ಬೆಂಗಳೂರು: ರಾಜ್ಯದ ಹಲವೆಡೆ ಮುಂಗಾರು ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿಯ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಂಗಳವಾರ ಕಲಬುರಗಿಯಲ್ಲಿ ವಿಭಾಗ ಮಟ್ಟದ ಸಭೆ ಕರೆದಿದ್ದು, ಬರ ಪರಿಸ್ಥಿತಿ ಕುರಿತು ಸಮಗ್ರ ಚರ್ಚೆ ನಡೆಸುತ್ತೇವೆ. ಅಲ್ಲದೆ, ಎಲ್ಲಾ ಜಿಲ್ಲೆಗಳಿಂದ ವರದಿ ತರಿಸಿಕೊಂಡು, ಪರಿಶೀಲನೆ ನಡೆಸಿದ ಬಳಿಕ ‘ಬರಗಾಲ ಘೋಷಣೆ’ ಮಾಡುವ ಸಂಬಂಧ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬರ ಘೋಷಣೆ ಕುರಿತ ಸುದ್ದಿಗಾರರ ಪ್ರಶ್ನೆಗೆ ನಿನ್ನೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಮಳೆ ಕೊರತೆಯ ಆತಂಕ ಎದುರಾಗಿದ್ದರೂ ಬರ ಘೋಷಣೆ ಮಾಡುವ ಬಗ್ಗೆ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಒಂದೇ ದಿನದಲ್ಲಿ ಬರ ಘೋಷಣೆ ಮಾಡಲು ಸಾಧ್ಯವಿಲ್ಲ ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯದ ಮಾರ್ಗಸೂಚಿಗಳ ಪ್ರಕಾರ ಸಮೀಕ್ಷೆ ನಡೆಸಿ, ಬೆಳೆ ಹಾನಿ ಹಾಗೂ ನೀರಿನ ಕೊರತೆಯ ವರದಿ ಆಧರಿಸಿ ಬರ ಘೋಷಣೆ ಮಾಡಬೇಕಾಗುತ್ತದೆ. ಅದಕ್ಕೆ ಕಾಲಾವಕಾಶ ಬೇಕು. ಉತ್ತರ ಕರ್ನಾಟಕ ಭಾಗದ ಬರ ಕುರಿತಂತೆ ಇಂದು ಕಲಬುರಗಿಯಲ್ಲಿ ನಡೆಯುವ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ಪಡೆಯುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.