ವಿಧಾನಸೌಧದಲ್ಲಿ ತಮಿಳು ನಾಡು ಸಿಎಂ ವಿಜಯ್ ಸ್ವಾಗತಕ್ಕೆ ಸುಣ್ಣ ಬಣ್ಣ ಹಚ್ಚಿ ಅಲಂಕಾರ  
ರಾಜ್ಯ

ಆ.3ಕ್ಕೆ ತಮಿಳು ನಾಡು ಸಿಎಂ ವಿಜಯ್‌ ಬೆಂಗಳೂರಿಗೆ? ಶಕ್ತಿಕೇಂದ್ರ ವಿಧಾನ ಸೌಧದಲ್ಲಿ ಭರ್ಜರಿ ಸ್ವಾಗತದ ಸಿದ್ಧತೆ-Video

ಈ ಮಹತ್ವದ ಸಭೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ ನ್ನು ಸರ್ಕಾರ ನವೀಕರಿಸುವ (Refurbish) ಕಾರ್ಯ ಕೈಗೊಂಡಿದೆ.

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ಕುರಿತು ಆಗಸ್ಟ್‌ 3ರಂದು ನಡೆಯಲಿದೆ ಎಂದು ಹೇಳಲಾಗುತ್ತಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಸಭೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.

ಈ ಮಹತ್ವದ ಸಭೆಯನ್ನು ಗಮನದಲ್ಲಿಟ್ಟುಕೊಂಡು, ಬೆಂಗಳೂರು ವಿಧಾನಸೌಧದ ಕಾನ್ಫರೆನ್ಸ್ ಹಾಲ್‌ ನ್ನು ಸರ್ಕಾರ ನವೀಕರಿಸುವ (Refurbish) ಕಾರ್ಯ ಕೈಗೊಂಡಿದೆ.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ನಡುವೆ ನಡೆಯಲಿರುವ ಈ ಸಭೆ ರಾಜಕೀಯ ಹಾಗೂ ಆಡಳಿತಾತ್ಮಕವಾಗಿ ಸಾಕಷ್ಟು ಮಹತ್ವ ಪಡೆದಿದೆ. ಸಭೆಯಲ್ಲಿ ಕಾವೇರಿ ನೀರಿನ ಹಂಚಿಕೆ, ಪ್ರಸ್ತುತ ಬರ ಪರಿಸ್ಥಿತಿ ಹಾಗೂ ಎರಡೂ ರಾಜ್ಯಗಳ ನೀರಿನ ಅಗತ್ಯಗಳ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆಯಿದೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ಚರ್ಚೆ ನಡೆಸಲು ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆಗಸ್ಟ್‌ 3ರಂದು ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಆದರೆ, ಈ ಭೇಟಿಗೆ ಸಂಬಂಧಿಸಿದಂತೆ ಇನ್ನೂ ಅಧಿಕೃತ ದೃಢೀಕರಣ ದೊರೆತಿಲ್ಲ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯ್ ಅವರು ತಮ್ಮನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ ಅವರು, ತಮಿಳುನಾಡು ಮುಖ್ಯಮಂತ್ರಿ ಆಗಸ್ಟ್‌ 3ರಂದು ಬೆಂಗಳೂರಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಿದರೂ, ಅಂತಿಮ ವೇಳಾಪಟ್ಟಿ ಇನ್ನೂ ಖಚಿತವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ವಿಜಯ್ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಜೊತೆಗೆ ದೂರವಾಣಿಯಲ್ಲೂ ನನ್ನೊಂದಿಗೆ ಮಾತನಾಡಿದ್ದಾರೆ. ಅವರಿಗೆ ಸಲ್ಲಬೇಕಾದ ಗೌರವವನ್ನು ನೀಡಿ ಬೆಂಗಳೂರಿಗೆ ಆಹ್ವಾನಿಸಿದ್ದೇನೆ. ನಮ್ಮ ರಾಜ್ಯಕ್ಕೆ ಆಗಮಿಸುವ ಅತಿಥಿಗಳನ್ನು ಗೌರವದಿಂದ ಸ್ವಾಗತಿಸುವುದು ನಮ್ಮ ಕರ್ತವ್ಯ. ಅವರ ಸ್ವಾಗತಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ, ಎಂದು ಹೇಳಿದರು.

