ಬೆಂಗಳೂರು: ಆಗಿನ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ವಿಶೇಷವಾಗಿ ವಿನ್ಯಾಸಗೊಳಿಸಿದ ತಮ್ಮ ಕುರ್ಚಿಯನ್ನು ಹೊತ್ತು ಬೆಂಗಳೂರಿಗೆ ಬಂದು, ಆಗಿನ ಕರ್ನಾಟಕ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರೊಂದಿಗೆ ಕಾವೇರಿ ನೀರು ಹಂಚಿಕೆ ಕುರಿತು ನಡೆಸಿದ ಐತಿಹಾಸಿಕ ಮಾತುಕತೆಗೆ ಇದೀಗ 14 ವರ್ಷಗಳು ಕಳೆದಿದೆ.
ಇದೀಗ ಆಗಸ್ಟ್ 3ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮತ್ತೊಮ್ಮೆ ಕಾವೇರಿ ಜಲ ಹಂಚಿಕೆ ಕುರಿತ ಮಹತ್ವದ ಚರ್ಚೆ ನಡೆಸುವ ಸಾಧ್ಯತೆಯಿದೆ.
2012ರ ನವೆಂಬರ್‌ನಲ್ಲಿ ನಡೆದ ಆ ಸಭೆ ಕೆಲವೇ ನಿಮಿಷಗಳಲ್ಲಿ ಮುಕ್ತಾಯಗೊಂಡಿದ್ದು ಯಾವುದೇ ಫಲಿತಾಂಶ ನೀಡಿರಲಿಲ್ಲ. ಬಳಿಕ ಕಾವೇರಿ ವಿವಾದದಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಮ್ಮ ತಮ್ಮ ನಿಲುವಿನಿಂದ ಹಿಂದೆ ಸರಿದಿಲ್ಲ. ಇದು ಕೇವಲ ನೀರು ಹಂಚಿಕೆಯ ಪ್ರಶ್ನೆಯಲ್ಲ, ಎರಡೂ ರಾಜ್ಯಗಳ ರೈತರ ಭಾವನೆಗಳಿಗೆ ಸಂಬಂಧಿಸಿದ ರಾಜಕೀಯವಾಗಿ ಸೂಕ್ಷ್ಮ ವಿಚಾರವಾಗಿದೆ. ಈ ವರ್ಷ ಮುಂಗಾರು ವಿಳಂಬವಾಗಿರುವುದು ಹಾಗೂ ರೈತರು ಬೆಳೆ ಉಳಿಸಿಕೊಳ್ಳಲು ನೀರು ಬಿಡುಗಡೆ ಮಾಡುವಂತೆ ಒತ್ತಾಯಿಸುತ್ತಿರುವುದು ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿರುವ ಡಿ ಕೆ ಶಿವಕುಮಾರ್–ಜೋಸೆಫ್ ವಿಜಯ್ ಭೇಟಿಯಿಂದ ಪರಿಹಾರ ಸಿಗಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ. ತಮಿಳುನಾಡಿನ ಮುಖ್ಯಮಂತ್ರಿ ಕಾವೇರಿ ತೀರ ಪ್ರದೇಶದ ರೈತರ ಸಂಕಷ್ಟವನ್ನು ಮುಂದಿಟ್ಟು ಕರ್ನಾಟಕದಿಂದ ನೀರು ಬಿಡುಗಡೆ ಮಾಡುವಂತೆ ಮನವಿ ಮಾಡುವ ಸಾಧ್ಯತೆಯಿದೆ. ಮತ್ತೊಂದೆಡೆ, ಕರ್ನಾಟಕದ ಜಲಾಶಯಗಳಲ್ಲಿ ನೀರಿನ ಕೊರತೆ ಹಾಗೂ ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಅಗತ್ಯವನ್ನು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿವರಿಸುವ ನಿರೀಕ್ಷೆಯಿದೆ.
ಎರಡೂ ರಾಜ್ಯಗಳ ಪ್ರತಿಪಕ್ಷಗಳೂ ಈ ಬೆಳವಣಿಗೆಗಳ ಮೇಲೆ ನಿಗಾ ಇರಿಸಿದ್ದು, ರಾಜಕೀಯವಾಗಿ ರಾಜಿ ಮಾಡಿಕೊಳ್ಳಬಾರದೆಂದು ಆಡಳಿತ ಪಕ್ಷಗಳ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ.
