ಎಸ್ ಜಾನಕಿ  
ರಾಜ್ಯ

ಎಸ್ ಜಾನಕಿಯವರ ನೆನಪು ಚಿರಸ್ಥಾಯಿಯಾಗಿ ಉಳಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ: CM ಡಿ ಕೆ ಶಿವಕುಮಾರ್-Video

ಜಾನಕಿಯವರ ಸಂಗೀತ ಪರಂಪರೆಯನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭಾನುವಾರ ತಿಳಿಸಿದ್ದಾರೆ.

ಬೆಂಗಳೂರು: ಭಾರತದ ದಿಗ್ಗಜ ಹಿನ್ನೆಲೆ ಗಾಯಕಿ ಎಸ್. ಜಾನಕಿ ಅವರಿಗೆ ರಾಜ್ಯ ಸರ್ಕಾರ ಸಂಪೂರ್ಣ ರಾಜ್ಯ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಿದೆ. ಅವರ ಸಂಗೀತ ಪರಂಪರೆಯನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಭಾನುವಾರ ತಿಳಿಸಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಎಸ್. ಜಾನಕಿ ಅವರು ನಿನ್ನೆ ಶನಿವಾರ ಸಾಯಂಕಾಲ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.

ಕುಟುಂಬದ ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಇಂದು ಸಂಜೆ ನೆರವೇರಲಿದೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅಂತ್ಯಕ್ರಿಯೆಗೆ ಮುನ್ನ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಮೈಸೂರಿನಲ್ಲಿ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಬಳಿಕ ಸಂಪೂರ್ಣ ರಾಜ್ಯ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ, ಜಾನಕಿ ಅವರ ಸಂಗೀತ ಪರಂಪರೆಯನ್ನು ಶಾಶ್ವತಗೊಳಿಸುವ ಕುರಿತು ಚಿತ್ರರಂಗದ ಗಣ್ಯರೊಂದಿಗೆ ಚರ್ಚೆ ನಡೆಸುವುದಾಗಿ ಹೇಳಿದರು.

ಭಾರತದ ಅತ್ಯಂತ ಶ್ರೇಷ್ಠ ಸಂಗೀತ ವ್ಯಕ್ತಿತ್ವಗಳಲ್ಲಿ ಒಬ್ಬರು, 'ಗಾನ ಕೋಗಿಲೆ' ಎಂದೇ ಪ್ರಸಿದ್ಧರಾದ ಎಸ್. ಜಾನಕಿ ಅವರು ಇಂದು ನಮ್ಮೊಂದಿಗಿಲ್ಲ. ಸುಮಾರು 50 ವರ್ಷಗಳ ಕಾಲ ಎಲ್ಲ ಭಾಷೆಗಳ ಚಿತ್ರರಂಗಕ್ಕೆ ಅವರು ಅಪಾರ ಸೇವೆ ಸಲ್ಲಿಸಿದ್ದಾರೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಚೆನ್ನೈ ಅಥವಾ ಹೈದರಾಬಾದ್ ಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಿದ್ದೆ

ನಿನ್ನೆಯೇ ಜಾನಕಿ ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದಾಗಿ ತಿಳಿಸಿದ ಅವರು, ಅವರ ಪಾರ್ಥಿವ ಶರೀರವನ್ನು ಚೆನ್ನೈ ಅಥವಾ ಹೈದರಾಬಾದ್‌ಗೆ ಕೊಂಡೊಯ್ಯಲು ಸರ್ಕಾರ ಎಲ್ಲ ವ್ಯವಸ್ಥೆ ಮಾಡುವುದಾಗಿ ತಿಳಿಸಿದ್ದೆ ಎಂದು ಹೇಳಿದರು.

ನೀವು ಚೆನ್ನೈಗೆ ಕೊಂಡೊಯ್ಯಲು ಬಯಸಿದರೆ ವ್ಯವಸ್ಥೆ ಮಾಡುತ್ತೇನೆ, ಹೈದರಾಬಾದ್‌ಗೆ ಕೊಂಡೊಯ್ಯಲು ಬಯಸಿದರೆ ವಿಶೇಷ ವಿಮಾನದಲ್ಲಿ ಕಳುಹಿಸುತ್ತೇನೆ ಎಂದು ಕೇಳಿದೆ. ಆದರೆ ಕುಟುಂಬದವರು, 'ನಮ್ಮ ಅಜ್ಜಿಯ ಕೊನೆಯ ಆಸೆ ಮೈಸೂರಿನಲ್ಲೇ ಉಳಿಯುವುದು' ಎಂದು ಹೇಳಿದರು. ಅದಕ್ಕಾಗಿಯೇ ಅವರನ್ನು ಮೈಸೂರಿಗೆ ಕರೆತಂದಿದ್ದಾರೆ ಎಂದು ಹೇಳಿದರು.

ಇಂದು ಅಪರಾಹ್ನವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಪರವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ನಿಗದಿತ ಕಾರ್ಯಕ್ರಮವನ್ನು ರದ್ದುಗೊಳಿಸಿ ಮೈಸೂರಿಗೆ ತೆರಳುವಂತೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಭಾರತೀಯ ಸಂಗೀತ ಕ್ಷೇತ್ರಕ್ಕೆ ಎಸ್. ಜಾನಕಿ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಿದ ಡಿ ಕೆ ಶಿವಕುಮಾರ್, ಅವರು ನಾಲ್ಕು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 33 ರಾಜ್ಯ ಪ್ರಶಸ್ತಿಗಳು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ ಎಂದು ಹೇಳಿದರು.

ಕರ್ನಾಟಕದೊಂದಿಗೆ ಜಾನಕಿ ಅವರು ಹೊಂದಿದ್ದ ಭಾವನಾತ್ಮಕ ನಂಟನ್ನೂ ಅವರು ಉಲ್ಲೇಖಿಸಿದರು. ನಮ್ಮ ಭಾಷೆ, ನಮ್ಮ ನಾಡು ಹಾಗೂ ಮೈಸೂರಿನ ಮೇಲಿದ್ದ ಅವರ ಅಪಾರ ಪ್ರೀತಿ ಕೊನೆಯ ಉಸಿರಿನವರೆಗೂ ಉಳಿದಿತ್ತು. ಇದು ನಮ್ಮೆಲ್ಲರಿಗೂ ಅಪಾರ ಹೆಮ್ಮೆ. ಅವರ ಮೊದಲ ಹಾಡು ಮತ್ತು ಕೊನೆಯ ಹಾಡು ಎರಡೂ ಮೈಸೂರಿನಲ್ಲೇ ದಾಖಲಾಗಿರುವುದು ವಿಶೇಷ ಸಂಗತಿ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಚಿತ್ರರಂಗದ ಪ್ರಮುಖರೊಂದಿಗೆ ಸಭೆ ನಡೆಸಿ, ಎಸ್. ಜಾನಕಿ ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಮುಖ್ಯಮಂತ್ರಿ ತಿಳಿಸಿದರು.

ಚಿತ್ರರಂಗದ ಸದಸ್ಯರೊಂದಿಗೆ ಚರ್ಚಿಸಿ, ಅವರ ನೆನಪು ಎಂದೆಂದಿಗೂ ಉಳಿಯುವಂತೆ ಇನ್ನೇನು ಮಾಡಬಹುದು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಜಾನಕಿ ಹಿನ್ನೆಲೆ

'ದಕ್ಷಿಣ ಭಾರತದ ಗಾನ ಕೋಗಿಲೆ' ಎಂದೇ ಖ್ಯಾತರಾಗಿದ್ದ ಎಸ್. ಜಾನಕಿ ಅವರು ಆರು ದಶಕಗಳಿಗೂ ಅಧಿಕ ಅವಧಿಯ ತಮ್ಮ ಸಂಗೀತ ಜೀವನದಲ್ಲಿ ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಸೇರಿದಂತೆ ಸುಮಾರು 20 ಭಾರತೀಯ ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

1938ರಲ್ಲಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಜನಿಸಿದ ಜಾನಕಿ ಅವರು 1957ರಲ್ಲಿ ಬಿಡುಗಡೆಯಾದ ತಮಿಳು ಚಿತ್ರ 'ವಿಧಿಯಿನ್ ವಿಲೈಯಾಟ್ಟು' ಮೂಲಕ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನ ಆರಂಭಿಸಿದರು.

ಕರ್ನಾಟಕದಲ್ಲಿ ಅವರಿಗೆ ಅಪಾರ ಅಭಿಮಾನಿ ಬಳಗವಿದ್ದು, 'ಗಾನ ಕೋಗಿಲೆ' ಎಂದೇ ಜನಪ್ರಿಯರಾಗಿದ್ದರು. ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಡಾ. ರಾಜ್‌ಕುಮಾರ್ ಅವರೊಂದಿಗೆ ಹಾಡಿದ ಅನೇಕ ಯುಗಳಗೀತೆಗಳು ಇಂದಿಗೂ ಜನಮನದಲ್ಲಿ ಅಚ್ಚಳಿಯದೆ ಉಳಿದಿವೆ.

2013ರಲ್ಲಿ ಅವರಿಗೆ ಘೋಷಿಸಲಾದ ಪದ್ಮಭೂಷಣ ಪ್ರಶಸ್ತಿಯನ್ನು ಗೌರವ ತಡವಾಗಿ ನೀಡಲಾಗಿದೆ ಎಂದು ಹೇಳಿ ಸ್ವೀಕರಿಸಲು ಅವರು ನಿರಾಕರಿಸಿದ್ದರು.

ಮೈಸೂರಿನಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ಎಸ್. ಜಾನಕಿ ಅವರ ಪಾರ್ಥಿವ ಶರೀರಕ್ಕೆ ಸಾವಿರಾರು ಅಭಿಮಾನಿಗಳು ಅಂತಿಮ ನಮನ ಸಲ್ಲಿಸಿದರು.

ಮೈಸೂರಿನ ಕಣಿಯನಹುಂಡಿಯಲ್ಲಿ ನಡೆಯಲಿರುವ ಅವರ ಅಂತ್ಯಕ್ರಿಯೆಗೆ ಅಗತ್ಯ ಸಿದ್ಧತೆಗಳು ನಡೆಯುತ್ತಿದ್ದು, ಹಿರಿಯ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಮೇಲ್ವಿಚಾರಣೆ ವಹಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಓಮನ್ ಕರಾವಳಿಯಲ್ಲಿ 11 ಭಾರತೀಯರಿದ್ದ ಹಡಗಿನ ಮೇಲೆ ದಾಳಿಗೆ ಭಾರತ ಖಂಡನೆ; 10 ಜನರ ರಕ್ಷಣೆ, ಓರ್ವ ನಾಪತ್ತೆ

Iranಗೆ ಅಮೆರಿಕಾ ಬಿಗ್ ಶಾಕ್: 140 ಗುರಿಗಳ ಮೇಲೆ ಭಾರೀ ವೈಮಾನಿಕ ದಾಳಿ; Gulf ರಾಷ್ಟ್ರಗಳತ್ತ ಕ್ಷಿಪಣಿ ಹಾರಿಸಿ Tehran ತಿರುಗೇಟು..!

KSRTC ಬಸ್‌ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ: ಆರೋಪಿಗೆ ಧರ್ಮದೇಟು, ವಿಡಿಯೋ ವೈರಲ್

ಬಂಗಾಳ ಕೊಲ್ಲಿಯಲ್ಲಿ ಭೂಕಂಪ: ವಿಶಾಖಪಟ್ಟಣಂನಲ್ಲೂ ನಡುಗಿದ ಭೂಮಿ, ರಿಕ್ಟರ್ ಮಾಪಕದಲ್ಲಿ 4.5 ತೀವ್ರತೆ ದಾಖಲು..!

ಶೌಚಾಲಯ ಬಳಸುವ ನೆಪದಲ್ಲಿ ಮನೆಗೆ ನುಗ್ಗಿದ ಡೆಲಿವರಿ ಬಾಯ್: ಮಹಿಳೆಗೆ ಕಿರುಕುಳ, Video ವೈರಲ್