ಬೆಂಗಳೂರು: ಕಚೇರಿ ಸಮಯದಲ್ಲಿ ಎಣ್ಣೆ ಪಾರ್ಟಿ ಮಾಡಿದ ಆರೋಪದ ಮೇಲೆ ರಾಜ್ಯ ಸರ್ಕಾರ ಬುಧವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಆರು ಪಿಡಿಒಗಳು ಸೇರಿದಂತೆ ಸಿಬ್ಬಂದಿಯನ್ನು ಅಮಾನತು ಮಾಡಿದೆ.
ಅಧಿಕಾರಿಗಳು ಸಿದ್ದರಬೆಟ್ಟದ ತಪ್ಪಲಿನಲ್ಲಿ ಸಭೆ ಸೇರಿದ್ದು, ಅಲ್ಲಿ ಅವರು ಕಚೇರಿ ಸಮಯದಲ್ಲಿ ಮದ್ಯ ಮತ್ತು ಮಾಂಸ ಸೇವಿಸಿದ್ದಾರೆ. ಅಲ್ಲದೆ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿದ್ದನ್ನು ಅನುಸರಿಸಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳ ಅಭಿವೃದ್ಧಿ ಅಧಿಕಾರಿ, ಇಬ್ಬರು ಕಾರ್ಯದರ್ಶಿ ಮತ್ತು ಒಬ್ಬ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಶುಕ್ರವಾರ ಸಂಜೆ ಸಿದ್ದರಬೆಟ್ಟದ ಬಳಿ ಮದ್ಯ, ಮಾಂಸ ಸೇವಿಸಿ ಮೋಜು ಮಸ್ತಿ ಮಾಡಿದ ಬಗ್ಗೆ ಹಲವು ಮಾಧ್ಯಮಗಳಲ್ಲಿ ವಿಡಿಯೋ ಸಹಿತ ವರದಿ ಪ್ರಸಾರವಾಗಿತ್ತು.
ಮಾಧ್ಯಮಗಳ ವರದಿ ಗಮನಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಅವರು, ಪಾರ್ಟಿಯಲ್ಲಿ ಭಾಗವಹಿಸಿದವರಿಗೆ ಶೋ-ಕಾಸ್ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಬಳಿಕ ಈ ಪಾರ್ಟಿಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕಾರಣ ಕೇಳಿ ನೋಟಿಸ್ ನೀಡಲಾಗಿತ್ತು. ಕರ್ತವ್ಯದ ಸಮಯದಲ್ಲಿ ಒಂದು ಕಡೆ ಸೇರಿ ಪಾರ್ಟಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಸಚಿವರ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ವಸಂತಿ ಅಮರ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಶೋ-ಕಾಸ್ ನೋಟಿಸ್‌ಗಳನ್ನು ನೀಡಿದರು ಮತ್ತು ನಂತರ ಇಲಾಖಾ ವಿಚಾರಣೆಯವರೆಗೆ ಅವರನ್ನು ಅಮಾನತುಗೊಳಿಸಿ ಆದೇಶಿಸಿ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶಿವಗಂಗೆ ಗ್ರಾಮ ಪಂಚಾಯತ್ನ ಗಿರೀಶ್; ಅಗಳಕುಪ್ಪೆ ಗ್ರಾ. ಪಂಚಾಯತ್ನ ಹರೀಶ್, ಗೊಲ್ಲಹಳ್ಳಿ ಗ್ರಾಮ ಪಂಚಾಯತ್ನ ಪ್ರಶಾಂತ್ ಡಿ, ಮಣ್ಣೆ ಗ್ರಾಮ ಪಂಚಾಯತ್ನ ಚಿರಂಜೀವಿ, ಸೋಂಪುರ ಗ್ರಾಮ ಪಂಚಾಯತ್ನ ರವಿಶಂಕರ್, ಬೆಟ್ಟಕೋಟೆ ಗ್ರಾಮ ಪಂಚಾಯತ್ನ ದಿನೇಶ್ ಬಿ.ಎಂ, ಅಗಳಕುಪ್ಪೆ ಗ್ರೇಡ್ 1 ಕಾರ್ಯದರ್ಶಿ ಕೆಂಪರಂಗಯ್ಯ, ಬೂದಿಹಾಲ್ ಗ್ರಾಮ ಪಂಚಾಯತ್ನ ಗ್ರೇಡ್ 2 ಕಾರ್ಯದರ್ಶಿ ಗಂಗಾಧರ್, ಸೋಂಪುರ ಗ್ರಾಮ ಪಂಚಾಯತ್ನ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಮಂಜುನಾಥ್ ಅವರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ.