ಬೆಂಗಳೂರು: ಚೆನ್ನಾಗಿ ಮೇಕಪ್, ಡ್ರೆಸ್ ಮಾಡಿಕೊಂಡು ಕೆಲಸಕ್ಕೆ ಹೋಗುತ್ತಿದ್ದ ಪತ್ನಿಯ ಶೀಲ ಶಂಕಿಸಿದ ಪತಿಯೊಬ್ಬ ಆಕೆಯ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಯೊಂದು ನಗರದ ಕಗ್ಗಲಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ 38 ವರ್ಷದ ಭಾಗ್ಯ ಎಂದು ಗುರುತಿಸಲಾಗಿದ್ದು, ಈ ಪ್ರಕರಣ ಸಂಬಂಧ ಆಕೆಯ ಪತಿ 42 ವರ್ಷದ ಮಹದೇವ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಭಾಗ್ಯ ಅವರು ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದು, ಚೆನ್ನಾಗಿ ಮೇಕಪ್ ಮಾಡಿಕೊಳ್ಳುವುದು ಹಾಗೂ ಅಂದವಾಗಿ ಉಡುಗೆ ತೊಡುವುದು ಅವರ ದಿನನಿತ್ಯದ ಅಭ್ಯಾಸವಾಗಿತ್ತು. ಆದರೆ, ಇದೇ ವಿಚಾರವನ್ನು ಆಧಾರವಾಗಿಸಿಕೊಂಡು ಮಹದೇವ್ ಕಳೆದ ಹಲವು ವರ್ಷಗಳಿಂದ ಪತ್ನಿಯ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದ ಎನ್ನಲಾಗಿದೆ.
ಪತ್ನಿ ಯಾರೊಂದಿಗಾದರೂ ಮೊಬೈಲ್ ಫೋನ್‌ನಲ್ಲಿ ಮಾತನಾಡಿದರೆ ಜಗಳವಾಡುವುದು, ಹಲ್ಲೆ ನಡೆಸುವುದು ಹಾಗೂ ಕಿರುಕುಳ ನೀಡುವುದು ಸಾಮಾನ್ಯವಾಗಿತ್ತು ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ. ನಿರಂತರ ಕಿರುಕುಳದಿಂದ ಬೇಸತ್ತ ಭಾಗ್ಯ ಕೆಲ ದಿನಗಳ ಹಿಂದೆ ತಮ್ಮ ಸಹೋದರಿ ಸೌಮ್ಯಾ ಅವರ ಮನೆಗೆ ತೆರಳಿದ್ದರು.
ಮಂಗಳವಾರ ಪತ್ನಿಯನ್ನು ಮರಳಿ ಮನೆಗೆ ಕರೆತರಲು ಹೋದ ಮಹದೇವ್, ಕೆಲಸಕ್ಕೆ ಹೋಗಬಾರದು ಮತ್ತು ಮೊಬೈಲ್ ಬಳಸಬಾರದು ಎಂಬ ಷರತ್ತುಗಳನ್ನು ವಿಧಿಸಿದ್ದ. ಕುಟುಂಬದ ಶಾಂತಿಗಾಗಿ ಭಾಗ್ಯ ಅದಕ್ಕೆ ಒಪ್ಪಿಕೊಂಡು ಬುಧವಾರ ಮನೆಗೆ ಮರಳಿದ್ದರು.
ಆದರೆ, ಬುಧವಾರ ಬೆಳಿಗ್ಗೆ ಮತ್ತೆ ದಂಪತಿ ನಡುವೆ ವಾಗ್ವಾದ ಉಂಟಾಗಿದೆ. ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಮಹದೇವ್ ಮಲಗುವ ಕೋಣೆಯ ಬಾಗಿಲು ಹಾಕಿಕೊಂಡು ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಮನೆಯಲ್ಲಿದ್ದ ಪೋಷಕರು ಹಾಗೂ ಇಬ್ಬರು ಮಕ್ಕಳು ಬಾಗಿಲು ತೆರೆಯುವಂತೆ ಮನವಿ ಮಾಡಿದರೂ ಆತ ಸ್ಪಂದಿಸಿಲ್ಲ.
ಕೆಲವೇ ನಿಮಿಷಗಳಲ್ಲಿ ಕೋಪದ ಭರದಲ್ಲಿ ಚಾಕುವಿನಿಂದ ಭಾಗ್ಯ ಅವರ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಸುಮಾರು 20 ನಿಮಿಷಗಳ ಬಳಿಕ ಬಾಗಿಲು ತೆರೆದಾಗ ಭಾಗ್ಯ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಕಗ್ಗಲಿಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
19 ವರ್ಷಗಳ ಹಿಂದೆ ವಿವಾಹವಾಗಿದ್ದ ಈ ದಂಪತಿಗೆ 17 ಮತ್ತು 12 ವರ್ಷದ ಇಬ್ಬರು ಪುತ್ರರಿದ್ದಾರೆ. ಭಾಗ್ಯ ಅವರ ಸಹೋದರಿ ನೀಡಿದ ದೂರಿನ ಮೇರೆಗೆ ಮಹದೇವ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.