ಆರ್‌ಎಸ್‌ಎಸ್ 
ರಾಜ್ಯ

ರಾಮ ಮಂದಿರ ದೇಣಿಗೆ ಅಕ್ರಮ ಆರೋಪ: SIT ತನಿಖೆಯಿಂದಲೇ ಸತ್ಯ ಹೊರಬರಲಿದೆ; RSS

ಇಂತಹ ಘಟನೆಗಳು ಮರುಕಳಿಸದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಇದರಿಂದ ಕೋಟ್ಯಂತರ ರಾಮಭಕ್ತರ ದೇವಸ್ಥಾನದ ಮೇಲಿರುವ ಭಕ್ತಿ ಮತ್ತು ವಿಶ್ವಾಸ ಅಚಲವಾಗಿ ಉಳಿಯಲಿದೆ.

ಬೆಳಗಾವಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಮಂದಿರದ ದೇಣಿಗೆ ಹುಂಡಿಗಳ ಹಣ ಎಣಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ನಡೆಯುತ್ತಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ತನಿಖೆಯಿಂದ ಸತ್ಯಾಂಶ ಹೊರಬರಲಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ವಿಶ್ವಾಸ ವ್ಯಕ್ತಪಡಿಸಿದೆ.

ಬೆಳಗಾವಿಯಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಾರ್ಷಿಕ ಅಖಿಲ ಭಾರತೀಯ ಪ್ರಾಂತ ಪ್ರಚಾರಕ ಬೈಠಕ್ ಭಾನುವಾರ ಮುಕ್ತಾಯಗೊಂಡಿತು. ದೇಶದ ಸಮಕಾಲೀನ ಬೆಳವಣಿಗೆಗಳು ಹಾಗೂ ಸಂಘಟನೆಯ ಮುಂದಿನ ಕಾರ್ಯತಂತ್ರ ಸೇರಿದಂತೆ ಹಲವು ಮಹತ್ವದ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್, ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ಮಂದಿರದ ದೇಣಿಗೆ ಹುಂಡಿಗಳ ಹಣ ಎಣಿಕೆಯಲ್ಲಿ ನಡೆದಿರುವ ಅಕ್ರಮ ಆರೋಪಗಳ ಕುರಿತು ಸಭೆಯಲ್ಲಿ ಕಳವಳ ವ್ಯಕ್ತವಾಗಿದೆ ಎಂದು ಹೇಳಿದರು.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಮನವಿಯ ಮೇರೆಗೆ ಆರಂಭಿಸಲಾಗಿರುವ ವಿಶೇಷ ತನಿಖಾ ದಳ (ಎಸ್‌ಐಟಿ) ಹಾಗೂ ಪೊಲೀಸ್ ತನಿಖೆ ನಿರ್ಣಾಯಕ ಹಂತಕ್ಕೆ ತಲುಪುವ ನಿರೀಕ್ಷೆಯಿದ್ದು, ತನಿಖೆಯಿಂದ ಪ್ರಕರಣದ ನೈಜ ಸತ್ಯಾಂಶ ಹೊರಬರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಇಂತಹ ಘಟನೆಗಳು ಮರುಕಳಿಸದಂತೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು. ಇದರಿಂದ ಕೋಟ್ಯಂತರ ರಾಮಭಕ್ತರ ದೇವಸ್ಥಾನದ ಮೇಲಿರುವ ಭಕ್ತಿ ಮತ್ತು ವಿಶ್ವಾಸ ಅಚಲವಾಗಿ ಉಳಿಯಲಿದೆ ಎಂದು ಹೇಳಿದರು.

ಸಭೆಯಲ್ಲಿ ಜನಗಣತಿ, ಜನಸಂಖ್ಯಾ ಅಸಮತೋಲನ ಹಾಗೂ ಅದರಿಂದ ಎದುರಾಗುವ ಸವಾಲುಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.

ಹೆಚ್ಚುತ್ತಿರುವ ಮಾದಕ ವ್ಯಸನದ ಸಮಸ್ಯೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಸದಸ್ಯರು, ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕು ಹಾಗೂ ತಡೆಗಟ್ಟುವ ಕ್ರಮಗಳನ್ನು ಮತ್ತಷ್ಟು ಬಲಪಡಿಸಬೇಕೆಂದು ಅಭಿಪ್ರಾಯಪಟ್ಟರು.

ಇದೇ ವೇಳೆ, ಸಂತ ಶಿರೋಮಣಿ ರವಿದಾಸ್ ಮಹಾರಾಜರ 650ನೇ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳ ಬಗ್ಗೆಯೂ ಚರ್ಚೆ ನಡೆಯಿತು.

2026ರ ಮಾರ್ಚ್ ನಂತರ ದೇಶದ ವಿವಿಧ ಭಾಗಗಳಲ್ಲಿ ಆರ್‌ಎಸ್‌ಎಸ್ ನಡೆಸಿದ ತರಬೇತಿ ಕಾರ್ಯಕ್ರಮಗಳ ಪರಿಶೀಲನೆಯನ್ನೂ ಸಭೆಯಲ್ಲಿ ಕೈಗೊಳ್ಳಲಾಯಿತು.