ಕಾವೇರಿ ಜಲಾನಯನ ಪ್ರದೇಶಕ್ಕೆ ಭೇಟಿ ನೀಡುವಂತೆ ಆಹ್ವಾನ

ಕಾವೇರಿ ಜಲಾನಯನ ಪ್ರದೇಶದಲ್ಲಿ ಉಂಟಾಗಿರುವ ಬರ ಪರಿಸ್ಥಿತಿಯನ್ನು ಸ್ವತಃ ವೀಕ್ಷಿಸುವಂತೆ ತಾವು ವಿಜಯ್ ಅವರಿಗೆ ಮನವಿ ಮಾಡಿರುವುದಾಗಿ ಡಿ ಕೆ ಶಿವಕುಮಾರ್ ತಿಳಿಸಿದರು.

"ಕಾವೇರಿ ಜಲಾನಯನ ಪ್ರದೇಶದ ವಾಸ್ತವ ಸ್ಥಿತಿಯನ್ನು ಸ್ವತಃ ವೀಕ್ಷಿಸುವಂತೆ ನಾನು ಅವರಿಗೆ ಮನವಿ ಮಾಡಿದ್ದೇನೆ. ವೈಮಾನಿಕ ಸಮೀಕ್ಷೆ ನಡೆಸಲು ಸರ್ಕಾರ ಅಗತ್ಯ ವ್ಯವಸ್ಥೆ ಮಾಡಲಿದೆ ಎಂದು ತಿಳಿಸಿದ್ದೇನೆ. ಅವರು ತಳಮಟ್ಟದ ವಾಸ್ತವವನ್ನು ಸ್ವತಃ ನೋಡಬೇಕು," ಎಂದು ಹೇಳಿದರು.

ಇದೇ ವೇಳೆ, ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕವು ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ನೀಡಿರುವ ನಿರ್ದೇಶನದ ವಿರುದ್ಧ ಕಾವೇರಿ ಜಲಾನಯನ ಪ್ರದೇಶದಲ್ಲಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲೇ ವಿಜಯ್ ಅವರ ಈ ಪ್ರಸ್ತಾವಿತ ಭೇಟಿ ಮಹತ್ವ ಪಡೆದಿದೆ.

ಕಾವೇರಿ ನೀರಿಗಾಗಿ 1986-87ರಲ್ಲೂ ತಮಿಳುನಾಡು ಸಚಿವರ ಬೆಂಗಳೂರು ಯಾತ್ರೆ; ಮತ್ತೆ ಇತಿಹಾಸ ಮರುಕಳಿಸುತ್ತಿದೆಯೇ?

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಆಗಸ್ಟ್‌ 3ರಂದು ಬೆಂಗಳೂರಿಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಕುತೂಹಲ ಮೂಡಿದೆ. 1980ರ ದಶಕದ ಮಧ್ಯಭಾಗದಲ್ಲಿಯೂ ಇದೇ ರೀತಿಯ ರಾಜತಾಂತ್ರಿಕ ಪ್ರಯತ್ನಗಳ ಮೂಲಕ ತಮಿಳುನಾಡು ಕಾವೇರಿ ನೀರನ್ನು ಪಡೆದಿದ್ದ ಇತಿಹಾಸವಿದೆ.

1986 ಮತ್ತು 1987ರ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ, ಆಗಿನ ತಮಿಳುನಾಡು ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (MGR) ಅವರು ತಮ್ಮ ಸಚಿವರನ್ನು ಬೆಂಗಳೂರಿಗೆ ಕಳುಹಿಸಿ, ಆಗಿನ ಕರ್ನಾಟಕ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಹಾಗೂ ಸಚಿವರೊಂದಿಗೆ ಮಾತುಕತೆ ನಡೆಸುವಂತೆ ಮಾಡಿದ್ದರು. ಉದ್ದೇಶ, ಸಾಂಬಾ ಭತ್ತದ ಬೆಳೆಯನ್ನು ಉಳಿಸಲು ಕಾವೇರಿ ನೀರು ಬಿಡುಗಡೆ ಮಾಡಿಸುವುದಾಗಿತ್ತು.

