ಲಾ ನಾಯಕರು ಖತಂ ಆಗುತ್ತಿದ್ದರು"... ಆದರೆ, ಅಮೆರಿಕಾ ಸುಮ್ಮನಿರುವುದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಟ್ರಂಪ್..!

Venezuelaದಲ್ಲಿ ಮರಣ ಮೃದಂಗ: ಅವಳಿ ಭೂಕಂಪಕ್ಕೆ 2,954 ಮಂದಿ ಬಲಿ, ಸಾವಿರಾರು ಕುಟುಂಬಗಳು ಬೀದಿಗೆ..!

ಅನ್ಯ ಉದ್ದೇಶಕ್ಕೆ ಕುಡಿಯುವ ನೀರು ಬಳಕೆ ನಿಷೇಧ; ಬೇಸಿಗೆಯಲ್ಲಿ ತೆಗೆದುಕೊಳ್ಳುವ ಕ್ರಮಗಳನ್ನು ಮಳೆಗಾಲದಲ್ಲೇ ಜಾರಿಗೊಳಿಸಿದ BWSSB!

1 ಓವರ್‌ನಲ್ಲಿ 29 ರನ್ ಹೊಡೆಸಿಕೊಂಡ ಬಿಷ್ಣೋಯ್: ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯ ಕೈಚೆಲ್ಲಿದ ಭಾರತ

ನಾನು ಸೋತಿದ್ದೇನೆ, ಸತ್ತಿಲ್ಲ: TMC ಕೇಂದ್ರ ಕಚೇರಿಗೆ ಬಿಗ... ಬಂಡಾಯ ನಾಯಕರ ವಿರುದ್ಧ ಮಮತಾ ಬ್ಯಾನರ್ಜಿ ಗರಂ