ಮುಂಗಾರು ವಿಳಂಬದಿಂದ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದ್ದು, ಕರ್ನಾಟಕದಲ್ಲಿ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಜಿಲ್ಲೆಗಳ ಪ್ರವಾಸ ಕೈಗೊಂಡು ಸ್ಥಳದಲ್ಲೇ ಪರಿಸ್ಥಿತಿಯ ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವೂ ಆತಂಕಕಾರಿ ಸ್ಥಿತಿಯಲ್ಲಿದೆ.
ಕೆಆರ್‌ಎಸ್ ಜಲಾಶಯ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಶನಿವಾರದ ನೀರಿನ ಸಂಗ್ರಹ: 17.051 ಟಿಎಂಸಿ
ಶಾಶ್ವತ ಸಂಗ್ರಹ: 8.672 ಟಿಎಂಸಿ
ಕಬಿನಿ ಜಲಾಶಯ:
ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
ಶನಿವಾರದ ನೀರಿನ ಸಂಗ್ರಹ: 13.61 ಟಿಎಂಸಿ
ಬಳಕೆಗೆ ಲಭ್ಯವಿರುವ ನೀರಿನ ಸಂಗ್ರಹ: 3.80 ಟಿಎಂಸಿ
ಕಾವೇರಿ, ತುಂಗಾ ಹಾಗೂ ಭದ್ರಾ ನದಿಗಳ ಪ್ರಮುಖ ಜಲಾನಯನ ಪ್ರದೇಶವಾಗಿರುವ ಮಲೆನಾಡು ಭಾಗದಲ್ಲಿ ಶೇ.34ರಷ್ಟು ಮಳೆ ಕೊರತೆ ದಾಖಲಾಗಿದೆ. ಜುಲೈ 11ರ ವೇಳೆಗೆ ರಾಜ್ಯದ 31 ಜಿಲ್ಲೆಗಳ ಪೈಕಿ 18 ಜಿಲ್ಲೆಗಳಲ್ಲಿ ತೀವ್ರ ಮಳೆ ಕೊರತೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹೆಚ್ಚು ನೀರು ಬೇಕಾಗುವ ಬೆಳೆಗಳನ್ನು ಬೆಳೆಯದಂತೆ ರೈತರಿಗೆ ಮುಖ್ಯಮಂತ್ರಿ ಈಗಾಗಲೇ ಸಲಹೆ ನೀಡಿದ್ದಾರೆ.
ಸಾಮಾನ್ಯ ವರ್ಷದಲ್ಲಿ ಕರ್ನಾಟಕವು ತಮಿಳುನಾಡಿಗೆ 177.25 ಟಿಎಂಸಿ ನೀರು ಬಿಡುಗಡೆ ಮಾಡಬೇಕಾಗುತ್ತದೆ. ಆದರೆ ಬರಗಾಲ ವರ್ಷಗಳಲ್ಲಿ ನೀರಿನ ಹಂಚಿಕೆಗೆ ವೈಜ್ಞಾನಿಕ ಸೂತ್ರವನ್ನು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅಥವಾ 2018ರ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟಪಡಿಸಿಲ್ಲ.
ಈ ಕಾರಣದಿಂದಲೇ 'ಬರ ಹಂಚಿಕೆ ಸೂತ್ರ' ರೂಪಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ರಾಜ್ಯ ಸರ್ಕಾರ ಹಾಗೂ ನೀರಾವರಿ ತಜ್ಞರ ಅಭಿಪ್ರಾಯದಲ್ಲಿ, ಬೆಂಗಳೂರಿನಿಂದ ಸುಮಾರು 100 ಕಿ.ಮೀ. ದೂರದ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಲು ಉದ್ದೇಶಿಸಿರುವ 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಸಮತೋಲನ ಜಲಾಶಯ ಈ ಸಮಸ್ಯೆಗೆ ದೀರ್ಘಕಾಲೀನ ಪರಿಹಾರವಾಗಲಿದೆ.
ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಲವಾರು ಬಾರಿ ಈ ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡಿಗೇ ಹೆಚ್ಚು ಅನುಕೂಲಕರವಾಗಲಿದೆ ಎಂದು ಪ್ರತಿಪಾದಿಸಿದ್ದಾರೆ. ಬರದ ವರ್ಷಗಳಲ್ಲಿಯೂ ನೀರು ಬಿಡುಗಡೆ ಮಾಡಲು ಇದು ನೆರವಾಗಲಿದೆ ಎಂಬುದು ಅವರ ವಾದ. ಆದರೆ ತಮಿಳುನಾಡು ಈ ಯೋಜನೆಯನ್ನು ತೀವ್ರವಾಗಿ ವಿರೋಧಿಸುತ್ತಿದೆ.