1986ರಲ್ಲಿ ಕೇಂದ್ರದ ಮಧ್ಯಸ್ಥಿಕೆಗೂ ಮನವಿ

1986ರ ಫೆಬ್ರವರಿಯಲ್ಲಿ ತಮಿಳುನಾಡಿನ ನೀರಾವರಿ ಮತ್ತು ಲೋಕೋಪಯೋಗಿ ಸಚಿವರಾದ ಪಿ.ಯು. ಶಣ್ಮುಗಂ ಹಾಗೂ ವೈ.ಎಸ್.ಎಂ. ಯೂಸುಫ್ ನಾಲ್ಕು ದಿನಗಳ ಅಂತರದಲ್ಲಿ ಪ್ರತ್ಯೇಕವಾಗಿ ಬೆಂಗಳೂರಿಗೆ ಭೇಟಿ ನೀಡಿ, ಕರ್ನಾಟಕ ಸಚಿವರು ಹಾಗೂ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಭೇಟಿಯಾಗಿದ್ದರು.

ಆ ಸಂದರ್ಭದಲ್ಲಿ ತಮಿಳುನಾಡು 10 ಟಿಎಂಸಿ ಅಡಿ (tmc ft) ನೀರನ್ನು ಬಿಡುಗಡೆ ಮಾಡುವಂತೆ ಕರ್ನಾಟಕವನ್ನು ಕೋರಿತ್ತು. ಜೊತೆಗೆ, ಕರ್ನಾಟಕವನ್ನು ಮನವೊಲಿಸುವಂತೆ ಕೇಂದ್ರ ಸರ್ಕಾರದ ಮಧ್ಯಸ್ಥಿಕೆಯನ್ನೂ ಕೋರಲಾಗಿತ್ತು.

ಆದರೆ ತೀವ್ರ ಬರ ಪರಿಸ್ಥಿತಿಯಿಂದ ಬಳಲುತ್ತಿದ್ದ ಕರ್ನಾಟಕ ಸರ್ಕಾರ, ತಮಿಳುನಾಡಿನ ಸಂಕಷ್ಟವನ್ನು ಅರ್ಥಮಾಡಿಕೊಂಡಿದ್ದರೂ ಕೂಡಲೇ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಿಲ್ಲ ಎಂದು ತಿಳಿಸಿತ್ತು.

1987ರಲ್ಲೂ ಬೆಂಗಳೂರು ಭೇಟಿ

1987ರಲ್ಲಿ ಆಗಿನ ತಮಿಳುನಾಡು ಲೋಕೋಪಯೋಗಿ ಸಚಿವ ಕೆ.ಕೆ.ಎಸ್.ಎಸ್.ಆರ್. ರಾಮಚಂದ್ರನ್ ಎರಡು ಬಾರಿ ಬೆಂಗಳೂರಿಗೆ ಭೇಟಿ ನೀಡಿ, ಆಗಿನ ಕರ್ನಾಟಕ ನೀರಾವರಿ ಸಚಿವ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿಯಾಗಿದ್ದರು.

ಆ ಸಂದರ್ಭದಲ್ಲಿ ಈಗಾಗಲೇ ಬಿಡುಗಡೆ ಮಾಡಿದ್ದ 5 ಟಿಎಂಸಿ ನೀರಿನ ಜೊತೆಗೆ ಇನ್ನೂ 25 ಟಿಎಂಸಿ ನೀರನ್ನು ತಮಿಳುನಾಡು ಕೋರಿತ್ತು.

ಮೊದಲ ಸಭೆಯಲ್ಲಿ, ಕರ್ನಾಟಕದಲ್ಲಿ ಬರ ಇದ್ದರೂ 5 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಸಿದ್ಧ ಎಂದು ದೇವೇಗೌಡ ತಿಳಿಸಿದ್ದರೂ, ರಾಜ್ಯದಲ್ಲಿ ತೀವ್ರ ವಿದ್ಯುತ್ ಕೊರತೆ ಇದ್ದ ಕಾರಣ ಅದಕ್ಕೆ ಪ್ರತಿಯಾಗಿ ತಮಿಳುನಾಡು ನಿರ್ದಿಷ್ಟ ಪ್ರಮಾಣದ ವಿದ್ಯುತ್ ಪೂರೈಸಬೇಕು ಎಂಬ ಷರತ್ತು ಮುಂದಿಟ್ಟಿದ್ದರು.

ನಂತರ ತಮಿಳುನಾಡು ಮುಖ್ಯಮಂತ್ರಿ ಎಂಜಿಆರ್ ಅವರ ಒಪ್ಪಿಗೆ ಪಡೆದ ಬಳಿಕ ರಾಮಚಂದ್ರನ್ ಮತ್ತೆ ಬೆಂಗಳೂರಿಗೆ ಬಂದು, ಆ ಪ್ರಸ್ತಾವನೆಗೆ ತಮಿಳುನಾಡು ಸಮ್ಮತಿ ಸೂಚಿಸಿದ್ದನ್ನು ತಿಳಿಸಿದ್ದರು. ಮರುದಿನ ದೇವೇಗೌಡ ಅವರು ಕರ್ನಾಟಕ ವಿಧಾನಸಭೆಯಲ್ಲಿ ಈ ಕುರಿತು ಸಂಕ್ಷಿಪ್ತ ಹೇಳಿಕೆ ನೀಡಿದ್ದರು.

ಈ ಐತಿಹಾಸಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಆಗಸ್ಟ್‌ 3ರಂದು ನಡೆಯುವ ಸಾಧ್ಯತೆಯಿರುವ ಡಿ.ಕೆ. ಶಿವಕುಮಾರ್–ಸಿ. ಜೋಸೆಫ್ ವಿಜಯ್ ಭೇಟಿ ಮತ್ತೊಮ್ಮೆ ಕಾವೇರಿ ವಿವಾದಕ್ಕೆ ಸಂಧಾನದ ಹೊಸ ದಿಕ್ಕು ತೋರಿಸಬಹುದೇ ಎಂಬ ಕುತೂಹಲ ಮೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Trump ಎಚ್ಚರಿಕೆ ಬೆನ್ನಲ್ಲೇ Iran ಮೇಲೆ ಅಮೆರಿಕ ಭೀಕರ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ, ತೈಲ ಬೆಲೆ ಭಾರೀ ಏರಿಕೆ..!

ಅಧಿವೇಶನಕ್ಕೂ ಮುನ್ನ ಬಸವರಾಜ್ ಹೊರಟ್ಟಿಗೆ ಸರ್ಕಾರ ಶಾಕ್: ಸಭಾಪತಿ ಸ್ಥಾನ ರಾಜೀನಾಮೆ ನೀಡುವಂತೆ ಸೂಚನೆ, ಸಂಘರ್ಷ ಫಿಕ್ಸ್..!

ಪಕ್ಷಾಂತರಕ್ಕೆ ಕಡಿವಾಣ ಹಾಕಲು ಕಾಂಗ್ರೆಸ್ ಮಾಸ್ಟರ್ ಪ್ಲ್ಯಾನ್: DCC ಅಧ್ಯಕ್ಷರ ನೇಮಕಕ್ಕೆ ಹೊಸ ತಂತ್ರ, ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ಫುಲ್ ಕಂಟ್ರೋಲ್...!

ಇನ್ನಿಬ್ಬರು DCM ನೇಮಕಕ್ಕೆ ಕಾಂಗ್ರೆಸ್ ಕಸರತ್ತು? 'ನನಗೂ ಅವಕಾಶ ಸಿಗುವ ವಿಶ್ವಾಸವಿದೆ' ಎಂದ ಸತೀಶ್ ಜಾರಕಿಹೊಳಿ..!

ಭಾರತಕ್ಕೆ 'ಸೇವಾ ಉತ್ಪಾದನಾ ಸೂಚ್ಯಂಕ' (ISP) ಏಕೆ ಅಗತ್ಯ? (ಹಣಕ್ಲಾಸು)