ಈ ವರ್ಷ ದೇಶಾದ್ಯಂತ 83 ಸಂಘ ಶಿಕ್ಷಣ ವರ್ಗಗಳು ಹಾಗೂ 12 ಕಾರ್ಯಕರ್ತ ಅಭಿವೃದ್ಧಿ ವರ್ಗಗಳು ಆಯೋಜಿಸಲಾಗಿದ್ದು, ಒಟ್ಟು 18,842 ಸ್ವಯಂಸೇವಕರು ತರಬೇತಿ ಪಡೆದಿದ್ದಾರೆ ಎಂದು ಸುನೀಲ್ ಅಂಬೇಕರ್ ತಿಳಿಸಿದರು.

ಈ ತರಬೇತಿ ಕಾರ್ಯಕ್ರಮಗಳಲ್ಲಿ ಶಾಖೆ ನಿರ್ವಹಣೆ, ಸಂಘಟನಾ ಕಾರ್ಯಪದ್ಧತಿ, ಗ್ರಾಮಾಭಿವೃದ್ಧಿ, ಕುಟುಂಬ ಜಾಗೃತಿ, ವಿಪತ್ತು ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ ಮೊದಲಾದ ವಿಷಯಗಳಿಗೆ ಒತ್ತು ನೀಡಲಾಗಿದೆ ಎಂದರು.

ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ಆರ್‌ಎಸ್‌ಎಸ್ ಶಾಖೆಗಳ ವಿಸ್ತರಣೆ, ಶತಮಾನೋತ್ಸವ ವರ್ಷದಲ್ಲಿ ನಡೆದ ಕಾರ್ಯಕ್ರಮಗಳ ಪರಿಶೀಲನೆ ಹಾಗೂ ಉಳಿದ ಕಾರ್ಯಕ್ರಮಗಳ ಕಾರ್ಯಯೋಜನೆ ಕುರಿತಂತೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಶತಮಾನೋತ್ಸವದ ಸಂದರ್ಭದಲ್ಲಿ ಸಂಘದೊಂದಿಗೆ ಸಂಪರ್ಕಕ್ಕೆ ಬಂದಿರುವ ಜನರನ್ನು ಸಮಾಜಸೇವೆ ಹಾಗೂ 'ಪಂಚ ಪರಿವರ್ತನ' ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಬಗ್ಗೆಯೂ ಕಾರ್ಯತಂತ್ರ ರೂಪಿಸಲಾಯಿತು.

2026–27ನೇ ಸಾಲಿನಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರ ದೇಶವ್ಯಾಪಿ ಪ್ರವಾಸದ ರೂಪುರೇಷೆಗಳನ್ನೂ ಸಭೆಯಲ್ಲಿ ಪರಿಶೀಲಿಸಲಾಯಿತು.

ಸಭೆಯಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್, ದತ್ತಾತ್ರೇಯ ಹೊಸಬಾಳೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 226 ಮಂದಿ ಸಂಘದ ಪ್ರಮುಖ ಕಾರ್ಯಕರ್ತರು ಭಾಗವಹಿಸಿದ್ದರು ಎಂದು ಸುನೀಲ್ ಅಂಬೇಕರ್ ಮಾಹಿತಿ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US-Iran ಸಂಘರ್ಷ ತೀವ್ರ: Hormuz ಜಲಸಂಧಿ ಬಳಿ ಅಮೆರಿಕ ಭೀಕರ ವೈಮಾನಿಕ ದಾಳಿ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ..!

ಬದಲಾದ ಸಂಸತ್ ಬಲಾಬಲದ ನಡುವೆ ಮುಂಗಾರು ಅಧಿವೇಶನ; ಜು.19 ರಂದು ಸರ್ವಪಕ್ಷಗಳ ಸಭೆ; ಜಿದ್ದಾಜಿದ್ದಿನ ರಾಜಕೀಯಕ್ಕೆ ವೇದಿಕೆ ಸಜ್ಜು..!

ಅಲಿ ಖಮೇನಿ ಅಂತ್ಯಕ್ರಿಯೆಯಲ್ಲಿ ನಿಗೂಢ ಮಾಸ್ಕ್ ಮ್ಯಾನ್! ಕೊನೆಗೂ ಗುರುತು ಬಹಿರಂಗ

2028 ವಿಧಾನಸಭಾ ಚುನಾವಣೆ: BJP ಬಣ ಬಡಿದಾಟದ ಲಾಭ JDSಗೆ?; NDA ಸಿಎಂ ರೇಸ್‌ನಲ್ಲಿ ಕುಮಾರಸ್ವಾಮಿ ಹೆಸರು ಮುನ್ನೆಲೆಗೆ..!

Bangkok pubನಲ್ಲಿ ಭೀಕರ ಅಗ್ನಿ ಅವಘಡ; 27 ಮಂದಿ ಸಜೀವ ದಹನ; 63ಕ್ಕೂ ಹೆಚ್ಚು ಮಂದಿಗೆ ಗಾಯ, ವಿದ್ಯುತ್ ದೋಷವೇ ದುರಂತಕ್ಕೆ ಕಾರಣ?