ಈ ಸಭೆಯಲ್ಲೇ ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ನಿರೀಕ್ಷಿಸುವುದು ಅತಿಯಾದ ಆಶಾವಾದವಾಗಬಹುದು. ಆದರೆ 14 ವರ್ಷಗಳ ಬಳಿಕ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಯಲ್ಲಿ ಕುಳಿತು ಮಾತುಕತೆ ನಡೆಸಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ರಾಜಕೀಯವಾಗಿ ಒಂದೇ ಮೈತ್ರಿಕೂಟಕ್ಕೆ ಸೇರಿದ ಪಕ್ಷಗಳ ಮುಖ್ಯಮಂತ್ರಿಗಳಾಗಿರುವುದರಿಂದ ಸಂವಾದಕ್ಕೆ ಅನುಕೂಲಕರ ವಾತಾವರಣವಿದೆ. ಆದರೆ ತಮ್ಮ ತಮ್ಮ ರಾಜ್ಯಗಳ ರೈತರ ಹಿತಾಸಕ್ತಿಯನ್ನು ಕಾಪಾಡಬೇಕಾದ ಒತ್ತಡವೂ ಇಬ್ಬರ ಮೇಲೂ ಇದೆ.
ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗಿನಿಂದಲೇ ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಿದ್ದ ಡಿ ಕೆ ಶಿವಕುಮಾರ್ ಅವರಿಗೆ ಈ ಸಭೆ ಯೋಜನೆ ಕುರಿತ ತಮಿಳುನಾಡಿನ ಆತಂಕಗಳನ್ನು ನಿವಾರಿಸಲು ಒಂದು ಅವಕಾಶವಾಗಬಹುದು.
ಎರಡೂ ರಾಜ್ಯಗಳ ರಾಜಕೀಯ ನಾಯಕತ್ವ ಮುಕ್ತ ಮನಸ್ಸಿನಿಂದ ಪರಸ್ಪರ ಸಹಕಾರದ ಮನೋಭಾವದಲ್ಲಿ ಕಾರ್ಯನಿರ್ವಹಿಸಿದರೆ ಮಾತ್ರ ಸಂವಾದ ಯಶಸ್ವಿಯಾಗಲಿದೆ. ಅಂತಿಮವಾಗಿ ಒಮ್ಮತಕ್ಕೆ ಬರದಿದ್ದರೂ, ಎರಡೂ ರಾಜ್ಯಗಳ ಹಿತದೃಷ್ಟಿಯಿಂದ ಮಾತುಕತೆಯನ್ನು ಮುಂದುವರಿಸುವ ನಿರ್ಧಾರ ಕೈಗೊಳ್ಳಬಹುದು. ಜೊತೆಗೆ, ಎರಡೂ ರಾಜ್ಯಗಳ ರೈತರನ್ನೂ ಸಂವಾದ ಪ್ರಕ್ರಿಯೆಯಲ್ಲಿ ಭಾಗಿಯಾಗಿಸುವ ಮೂಲಕ ಪರಸ್ಪರ ವಿಶ್ವಾಸವನ್ನು ಬೆಳೆಸಬಹುದು.
ಈ ಮಾತುಕತೆಯನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಕಾವೇರಿ ಕರ್ನಾಟಕ ಮತ್ತು ತಮಿಳುನಾಡನ್ನು ಒಂದುಗೂಡಿಸುವ ಸೌಹಾರ್ದತೆಯ ಸಂಕೇತವಾಗಬೇಕು. ದೀರ್ಘಕಾಲದ ನ್ಯಾಯಾಂಗ ಹೋರಾಟಕ್ಕಿಂತ ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಎರಡು ರಾಜ್ಯಗಳ ನಾಯಕರು ಕೈಗೊಳ್ಳುವ ನಿರ್ಧಾರಗಳು ಕೋಟ್ಯಂತರ ಜನರ ಬದುಕಿಗೆ ಶಾಂತಿ ತರಬಲ್ಲವು ಎಂದು ಅಭಿಪ್ರಾಯಪಟ್ಟಿದ್ದಾರೆ.