ಬೆಂಗಳೂರು: ವಿಶ್ವ ಪರಿಸರ ದಿನದ ಅಂಗವಾಗಿ ಬೆಂಗಳೂರು ಪೂರ್ವ ನಗರ ಪಾಲಿಕೆ (BECC) ವತಿಯಿಂದ ಕೆ.ಆರ್.ಪುರಂ ಮತ್ತು ದೊಡ್ಡನೆಕ್ಕುಂದಿ ವಾರ್ಡ್‌ಗಳಲ್ಲಿ ಭಾರಿ ಸ್ವಚ್ಛತಾ ಅಭಿಯಾನ ಹಾಗೂ ವೃಕ್ಷಾರೋಪಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 100 ಟನ್‌ಗಿಂತ ಹೆಚ್ಚು ತ್ಯಾಜ್ಯ ಮತ್ತು ಕಟ್ಟಡ ಅವಶೇಷಗಳನ್ನು ತೆರವುಗೊಳಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಪೂರ್ವ ನಗರ ಪಾಲಿಕೆ ಆಯುಕ್ತ ಡಿ.ಎಸ್. ರಮೇಶ್ ಅವರು, ಅಭಿಯಾನದ ವೇಳೆ 18 ಬ್ಲಾಕ್ ಸ್ಪಾಟ್‌ಗಳನ್ನು (Garbage Black Spots) ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ವಚ್ಛತಾ ಕಾರ್ಯಕ್ಕಾಗಿ 1,600ಕ್ಕೂ ಹೆಚ್ಚು ಪೌರಕಾರ್ಮಿಕರು, ಆಟೋ ಟಿಪ್ಪರ್ ಚಾಲಕರು, ಮಾರ್ಷಲ್‌ಗಳು ಹಾಗೂ ಸ್ವಯಂಸೇವಕರನ್ನು ನಿಯೋಜಿಸಲಾಗಿತ್ತು. ಜೊತೆಗೆ 14 ಟ್ರ್ಯಾಕ್ಟರ್‌ಗಳು, 6 ಟಿಪ್ಪರ್ ಲಾರಿಗಳು, 6 ಕಾಂಪ್ಯಾಕ್ಟರ್ ವಾಹನಗಳು, 20 ಆಟೋ ಟಿಪ್ಪರ್‌ಗಳು ಮತ್ತು 3 ಭೂ ಅಗೆಯುವ ಯಂತ್ರಗಳನ್ನು ಬಳಸಿಕೊಳ್ಳಲಾಯಿತು.
ಗಂಗಶೆಟ್ಟಿ ಕೆರೆ, ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಸರ್ಕಾರಿ ಆಸ್ಪತ್ರೆ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಪ್ರಮುಖ ರಸ್ತೆಗಳು, ವಾರ್ಡ್ ರಸ್ತೆಗಳು, ರಸ್ತೆ ವಿಭಜಕಗಳು, ಬಸ್ ನಿಲ್ದಾಣಗಳು, ಉದ್ಯಾನಗಳು, ಪಾದಚಾರಿ ಮಾರ್ಗಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳನ್ನು ಶುಚಿಗೊಳಿಸಲಾಯಿತು.
ಪರಿಸರ ಸಂರಕ್ಷಣೆಯ ಭಾಗವಾಗಿ ವೆಂಗಯ್ಯನ ಕೆರೆ ಪ್ರದೇಶದಲ್ಲಿ 60 ಸಸಿಗಳನ್ನು ನೆಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಿಡಗಳನ್ನು ನೆಡಲು ಅಧಿಕಾರಿಗಳಿಗೆ ಕಾರ್ಯಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.
ಇದಲ್ಲದೆ, ಹಲವು ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಗೋಡೆಗಳ ಮೇಲೆ ಪರಿಸರ ಜಾಗೃತಿ ಮೂಡಿಸುವ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳನ್ನು ರಚಿಸಲಾಗಿದೆ.
ಇದಲ್ಲದೆ, ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ಬಳಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು 26 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ. 30 ಸಾವಿರ ದಂಡ ವಸೂಲಿ ಮಾಡಿದ್ದಾರೆ.