ಬೆಂಗಳೂರು: ಭಾರತವು ಒಟ್ಟಾರೆಯಾಗಿ ಕಡಿಮೆ ಮಧ್ಯಮ ಆದಾಯದ ಆರ್ಥಿಕತೆಯಾಗಿ ಉಳಿದಿದ್ದರೂ, ಐದು ಭಾರತೀಯ ರಾಜ್ಯಗಳು ಈಗ ವಿಶ್ವ ಬ್ಯಾಂಕಿನ ತಲಾ ಆದಾಯದ ಆಧಾರದ ಮೇಲೆ ಮೇಲ್ಮಧ್ಯಮ ಆದಾಯದ ವರ್ಗದ ಮಿತಿಯನ್ನು ದಾಟಿವೆ ಎಂದು ವಿಶ್ವಬ್ಯಾಂಕ್ ವರದಿ ತಿಳಿಸಿದೆ.
ವಿಶ್ವಬ್ಯಾಂಕ್‌ನ ಇತ್ತೀಚಿನ ವರದಿಯ ಪ್ರಕಾರ, ಭಾರತದ ಐದು ರಾಜ್ಯಗಳು ‘ಮೇಲ್ಮಧ್ಯಮ ವರ್ಗದ ಆದಾಯ ಹೊಂದಿರುವ ಆರ್ಥಿಕತೆಗಳ ಮಿತಿಯನ್ನು (ಕಟ್ ಆಫ್) ಯಶಸ್ವಿಯಾಗಿ ದಾಟಿದ್ದು, ಈ ಪೈಕಿ ಕರ್ನಾಟಕವು ಮುಂಚೂಣಿಯಲ್ಲಿದೆ. ದೆಹಲಿ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕವು 5,579 ಡಾಲರ್ ತಲಾ ಆದಾಯದೊಂದಿಗೆ ದ್ವಿತೀಯ ಸ್ಥಾನ ಪಡೆದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಿದೆ.
ಈ ಮಹತ್ವದ ಸಾಧನೆಯ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಸಂತಸ ಹಂಚಿಕೊಂಡಿರುವ ಕರ್ನಾಟಕದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇದು ಪ್ರತಿಯೊಬ್ಬ ಕನ್ನಡಿಗನೂ ಹೆಮ್ಮೆಪಡುವಂತಹ ಕ್ಷಣವಾಗಿದೆ ಎಂದು ಬಣ್ಣಿಸಿದ್ದಾರೆ.
ರಾಜ್ಯದ ಈ ಹೆಮ್ಮೆಯ ಸಾಧನೆಯು ನಮ್ಮ ಉದ್ಯಮಿಗಳು, ರೈತರು, ಕಾರ್ಮಿಕರು, ಮಹಿಳೆಯರು ಮತ್ತು ಯುವಜನತೆಯ ಕಠಿಣ ಪರಿಶ್ರಮ, ಅನ್ವೇಷಣಾ ಮನೋಭಾವ ಹಾಗೂ ಕ್ರಿಯಾಶೀಲತೆಗೆ ಸಂದ ಜಯವಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ. ಇದೇ ವೇಳೆ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿರುವ ಅವರು, ನಮ್ಮ ಐದು ಗ್ಯಾರಂಟಿ ಯೋಜನೆಗಳು ಕೇವಲ ಕಲ್ಯಾಣ ಕಾರ್ಯಕ್ರಮಗಳಲ್ಲ; ಅವು ಜನರ ಮೇಲಿನ ಹೂಡಿಕೆಗಳಾಗಿವೆ.
ಕುಟುಂಬಗಳ ಆದಾಯವನ್ನು ಬಲಪಡಿಸುವ, ಜೀವನೋಪಾಯವನ್ನು ಭದ್ರಪಡಿಸುವ ಮೂಲಕ ಮತ್ತು ಎಲ್ಲರಿಗೂ ಸಮಾನ ಅವಕಾಶಗಳನ್ನು ವಿಸ್ತರಿಸುವ ಮೂಲಕ, ಒಳಗೊಳ್ಳುವಿಕೆಯ ಬೆಳವಣಿಗೆಯೇ ಸುಸ್ಥಿರ ಆರ್ಥಿಕ ಪ್ರಗತಿಗೆ ಅತ್ಯಂತ ಬಲವಾದ ಬುನಾದಿ ಎಂಬುದನ್ನು ನಾವು ಸಾಬೀತುಪಡಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ವಿಶ್ವಬ್ಯಾಂಕ್‌ನ ನಿಯಮಾವಳಿಗಳ ಅನ್ವಯ ತಲಾ ಆದಾಯವು $1,175 ರಿಂದ $4,635 ರಷ್ಟಿದ್ದರೆ ಅದನ್ನು ಮಧ್ಯಮ ಆದಾಯದ ಮಿತಿ ಎನ್ನಲಾಗುತ್ತದೆ. ಭಾರತದ ಒಟ್ಟಾರೆ ಆರ್ಥಿಕತೆಗಿಂತ ಭಿನ್ನವಾಗಿ ದೆಹಲಿ ($6,217), ಕರ್ನಾಟಕ ($5,579), ತೆಲಂಗಾಣ ($5,407), ತಮಿಳುನಾಡು ($5,329) ಮತ್ತು ಗುಜರಾತ್ ($4,734) ರಾಜ್ಯಗಳು ಈ ಮಿತಿಯನ್ನು ಮೀರಿ ಮೇಲ್ಮಧ್ಯಮ ಆದಾಯದ ಜಾಗತಿಕ ಗುಣಮಟ್ಟವನ್ನು ತಲುಪಿವೆ.
ಮುಖ್ಯಮಂತ್ರಿಗಳ ಹಣಕಾಸು ಸಲಹೆಗಾರ ಮತ್ತು ನಿವೃತ್ತ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರು, ಐಟಿ ಸೇವೆಗಳು, ರಕ್ಷಣಾ ಮತ್ತು ಏರೋಸ್ಪೇಸ್ ವಲಯಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡುತ್ತವೆ ಮತ್ತು ಭಾರತದ ಜಿಸಿಸಿಗಳಲ್ಲಿ ಶೇ. 30 ರಷ್ಟು ಕರ್ನಾಟಕದಲ್ಲಿವೆ ಎಂದು ಹೇಳಿದರು. ಕರ್ನಾಟಕದ ಜಿಎಸ್‌ಡಿಪಿಗೆ 40% ಕ್ಕಿಂತ ಹೆಚ್ಚು ಕೊಡುಗೆ ನೀಡುವ ಬೆಂಗಳೂರು, ರಾಜ್ಯದ ಆರ್ಥಿಕ ಬೆಳವಣಿಗೆಯ ಎಂಜಿನ್ ಆಗಿದೆ ಎಂದಿದ್ದಾರೆ.