ಯನ್ಸ್ ಇಂಟರ್‌ನ್ಯಾಷನಲ್ ಜಿಲ್ಲಾ 317A ವತಿಯಿಂದ 2026–27ನೇ ಸಾಲಿನ 'ಸಿಂಹ ಪರ್ವ' ನೂತನ ಪದಾಧಿಕಾರಿಗಳು ಹಾಗೂ ಸದಸ್ಯರ ಪ್ರತಿಜ್ಞಾವಿಧಿ ಮತ್ತು ಪದಗ್ರಹಣ ಸಮಾರಂಭ ನೆರವೇರಿತು.
ಜಿಲ್ಲಾ ಗವರ್ನ ರ್ ಲಯನ್ ಕೆ. ಈಶ್ವರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಕೆಪಿಸಿಸಿ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ರೆಡ್ಡಿ ಉದ್ಘಾಟಿಸಿದರು. ಲಯನ್ಸ್ ಸಂಸ್ಥೆ ವಿಶ್ವದಾದ್ಯಂತ ಮಾನವೀಯ ಸೇವೆಯ ಮೂಲಕ ಸಮಾಜದಲ್ಲಿ ಆಶಾಕಿರಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರೋಗ್ಯ, ಶಿಕ್ಷಣ, ಮಹಿಳಾ ಸಬಲೀಕರಣ ಹಾಗೂ ಪರಿಸರ ಸಂರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಲ್ಲಿಸುತ್ತಿರುವ ಸೇವೆ ಅನುಕರಣೀಯವಾಗಿದೆ ಎಂದು ಹೇಳಿದರು.
ಉತ್ತಮ ಸಮಾಜ ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಸರ್ಕಾರದೊಂದಿಗೆ ನಾಗರಿಕರು ಮತ್ತು ಲಯನ್ಸ್‌ನಂತಹ ಸೇವಾ ಸಂಸ್ಥೆಗಳು ಕೈಜೋಡಿಸುವುದು ಅಗತ್ಯ ಎಂದು ತಿಳಿಸಿದರು.
ಅಧ್ಯಕ್ಷೀಯ ಭಾಷಣ ಮಾಡಿದ ಜಿಲ್ಲಾ ಗವರ್ನರ್ ಲಯನ್ ಕೆ. ಈಶ್ವರನ್ ಅವರು 2026–27ನೇ ಸಾಲಿನ ಕ್ಯಾಬಿನೆಟ್ ತಂಡವಾದ 'ಟೀಮ್ ಅರಿಮಾ'ವನ್ನು ಪರಿಚಯಿಸಿ, ಸೇವೆ, ಸದಸ್ಯತ್ವ ವೃದ್ಧಿ ಹಾಗೂ ನಾಯಕತ್ವ ಅಭಿವೃದ್ಧಿಗೆ ಆದ್ಯತೆ ನೀಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
ನಾಯಕತ್ವ ಎಂದರೆ ಅಧಿಕಾರವಲ್ಲ, ಸೇವೆ, ಪರಸ್ಪರ ಆಲಿಸುವಿಕೆ, ತಂಡದ ಕೆಲಸ ಹಾಗೂ ಇತರರನ್ನು ಪ್ರೇರೇಪಿಸುವ ಜವಾಬ್ದಾರಿ ಎಂದು ತಿಳಿಸಿದ ಅವರು, ಈ ಲಯನ್ ವರ್ಷದಲ್ಲಿ ಮಿಷನ್ 1.5 ಮೂಲಕ ಸದಸ್ಯತ್ವ ವೃದ್ಧಿ, ಪರಿಣಾಮಕಾರಿ ಸೇವಾ ಯೋಜನೆಗಳ ವಿಸ್ತರಣೆ, ಹೊಸ ನಾಯಕತ್ವ ಬೆಳೆಸುವುದು ಹಾಗೂ ಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್ ಫೌಂಡೇಶನ್ (LCIF)ಗೆ ಉದಾರವಾಗಿ ಬೆಂಬಲ ನೀಡುವಂತೆ ಸದಸ್ಯರಿಗೆ ಕರೆ ನೀಡಿದರು.
ಜಿಲ್ಲೆಯ ಸಾಧನೆಗಳನ್ನು ಉಲ್ಲೇಖಿಸಿದ ಅವರು, ಕೇವಲ 22 ದಿನಗಳಲ್ಲಿ 1,022ಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ದಾಖಲಿಸಲಾಗಿದ್ದು, ಒಂದು ತಿಂಗಳೊಳಗೆ 1,000ಕ್ಕೂ ಅಧಿಕ ಸದಸ್ಯತ್ವ ನೋಂದಣಿ ನಡೆದಿರುವುದರ ಜೊತೆಗೆ ಎರಡು ಹೊಸ ಲಯನ್ಸ್ ಕ್ಲಬ್‌ಗಳು ಆರಂಭವಾಗಿ 100ಕ್ಕೂ ಹೆಚ್ಚು ಹೊಸ ಸದಸ್ಯರು ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಜಿಲ್ಲಾ 317A ವತಿಯಿಂದ ಕಿದ್ವಾಯಿ ಸ್ಮಾರಕ ಅಂಕೋಲಜಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಕೀಮೋ ಔಷಧಿಗಳ ವಿತರಣೆ, ಮೂರು ಡಯಾಲಿಸಿಸ್ ಯಂತ್ರಗಳ ಕೊಡುಗೆ ಹಾಗೂ ಗ್ರಾಮೀಣ ಸರ್ಕಾರಿ ಶಾಲೆಗಳಿಗೆ ಸೋಲಾರ್ ದೀಪಗಳ ವಿತರಣೆಗೆ ಚಾಲನೆ ನೀಡಲಾಯಿತು.