ನಿಜ್ಜರ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕಾ ಚಾರ್ಜ್‌ಶೀಟ್, 24 ಮಂದಿ ಬಂಧನ..!

2023ರ ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆಗೀಡಾದ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಚನ್ನು ಲಾರೆನ್ಸ್ ಬಿಷ್ಣೋಯ್ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ.
Lawrence Bishnoi, Goldy Brar charged in Hardeep Singh Nijjar murder.File
ಲಾರೆನ್ಸ್ ಬಿಷ್ಣೋಯ್
Updated on

ವಾಷಿಂಗ್ಟನ್: ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡು ಬಂದಿದ್ದು, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹಾಗೂ ಆತನ ಆಪ್ತ ಸಹಚರ ಸತೀಂದರ್‌ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ವಿರುದ್ಧ ಅಮೆರಿಕ ಫೆಡರಲ್ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ

ಇದೇ ವೇಳೆ ಭಾರತ ಮೂಲದ ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಜಾಲಗಳ ವಿರುದ್ಧ ಅಮೆರಿಕ, ಕೆನಡಾ ಮತ್ತು ಯುರೋಪಿನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ 'ಆಪರೇಷನ್ ಹಾರ್ಡ್‌ಬಾಲ್' ಕಾರ್ಯಾಚರಣೆಯಲ್ಲಿ 24 ಮಂದಿಯನ್ನು ಬಂಧಿಸಿದ್ದು, ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ.

ಆರೋಪಪಟ್ಟಿಯ ಪ್ರಕಾರ, 2023ರ ಜೂನ್ 18ರಂದು ಕೆನಡಾದ ಬ್ರಿಟಿಷ್ ಕೊಲಂಬಿಯಾದ ಸರ್ರೆಯ ಗುರುದ್ವಾರದ ಹೊರಗೆ ಗುಂಡಿಕ್ಕಿ ಹತ್ಯೆಗೀಡಾದ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಸಂಚನ್ನು ಲಾರೆನ್ಸ್ ಬಿಷ್ಣೋಯ್ ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯದ ದಾಖಲೆಗಳಲ್ಲಿ ನಿಜ್ಜರ್ ಅವರನ್ನು "H.S.N." ಎಂದು ಉಲ್ಲೇಖಿಸಲಾಗಿದೆ.

ಈ ಆರೋಪಗಳನ್ನು ಅಮೆರಿಕ "ಆಪರೇಷನ್ ಹಾರ್ಡ್‌ಬಾಲ್" ಹೆಸರಿನ ಬಹುರಾಷ್ಟ್ರೀಯ ಕಾನೂನು ಜಾರಿ ಕಾರ್ಯಾಚರಣೆಯೊಂದಿಗೆ ಪ್ರಕಟಿಸಿದೆ.

ಅಮೆರಿಕ, ಕೆನಡಾ ಹಾಗೂ ಯುರೋಪಿನ ತನಿಖಾ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಒಟ್ಟು 24 ಮಂದಿಯನ್ನು ಬಂಧಿಸಲಾಗಿದೆ.

ಇವರಲ್ಲಿ 11 ಮಂದಿ ಕ್ಯಾಲಿಫೋರ್ನಿಯಾದಲ್ಲಿ ಬಂಧಿತರಾಗಿದ್ದು, ಕೊಲೆ, ಸುಲಿಗೆ, ಮಾದಕವಸ್ತು ಕಳ್ಳಸಾಗಣೆ ಹಾಗೂ ಸಂಘಟಿತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದ ಭಾರತ ಮೂಲದ ಮೂರು ಅಪರಾಧ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.

Lawrence Bishnoi, Goldy Brar charged in Hardeep Singh Nijjar murder.File
ಕೆನಡಾ ಸರ್ಕಾರಕ್ಕೆ ದೊಡ್ಡ ಹಿನ್ನಡೆ: ನಿಜ್ಜರ್ ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳಿಗೆ ಜಾಮೀನು!

ಅಮೆರಿಕದ ಸಹಾಯಕ ಅಟಾರ್ನಿ ಬಿಲ್ ಎಸ್ಸೇಲಿ ಮಾತನಾಡಿ, "ಅಮೆರಿಕ, ಕೆನಡಾ, ಯುರೋಪ್ ಮತ್ತು ಏಷ್ಯಾದ ಕಾನೂನು ಜಾರಿ ಸಂಸ್ಥೆಗಳು ಈ ಅಪರಾಧ ಜಾಲಗಳನ್ನು ಎಲ್ಲಿ ಅಡಗಿದ್ದರೂ ಪತ್ತೆಹಚ್ಚಿ ಸಂಪೂರ್ಣವಾಗಿ ನಾಶಪಡಿಸಲು ಬದ್ಧವಾಗಿವೆ. ಇಂತಹ ಅಪರಾಧಿಗಳಿಗೆ ಜಗತ್ತಿನ ಯಾವುದೇ ಭಾಗ ಸುರಕ್ಷಿತ ತಾಣವಾಗುವುದಿಲ್ಲ," ಎಂದು ಹೇಳಿದ್ದಾರೆ.

ಮಂಗಳವಾರ ಬಹಿರಂಗಗೊಂಡ ಮೂರು ಫೆಡರಲ್ ಆರೋಪಪಟ್ಟಿಗಳಲ್ಲಿ ಒಟ್ಟು 37 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಭಾರತದ ಜೈಲಿನಲ್ಲಿದ್ದೇ ಅಂತರರಾಷ್ಟ್ರೀಯ ಅಪರಾಧ ಜಾಲಗಳನ್ನು ಮುನ್ನಡೆಸಿದ ಇಬ್ಬರು ಪ್ರಮುಖ ಆರೋಪಿಗಳೂ ಈ ಪಟ್ಟಿಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಬಂಧಿತರಲ್ಲಿ 13 ಮಂದಿ ಅಮೆರಿಕದಲ್ಲಿ, 3 ಮಂದಿ ಕೆನಡಾದಲ್ಲಿ, 1 ವ್ಯಕ್ತಿ ಸ್ಪೇನ್‌ನಲ್ಲಿ ಬಂಧಿತರಾಗಿದ್ದಾರೆ. ಈಗಾಗಲೇ 7 ಮಂದಿ ಬಂಧನದಲ್ಲಿದ್ದು, ಇನ್ನೂ 10 ಮಂದಿ ಪರಾರಿಯಾಗಿದ್ದಾರೆ. ಇವರಲ್ಲಿ 7 ಮಂದಿ ಅಮೆರಿಕದಲ್ಲಿ, 2 ಮಂದಿ ಭಾರತದಲ್ಲಿ ಹಾಗೂ 1 ವ್ಯಕ್ತಿ ಯುರೋಪಿನಲ್ಲಿ ಅಡಗಿರುವ ಶಂಕೆ ವ್ಯಕ್ತವಾಗಿದೆ. ಲಾರೆನ್ಸ್ ಬಿಷ್ಣೋಯ್ ಪ್ರಸ್ತುತ ಭಾರತದ ಜೈಲಿನಲ್ಲಿದ್ದರೆ, ಗೋಲ್ಡಿ ಬ್ರಾರ್ ಇನ್ನೂ ತಲೆಮರೆಸಿಕೊಂಡಿದ್ದಾನೆ.

ವರ್ಷಗಳ ಕಾಲ ನಡೆದ ತನಿಖೆಯ ಬಳಿಕ ಈ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಗ್ಯಾಂಗ್‌ಗಳು ಸುಲಿಗೆ, ಹತ್ಯೆ, ಮಾದಕವಸ್ತು ಕಳ್ಳಸಾಗಣೆ, ಸಂಘಟಿತ ಅಪರಾಧ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದವು ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ಈ ಜಾಲಗಳು ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯ ಮೂಲದ ಸಮುದಾಯಗಳ ಮೇಲೂ ಪ್ರಭಾವ ಬೀರಿದ್ದವು ಎಂದು ಹೇಳಲಾಗಿದೆ.

ನಿಜ್ಜರ್ ಹತ್ಯೆ ಪ್ರಕರಣ ಭಾರತ-ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ತೀವ್ರ ಬಿಕ್ಕಟ್ಟಿಗೆ ಕಾರಣವಾಗಿತ್ತು. ಆಗಿನ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ ಅವರು ಈ ಹತ್ಯೆಯಲ್ಲಿ ಭಾರತೀಯ ಸರ್ಕಾರದ ಪಾತ್ರ ಇರಬಹುದೆಂದು ಆರೋಪಿಸಿದ್ದರು. ಭಾರತವು ಈ ಆರೋಪವನ್ನು "ಆಧಾರರಹಿತ ಹಾಗೂ ರಾಜಕೀಯ ಪ್ರೇರಿತ" ಎಂದು ತಳ್ಳಿಹಾಕಿತ್ತು.

ಅಮೆರಿಕದ ಎಫ್‌ಬಿಐ ಲಾಸ್ ಏಂಜಲೀಸ್ ಕಚೇರಿಯ ಸಹಾಯಕ ನಿರ್ದೇಶಕ ಪ್ಯಾಟ್ರಿಕ್ ಗ್ರ್ಯಾಂಡಿ ಮಾತನಾಡಿ, "ಇಂದಿನ ಜಂಟಿ ಕಾರ್ಯಾಚರಣೆ ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಹಿಂಸಾಚಾರ, ಬೆದರಿಕೆ ಹಾಗೂ ಸುಲಿಗೆಯ ಮೂಲಕ ಜನರನ್ನು ಭೀತಿಗೊಳಿಸಿದ್ದ ಮೂರು ಕ್ರೂರ ಅಂತರರಾಷ್ಟ್ರೀಯ ಅಪರಾಧ ಸಂಘಟನೆಗಳ ವಿರುದ್ಧದ ನಿರ್ಣಾಯಕ ಕ್ರಮವಾಗಿದೆ," ಎಂದು ಹೇಳಿದ್ದಾರೆ.

ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸ್ (RCMP) ಆಯುಕ್ತ ಮೈಕ್ ಡುಹೇಮ್ ಅವರು ಮಾತನಾಡಿ, "ಕೆನಡಾ ಹಾಗೂ ಅಮೆರಿಕದಲ್ಲಿ ಕೊಲೆ, ಕ್ರೌರ್ಯ ಮತ್ತು ಭಯದ ಮೂಲಕ ಜನರನ್ನು ನಿಯಂತ್ರಿಸುತ್ತಿದ್ದ ಸಂಘಟಿತ ಅಪರಾಧ ಜಾಲಗಳ ಕಾರ್ಯಾಚರಣೆಗೆ ದೊಡ್ಡ ಹೊಡೆತ ನೀಡಲಾಗಿದೆ. ಸಾರ್ವಜನಿಕ ಸುರಕ್ಷತೆಗಾಗಿ ನಮ್ಮ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com