ಬೆಂಗಳೂರು: ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳ ಮೂಲಕ ಸಾರ್ವಜನಿಕರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪದ ಮೇಲೆ ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ (Gameskraft), ರಮ್ಮಿಟೈಮ್ (RummyTime) ಸಂಸ್ಥೆಗಳು ಹಾಗೂ ಅವುಗಳ ಸಂಸ್ಥಾಪಕರ ವಿರುದ್ಧ ಜಾರಿ ನಿರ್ದೇಶನಾಲಯ (ED) ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ಸಲ್ಲಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ದಾಖಲಿಸಲಾದ ಈ ಆರೋಪಪತ್ರದಲ್ಲಿ ವಿಕಾಸ್ ತನೇಜಾ, ಪೃಥ್ವಿರಾಜ್ ಸಿಂಗ್ ಹಾಗೂ ದೀಪಕ್ ಸಿಂಗ್ ಅಹ್ಲಾವತ್ ಅವರ ಹೆಸರನ್ನು ಉಲ್ಲೇಖಿಸಲಾಗಿದೆ.
ತೆಲಂಗಾಣದಲ್ಲಿ ದಾಖಲಾಗಿದ್ದ ವಂಚನೆಗೆ ಸಂಬಂಧಿಸಿದ ಹಲವು ಎಫ್‌ಐಆರ್‌ಗಳ ಆಧಾರದ ಮೇಲೆ ತನಿಖೆ ಆರಂಭಿಸಲಾಗಿತ್ತು ಎಂದು ಇಡಿ ತಿಳಿಸಿದೆ.
ಇಡಿ ಆರೋಪದ ಪ್ರಕಾರ, ಗೇಮ್ಸ್‌ಕ್ರಾಫ್ಟ್ ಮತ್ತು ರಮ್ಮಿಟೈಮ್ ಸಂಸ್ಥೆಗಳು ರಮ್ಮಿಕಲ್ಚರ್ (RummyCulture), ರಮ್ಮಿಪ್ರೈಮ್ (RummyPrime), ಪ್ಲೇಶಿಪ್ ರಮ್ಮಿ (Playship Rummy) ಹಾಗೂ ರಮ್ಮಿಟೈಮ್ (RummyTime) ಸೇರಿದಂತೆ ಹಲವು ಆನ್‌ಲೈನ್ ರಮ್ಮಿ ವೇದಿಕೆಗಳನ್ನು ನಡೆಸುತ್ತಿದ್ದು, ಆಟಗಾರರ ಪಣದ ಮೊತ್ತದ ಮೇಲೆ ಶೇ.10ರಿಂದ 15ರಷ್ಟು ಕಮಿಷನ್ ವಸೂಲಿ ಮಾಡುತ್ತಿದ್ದವು.
ಇದಲ್ಲದೆ, ರಮ್ಮಿಕಲ್ಚರ್ ವೇದಿಕೆಯಲ್ಲಿ ಬಳಕೆದಾರರ ವಿರುದ್ಧ ಸ್ವಯಂಚಾಲಿತ ಬಾಟ್‌ಗಳನ್ನು ಬಳಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇಡಿ ಆರೋಪಿಸಿದೆ.
ಜೊತೆಗೆ ಬೋನಸ್, ರೆಫರಲ್ ಪ್ರೋತ್ಸಾಹಧನ ಹಾಗೂ 'ಇನ್‌ಸ್ಟಂಟ್ ಕ್ಯಾಶ್' ಬಹುಮಾನಗಳಂತಹ ಆಮಿಷಗಳನ್ನು ನೀಡಿ ಬಳಕೆದಾರರನ್ನು ನಿರಂತರವಾಗಿ ಆಟವಾಡಲು ಮತ್ತು ಹೆಚ್ಚಿನ ಹಣ ಪಣಕ್ಕಿಡಲು ಪ್ರೇರೇಪಿಸಲಾಗುತ್ತಿತ್ತು ಎಂದು ಹೇಳಿದೆ.
ಹಣ ಹಿಂಪಡೆಯುವಿಕೆಗೆ ವಿಧಿಸಲಾದ ನಿರ್ಬಂಧಗಳು, ವಿವಿಧ ಶುಲ್ಕಗಳು ಹಾಗೂ ಆಕ್ರಮಣಕಾರಿ ಪ್ರಚಾರ ಯೋಜನೆಗಳಿಂದ ಬಳಕೆದಾರರು ಭಾರೀ ಆರ್ಥಿಕ ನಷ್ಟ ಮತ್ತು ಮಾನಸಿಕ ಸಂಕಷ್ಟ ಅನುಭವಿಸಿದ್ದಾರೆ ಎಂದು ಇಡಿ ಆರೋಪಿಸಿದೆ.
ಈ ಪ್ರಕರಣದಲ್ಲಿ ಸುಮಾರು 19,984 ಕೋಟಿ ರೂ. ಮೌಲ್ಯದ ಅಕ್ರಮ ಆದಾಯ (ಪ್ರೊಸೀಡ್ಸ್ ಆಫ್ ಕ್ರೈಮ್) ಪತ್ತೆಯಾಗಿದೆ ಎಂದು ಇಡಿ ಅಂದಾಜಿಸಿದ್ದು, ಆರೋಪಿಗಳು ಹಾಗೂ ಅವರಿಗೆ ಸಂಬಂಧಿಸಿದ ಸಂಸ್ಥೆಗಳ ರೂ. 2,401 ಕೋಟಿ ಮೌಲ್ಯದ ಆಸ್ತಿಗಳನ್ನು ಈಗಾಗಲೇ ಜಪ್ತಿ, ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.