ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ನಾವು ಪ್ರತಿಯೊಬ್ಬರೂ ಚಿಂತೆ ಮಾಡಬೇಕು, ಸುಮಾರು 100ಕ್ಕೂ ಹೆಚ್ಚು ಸಂದರ್ಭಗಳಲ್ಲಿ ದೇಶದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಇಡೀ ದೇಶದ ಯುವಕರು ಭಾರತದ ಭವಿಷ್ಯದ ಬಗ್ಗೆ ಯೋಚನೆ ಮಾಡುತ್ತಿದ್ದಾರೆ. ಭಾರತ ದೇಶದ ಪ್ರತಿಭಾನ್ವಿತರ ಕೇಂದ್ರ, ವಿಶ್ವದಲ್ಲಿಯೇ ಅತಿ ಹೆಚ್ಚಿನ ಪ್ರತಿಭಾವಂತರು ಇರುವುದು ನಮ್ಮ ಭಾರತದಲ್ಲಿ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ್ಮಲ್ಲಿರುವ ಪ್ರತಿಭಾನ್ವಿತರಂತೆ ಇಡೀ ವಿಶ್ವದಲ್ಲಿ ಎಲ್ಲಿಯೂ ಇಲ್ಲದಿರುವಾಗ ಶಿಕ್ಷಣದಲ್ಲಿ ಗುಣಮಟ್ಟ ಕಾಪಾಡದಿದ್ದರೆ ಈ ರೀತಿ ಪ್ರಶ್ನೆಪತ್ರಿಕೆ ಸೋರಿಕೆಯಾದಾಗ ಯಾರೂ ಜವಾಬ್ದಾರಿ ತೆಗೆದುಕೊಳ್ಳದಿದ್ದರೆ ಯಾರು ಹೊಣೆ ಎಂದು ಕೇಳಿದರು.
ಯುವಜನತೆ ಮಕ್ಕಳ ಭವಿಷ್ಯ ಹಾಳಾಗಬಾರದೆಂದು ಸ್ವಂತ ಇಚ್ಛೆಯಿಂದ ಪ್ರತಿಭಟನೆಗೆ ಹೊರಟಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದು ಎಲ್ಲರ ಹಕ್ಕು, ಹೀಗಿರುವಾಗ ಯುವಕರ ಮೇಲೆ ಲಾಠಿ ಚಾರ್ಚ್ ಮಾಡಿ ತೊಂದರೆ ಕೊಟ್ಟರೆ ಹೇಗೆ ಎಂದು ಕೇಳಿದರು.ಪ್ರಧಾನ ಮಂತ್ರಿಯವರು ಇಷ್ಟು ತಡವಾಗಿ ಏಕೆ ಟ್ವೀಟ್ ಮಾಡಿದರು, ಮೊದಲೇ ಎಚ್ಚೆತ್ತುಕೊಳ್ಳಬೇಕಿತ್ತು ಎಂದರು.
ದೆಹಲಿಯಲ್ಲಿ ಪ್ರತಿಭಟನೆ ಮಾಡುವಾಗ ಮಾಧ್ಯಮದವರನ್ನು ಹತ್ತಿರ ಬರಲು ಬಿಡಲಿಲ್ಲ, ಇದನ್ನು ಮಾಧ್ಯಮದವರು ಪ್ರಶ್ನಿಸಲಿಲ್ಲವೇಕೆ, ಇಲ್ಲಿ ಮಾಧ್ಯಮದವರದ್ದೂ ತಪ್ಪಿದೆ, ನಿನ್ನೆ ನಡೆದ ಘಟನೆಯನ್ನು ನಾನು ಸಮರ್ಥಿಸಿಕೊಳ್ಳುವುದಿಲ್ಲ,ಆದರೆ ಹಿಂದೆ ಪ್ರತಿಭಟನೆ ಸಮಯದಲ್ಲಿ ಎಲ್ಲೆಲ್ಲಿ ಲಾಠಿ, ರೈಫಲ್, ಕತ್ತಿ, ಲಾಂಗ್, ಮಚ್ಚು ಸಿಕ್ಕಿತು ಎಂದು ಹೇಳಬೇಕು, ಪೊನ್ನಂಪೇಟೆ ಶಾಲೆ ಪಕ್ಕದಲ್ಲಿ ಏನು ಸಿಕ್ಕಿತು ಇವೆಲ್ಲ ಇತಿಹಾಸ ಬಿಜೆಪಿಯವರದ್ದೂ ಇದೆ ಎಂದು ಟೀಕಿಸಿದರು.
ಮೊಟ್ಟೆ ಎಸೆದವರ ಮೇಲೆ ಕ್ರಮ
ಬಿಜೆಪಿ ಶಾಸಕ ಬಿ ಪಿ ಹರೀಶ್ ಮೇಲೆ ಮೊಟ್ಟೆ ಎಸೆದ ಕ್ರಮ ಸರಿಯಲ್ಲ, ಮೊಟ್ಟೆ ಎಸೆದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೇ ಗೃಹ ಸಚಿವರು ಆದೇಶ ನೀಡಿದ್ದಾರೆ. ನೀಟ್ ವಿಚಾರದಲ್ಲಿ ಆಗಿರುವ ತಪ್ಪನ್ನು ಒಪ್ಪಿಕೊಂಡು ಧರ್ಮೇಂದ್ರ ಪ್ರಧಾನ್ ಅವರು ರಾಜೀನಾಮೆ ನೀಡಲಿ, ರಾಜೀನಾಮೆ ನೀಡುವುದರಲ್ಲಿ ತಪ್ಪೇನಿದೆ, ಇದು ದೇಶದ ಮಕ್ಕಳ ಭವಿಷ್ಯದ ಪ್ರಶ್ನೆ ಎಂದರು.
ರಾಜ್ಯದಲ್ಲಿ ಕೊತ್ವಾಲ್ ಆಡಳಿತ ನಡೆಯುತ್ತಿದೆ ಎಂಬ ವಿಪಕ್ಷ ನಾಯಕ ಆರ್ ಅಶೋಕ್ ಟೀಕೆಗೆ, ಅವರು ಏನು ಬೇಕಾದರೂ ಮಾತನಾಡಿಕೊಳ್ಳಲಿ, ನಾನು ಇಂದು ಮುಖ್ಯಮಂತ್ರಿಯಾಗಬೇಕಾದರೆ ಹಳ್ಳಿಯಲ್ಲಿ ಹುಟ್ಟಿ ವಿದ್ಯಾರ್ಥಿ ದೆಸೆಯಲ್ಲಿ ನಾಯಕನಾಗಿ ಬೆಳೆದಿದ್ದೇನೆ, ಪರಿಶುದ್ಧವಾಗಿ ರಾಜ್ಯವನ್ನು ಆಳುತ್ತಿದ್ದೇನೆ, ಆಡಳಿತ ನೀಡುತ್ತಿದ್ದೇನೆ, ಅದನ್ನು ವಿಪಕ್ಷದವರಿಂದ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ಸದ್ಯದಲ್ಲಿಯೇ ಆಗುತ್ತದೆ, ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಬ್ಯುಸಿಯಾಗಿದ್ದಾರೆ, ಅವರು ಕರೆದ ಕೂಡಲೇ ಹೋಗುತ್ತೇನೆ, ಪಟ್ಟಿ ಸಿದ್ಧವಾಗಿದೆ, ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದರು.